ಹುಬ್ಬಳ್ಳಿ : ಸರ್ಕಾರ ಕ್ರಿಮಿನಲ್ಸ್ ಜೊತೆ ನಿಂತಿದೆ. ಹಾನಗಲ್ನಲ್ಲಿ ಗ್ಯಾಂಗ್ ರೇಪ್ ಆಗಿದೆ. ನೈತಿಕ ಪೊಲೀಸ್ ಗಿರಿಯಂತಹ ಪ್ರಕರಣಗಳು ಹೊರಗೆ ಬರುತ್ತಿವೆ. ಇಂತಹ ಗ್ಯಾಂಗ್ ನಿರಂತರವಾಗಿ ಆ್ಯಕ್ಟೀವ್ ಆಗಿದೆ. ಆದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಡಳಿತ ವ್ಯವಸ್ಥೆ ಸಂಪೂರ್ಣ ಅದಗೆಟ್ಟಿದೆ. ಪ್ರಕರವನ್ನು ಎಸ್‌ಐಟಿ ಗೆ ವರ್ಗಾವಣೆ ಮಾಡಿ ಎಂದು ಹೇಳಿದರೂ ಸರ್ಕಾರ ಕೊಡುತ್ತಿಲ್ಲ. ಪೋಕ್ಸೋ ಪ್ರಕರಣದಡಿ ಕೇಸ್ ದಾಖಲು ಮಾಡಿಲ್ಲ. ಸುಳ್ಳು ಮೆಡಿಕಲ್ ಎಕ್ಸಾಮ್ ಆಗಿವೆ. ಇದು ಮೆಡಿಕೋ ಲೀಗಲ್ ಕೇಸ್, ಸರ್ಕಾರ ಸಂತ್ರಸ್ತೆ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಬೇಕು. ಈ ಪ್ರಕರಣ ಸಂಬಂಧ ವಿಚಾರಿಸಲು ಶಾಸಕರಿಗೆ ಹೇಳಿದ್ದೀನಿ ಅಂತಾ ಸಿಎಂ ಹೇಳ್ತಾರೆ. ಅಂದ್ರೆ ಸರ್ಕಾರ ಸತ್ತಿದೆಯಾ? ಆರೋಗ್ಯ ಇಲಾಖೆ ಸತ್ತಿದೆಯಾ? ಎಂದು ಬೊಮ್ಮಾಯಿ ಪ್ರಶ್ನಿಸಿದರು.
ಪೊಲೀಸರೇ ಇಸ್ಪೀಟ್ ಅಡ್ಡೆಗಳನ್ನು ಸೀಜ್ ಮಾಡಿಸಿದ್ದಾರೆ. ಇದಕ್ಕೆಲ್ಲ ಕಾರಣ ಪೋಸ್ಟಿಂಗ್ನಲ್ಲಿ ಹಣ ಕೊಟ್ಟಿರೋದು. ಅಲ್ಪ ಸಂಖ್ಯಾತರಿಗೂ ನ್ಯಾಯ ಕೊಟ್ಟಿಲ್ಲ, ದಲಿತರಿಗೂ ನ್ಯಾಯ ಕೊಟ್ಟಿಲ್ಲ. ಕ್ರಿಮಿನಲ್ಗಳಿಗೆ ಸರ್ಕಾರ ರಕ್ಷಣೆ ಕೊಡುತ್ತಿದೆ. ಭ್ರಷ್ಟಾಚಾರ ಮತ್ತು ಕಾನೂನು ಸುವ್ಯವಸ್ಥೆಯ ಎರಡರ ಕಾಂಬಿನೇಷನ್ ಸರ್ಕಾರ ಎಂದು ಬೊಮ್ಮಾಯಿ ಕಿಡಿಕಾರಿದರು.
ಅಪರಾಧ ಕೃತ್ಯ ಎಸಗಿದವರಲ್ಲಿ ವೋಟ್ ಬ್ಯಾಂಕ್ ಇದೆ. ಹೀಗಾಗಿ ಅವರ ರಕ್ಷಣೆಯ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಹಾನಗಲ್ ಗ್ಯಾಂಗ್ ರೇಪ್ ಮತ್ತು ನೈತಿಕ ಪೊಲೀಸ್ ಗಿರಿ ಪ್ರಕರಣವನ್ನು ಖಂಡಿಸಿ ಇವತ್ತು ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಆದರೂ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಗ್ಯಾಂಗ್ ರೇಪ್ ಪ್ರಕರಣದಲ್ಲಿ ಸರಿಯಾದ ರೀತಿಯಲ್ಲಿ ತನಿಖೆ ನಡಯುತ್ತಿದೆ ಎನ್ನುತ್ತಿದ್ದಾರೆ. ಹಾಗಾದರೇ ಇಬ್ಬರು ಪೊಲೀಸರನ್ನು ಅಮಾನತು ಮಾಡಿದ್ದು ಏಕೆ? ಎಂದು ಪ್ರಶ್ನಿಸಿದರು.
ಸಂತ್ರಸ್ತೆಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಕೊಡವುದು ಇವರಿಂದ ಆಗಿಲ್ಲ. ಇಂತಹ ಘಟನೆಯಾದಾಗ ಸರ್ಕಾರವೇ ಸಂತ್ರಸ್ತರಿಗೆ ಚಿಕಿತ್ಸೆ ಕೊಡಿಸುವ ಕೆಲಸ ಮಾಡಬೇಕು. ಈ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಕೊಡಬೇಕೆಂದು ಹೋರಾಟ ಮಾಡುತ್ತಿದ್ದೇವೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸಹ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಾರೆ. ಹೋರಾಟಕ್ಕೆ ಸರ್ಕಾರ ಬಗ್ಗದೆ ಹೋದರೇ ಮುಂದೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಬೊಮ್ಮಾಯಿ ಎಚ್ಚರಿಸಿದರು.
ಇದನ್ನೂ ಓದಿ : ಹಾವೇರಿ: ಮತ್ತೆ ಮುನ್ನೆಲೆಗೆ ಬಂದ ನೈತಿಕ ಪೊಲೀಸ್ಗಿರಿ ಪ್ರಕರಣ; 9 ಜನರ ವಿರುದ್ಧ ಪ್ರಕರಣ