ಮೈಸೂರು: ಸಂಸದ ಶ್ರೀನಿವಾಸ್ ಪ್ರಸಾದ್ ಅವರನ್ನು ಮಾಜಿ ಸಿಎಂ ಯಡಿಯೂರಪ್ಪ ಭೇಟಿಯಾಗಿ, ಆರೋಗ್ಯ ವಿಚಾರಿಸಿ ಇಂದು ಮೈಸೂರಿನಲ್ಲಿ ನಡೆಯುತ್ತಿರುವ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಬನ್ನಿ ಎಂದು ಆಹ್ವಾನ ನೀಡಿದರು.
ಯಡಿಯೂರಪ್ಪನವರ ಮನವಿಗೆ ಪ್ರತಿಕ್ರಿಯಿಸಿದ ಸಂಸದ ಶ್ರೀನಿವಾಸ್ ಪ್ರಸಾದ್, ನಾನು ಈಗಾಗಲೇ ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗಿದ್ದೇನೆ. ಹಾಗಾಗಿ ಸಮಾವೇಶದಲ್ಲಿ ಭಾಗವಹಿಸುವುದಿಲ್ಲ. ಆದರೂ ಯಡಿಯೂರಪ್ಪನಂತಹ ಹಿರಿಯ ನಾಯಕರು ವೇದಿಕೆ ಕಾರ್ಯಕ್ರಮಕ್ಕೆ ಐದು ನಿಮಿಷ ಬಂದು ಹೋಗುವಂತೆ ಮನವಿ ಮಾಡಿದ್ದಾರೆ. ಅದಕ್ಕೆ ನಾನು ನೋಡೋಣ ಎಂದು ಹೇಳಿದ್ದೇನೆ. ನರೇಂದ್ರ ಮೋದಿ ಅವರು ವಿಶ್ವ ಕಂಡ ಅತ್ಯಂತ ಒಳ್ಳೆಯ ಪ್ರಧಾನಿ. ಮೋದಿ ಅವರ ವಿರುದ್ಧ ಹಾಗೂ ಬಿಜೆಪಿ ವಿರುದ್ಧ ನಾನು ಮಾತನಾಡುವುದಿಲ್ಲ. ಅವರ ಜೊತೆ 5 ವರ್ಷ ಸಂಸದನಾಗಿ ಕೆಲಸ ಮಾಡಿದ್ದೇನೆ. ನಾನು ಕಂಡ ಅತ್ಯಂತ ಒಳ್ಳೆಯ ಪ್ರಧಾನಿ ಮೋದಿ ಎಂದು ಹೇಳಿದರು.
ಶ್ರೀನಿವಾಸ್ ಪ್ರಸಾದ್ ಅವರ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಯಡಿಯೂರಪ್ಪ, ಸಂಸದ ಶ್ರೀನಿವಾಸ್ ಪ್ರಸಾದ್ ಹಿರಿಯ ನಾಯಕರು. ಪ್ರಧಾನಿ ಮೋದಿ ಅವರ ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ್ದೇನೆ. ಐದು ನಿಮಿಷ ವೇದಿಕೆಗೆ ಬಂದು ಹೋಗಿ ಎಂದು ಹೇಳಿದ್ದೇನೆ ಎಂದು ತಿಳಿಸಿದರು.