ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಅವರು ಮತ್ತೊಮ್ಮೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.
ಹೃದಯಕ್ಕೆ ಸಂಬಂಧಿಸಿದಂತೆ ಶಸ್ತ್ರಚಿಕಿತ್ಸೆಗೆ ಒಳಪಡಬೇಕಿರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಮುಂದಿನ ವಾರ ಚೆನ್ನೈಗೆ ತೆರಳಲಿದ್ದಾರೆ.
ಮಾ. 19ರಂದು ಚೆನ್ನೈಗೆ ತೆರಳುವ ಅವರು ಮಾ. 21 ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಕುಮಾರಸ್ವಾಮಿ ಅವರಿಗೆ ಈಗಾಗಲೇ ವೈದ್ಯರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ವಿಶ್ರಾಂತಿ ಪಡೆದು ಲೋಕಸಭಾ ಚುನಾವಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಿಂದೆಯೂ ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಹೃದಯಕ್ಕೆ ಸಂಬಂಧಿಸಿದಂತೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದರ ಮಧ್ಯೆ ನವದೆಹಲಿಗೆ ತೆರಳುವ ಸಾಧ್ಯತೆ ಇದೆ. ಇತ್ತೀಚೆಗೆ ಅವರು ಲಘು ಪಾರ್ಶ್ವವಾಯು ಸಮಸ್ಯೆಗೆ ಒಳಗಾಗಿ ಚಿಕಿತ್ಸೆ ಪಡೆದಿದ್ದರು. ಈಗಾಗಲೇ ಅವರು ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.
ಮೊನ್ನೆ ಹಾಸನದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕುಮಾರಸ್ವಾಮಿ ಅವರು, ಈಗಾಗಲೇ ಎರಡು ಬಾರಿ ಹೃದಯ ಚಿಕಿತ್ಸೆ ಆಗಿದೆ. ಈಗ ಮತ್ತೆ ಆಪರೇಷನ್‍ಗೆ ಹೋಗಬೇಕಾದ ಪರಿಸ್ಥಿತಿಗೆ ಬಂದಿದ್ದೇನೆ. ನನಗೆ ನನ್ನ ಆರೋಗ್ಯಕ್ಕಿಂತ ಜನರ ಹಿತ ಮುಖ್ಯ. ಇನ್ನೊಂದು ವಾರದಲ್ಲಿ ನಾನು ಮತ್ತೆ ಅಸ್ಪತ್ರೆಗೆ ಸೇರಬೇಕು. ಮಾ. 21ಕ್ಕೆ ಆಪರೇಷನ್ ಆಗುತ್ತದೆ. ಆಪರೇಷನ್ ಆದ ಬಳಿಕ ನಾನು ಮೂರು ದಿನ ವಿಶ್ರಾಂತಿ ಪಡೆದು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವುದಾಗಿ ತಿಳಿಸಿದ್ದರು.
ಇನ್ನೊಂದೆಡೆ ತಮ್ಮ ತಂದೆಯವರು ಮೂರನೇ ಬಾರಿಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವುದನ್ನು ನೆನಪಿಸಿಕೊಂಡು ಮಂಡ್ಯದಲ್ಲಿ ಇಂದು ನಿಖಿಲ್ ಕುಮಾರಸ್ವಾಮಿ ಅವರು ಭಾವುಕರಾಗಿದ್ದಾರೆ.
ಇದನ್ನೂ ಓದಿ : ಮಂಡ್ಯವನ್ನ ಈ ಚುನಾವಣೆಯಲ್ಲಿ ಕಳೆದುಕೊಂಡರೆ ನಾವು ಇದ್ರೂ ಸತ್ತ ಹಾಗೆ: ಹೆಚ್ ಡಿ ಕುಮಾರಸ್ವಾಮಿ