ಬೆಂಗಳೂರು: ''ರಾಜ್ಯದ ಸಮಸ್ಯೆಗಳ ಕುರಿತು ಪ್ರಧಾನಿಗಳ ಜೊತೆ ಮಾತುಕತೆ ನಡೆಸುವುದು ಸರಿ, ಆದರೆ ಪಕ್ಷದ ಎಲ್ಲಾ ಶಾಸಕರನ್ನು ಕರೆದುಕೊಂಡು ಹೋಗಿ ಪ್ರತಿಭಟನೆ ಮಾಡುವುದು ದೊಂಬರಾಟ'' ಎಂದು ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರ ಪ್ರತಿಭಟನೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟೀಕಿಸಿದರು.
ಡಾಲರ್ಸ್ ಕಾಲೋನಿಯಲ್ಲಿನ ಧವಳಗಿರಿ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ರಾಜ್ಯದಲ್ಲಿ ತೀವ್ರತರವಾದ ಬರ ಹಾಗೂ ಎಲ್ಲಾ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಆ ನಿಟ್ಟಿನಲ್ಲಿ ಯಾವುದೇ ಕ್ರಮ ಆಗಿಲ್ಲ. ಆದರೆ, ಇದ್ಯಾವುದರ ಬಗ್ಗೆಯೂ ಗಂಭೀರವಾದ ಪರಿಹಾರ ಕ್ರಮದ ಬದಲು ದೆಹಲಿಗೆ ಎಲ್ಲ ಶಾಸಕರನ್ನು ಕರೆತಂದಿರೋದು ಎಷ್ಟು ಸರಿ'' ಎಂದು ಪ್ರಶ್ನಿಸಿದ್ದಾರೆ.
''ಬರುವ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಕ್ಷೇತ್ರಗಳನ್ನೂ ಎನ್ಡಿಎ ಅಭ್ಯರ್ಥಿಗಳು ಗೆಲ್ಲಬೇಕು ಎನ್ನುವ ಗುರಿ ಇದೆ. ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಬಹುತೇಕ ಯಶಸ್ವಿ ಆಗುವ ವಿಶ್ವಾಸ ಇದೆ. ವಿಜಯೇಂದ್ರ ರಾಜ್ಯ ಘಟಕದ ಅಧ್ಯಕ್ಷರಾದ ಮೇಲೆ, ಅವರ ಪ್ರವಾಸ, ಓಡಾಟ ಪಕ್ಷಕ್ಕೆ ದೊಡ್ಡ ಶಕ್ತಿ ನೀಡಿದೆ. ಪಕ್ಷ ಬಲಪಡಿಸಲು ಹೆಚ್ಚು ಒತ್ತು ನೀಡಿದಂತಾಗಿದೆ'' ಎಂದರು.
28 ಕ್ಷೇತ್ರಗಳಲ್ಲೂ ಗೆಲುವು: ''ಕಿಸಾನ್ ಸಮ್ಮಾನ್ ಯೋಜನೆ ರೈತರ ಅನುಕೂಲಕ್ಕೆ ಮಾಡಿದ್ದೆವು. ಅದೆಲ್ಲವನ್ನೂ ಸ್ಥಗಿತ ಮಾಡಿ, ಪುಕ್ಕಟೆ ಕಾರ್ಯಕ್ರಮ ಕೊಡುವುದಾಗಿ ಹೇಳಿಕೊಂಡು ಓಡಾಡುತ್ತಿದ್ದಾರೆ. ಬಹಳ ಮುಖ್ಯವಾಗಿ ಮೋದಿ ಅವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಕಾರ್ಯಕ್ರಮ ರೂಪಿಸಿದ್ದಾರೆ. ಎಲ್ಲಾ ವರ್ಗದ ಜನರಿಗೆ ಅನುಕೂಲ ಮಾಡಿದ್ದು, ಜನ ಮೆಚ್ಚಿದ್ದಾರೆ. ಹಾಗಾಗಿ, ಬರುವ ದಿನಗಳಲ್ಲಿ ದೇಶದ ಜನರು, ರಾಜ್ಯದ ಜನರು ಮೋದಿ ಪರವಾಗಿ ನಿಲ್ಲಲಿದ್ದಾರೆ. ರಾಜ್ಯದಲ್ಲಿ ಕೂಡ 28ಕ್ಕೆ 28 ಕ್ಷೇತ್ರ ಗೆಲ್ಲಿಸಲಿದ್ದಾರೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಡಿಯೂರಪ್ಪ ಪೆದ್ದು ಪೆದ್ದಾಗಿ ರಾಜಕೀಯ ಹೇಳಿಕೆ ಕೊಡುತ್ತಾರೆ ಎನ್ನುವ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ''ಸಿದ್ದರಾಮಯ್ಯ ಅವರು ಈಗಾಗಲೇ ದೆಹಲಿಗೆ ಹೋಗಿದ್ದಾರೆ. ಹೇಳಿದ್ದನ್ನೇ ಹೇಳಿಕೊಂಡು ಕೂತಿದ್ದಾರೆ. ಅದರ ಉದ್ದೇಶ ಪ್ರಚಾರ ತೆಗೆದುಕೊಳ್ಳುವುದೇ ಹೊರತು, ಸಮಸ್ಯೆ ಬಗೆಹರಿಸೋದಲ್ಲ. 15 ಅಥವಾ 16ನೇ ಹಣಕಾಸು ಆಯೋಗ ಇರಲಿ ಯಾವುದೇ ವಿಚಾರದಲ್ಲಿ ಅವರೇ ಅಧಿಕಾರದಲ್ಲಿ ಇದ್ದಾಗ ಪ್ರಶ್ನೆ ಉದ್ಭವ ಆಗುತ್ತದೆ'' ಎಂದರು.
ಶಾ ಜೊತೆ ಚರ್ಚಿಸಿ ಟಿಕೆಟ್ ಫೈನಲ್: "ಲೋಕಸಭಾ ಟಿಕೆಟ್ ಫೈನಲ್ ವಿಚಾರದ ಕುರಿತು ಈಗಾಗಲೇ ಚರ್ಚೆ ನಡೆಯುತ್ತಿದೆ. ಬಹುಪಾಲು ಯಾರು ಅಭ್ಯರ್ಥಿ ಆಗ್ತಾರೆ ಅಂತ ಸೂಕ್ಷ್ಮವಾಗಿ ಹೇಳಿ ಪ್ರಚಾರ ಮಾಡಲು ತಿಳಿಸಿದ್ದೇವೆ. ಫೈನಲ್ ಆಗಿ ಅಮಿತ್ ಶಾ ಅವರ ಜೊತೆ ಚರ್ಚೆ ಮಾಡಿ, ಯಾರು ಎಲ್ಲೆಲ್ಲಿ ನಿಲ್ಲಬೇಕು ಅಂತ ವಾಸ್ತವ ಸ್ಥಿತಿ ಚರ್ಚಿಸಿ ಅಂತಿಮ ಮಾಡುತ್ತೇವೆ" ಎಂದು ಅಭ್ಯರ್ಥಿ ಆಯ್ಕೆ ಸಂಬಂಧ ಯಡಿಯೂರಪ್ಪ ಸ್ಪಷ್ಟನೆ ನೀಡಿದರು.
"ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾರೆ. ಪ್ರತಿಯೊಬ್ಬರಿಗೂ 29 ರೂ.ಗಳಿಗೆ ಒಂದು ಕೆ.ಜಿ ಅಕ್ಕಿ ಕೊಡಲಾಗ್ತಿದೆ. ಎಲ್ಲ ವರ್ಗದ ಜನರಿಗೆ ಯಾವುದೇ ತೊಂದರೆ ಇಲ್ಲದೆ ಅಕ್ಕಿ ಪೂರೈಸಲಾಗುತ್ತಿದೆ. ಕ್ವಾಲಿಟಿ ಅಕ್ಕಿ ನೀಡುತ್ತಿದ್ದು, ಜನ ಸದುಪಯೋಗ ಮಾಡಿಕೊಳ್ಳಿ" ಎಂದು ಯಡಿಯೂರಪ್ಪ ಮನವಿ ಮಾಡಿದರು.
ಇದನ್ನೂ ಓದಿ: ಬರ ಪರಿಹಾರದ ಹಣ ಬಿಡುಗಡೆಗೆ ಆಗ್ರಹ: ಸಿಎಂ ಕಚೇರಿಗೆ ಬೀಗ ಹಾಕಲು ಮುಂದಾದ ಬಿಜೆಪಿ ನಾಯಕರು ವಶಕ್ಕೆ