ಹಾವೇರಿ: ಬರ ಪರಿಹಾರ ಪಡೆದುಕೊಳ್ಳಲು ಇರುವ ಪದ್ಧತಿಯನ್ನು ಸರಿಯಾಗಿ ಅನುಸರಿಸದೆ ಕೇವಲ ರಾಜಕಾರಣ ಮಾಡಿಕೊಂಡು ಕಾಲಹರಣ ಮಾಡಿದರು. ರಾಜ್ಯ ಸರ್ಕಾರ ಸರಿಯಾದ ಪದ್ಧತಿಯನ್ನು ಅನುಸರಿಸಿದ್ದರೆ ಇಷ್ಟೊತ್ತಿಗೆ ಪರಿಹಾರ ಬರುತ್ತಿತ್ತು ಎಂದು ಮಾಜಿ ಸಿಎಂ ಹಾಗೂ ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬರ ಪರಿಹಾರ ಕೊಡಲ್ಲ ಎಂದು ಹೇಳಿರಲಿಲ್ಲ. ಯಾವ ಪದ್ಧತಿಯಲ್ಲಿ, ಸಮಯದಲ್ಲಿ ಮತ್ತು ಸಭೆಗಳನೆಲ್ಲ ಮಾಡಬೇಕಿತ್ತು ಎಂದರು.
ಇಡೀ ರಾಜ್ಯವನ್ನೇ ಬರಗಾಲ ಪೀಡಿತ ಎಂದು ಘೋಷಣೆ ಮಾಡಿದಾಗ ಸರ್ಕಾರ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಿತ್ತು. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಅನುಮತಿ ಪಡೆದು 3,540 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಇಷ್ಟು ದೊಡ್ಡ ಮೊತ್ತವನ್ನು ಒಂದೇ ಬಾರಿಗೆ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇನ್ನಾದರೂ ಕಾಂಗ್ರೆಸ್ ನವರು ಬರ ಪರಿಹಾರದ ವಿಚಾರದಲ್ಲಿ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಭಾವನಾತ್ಮಕ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರು ಹತಾಶರಾಗಿದ್ದಾರೆ. ಏನೇ ಪ್ರಚಾರ ಮಾಡಿದರೂ, ಜನರು ಒಲವು ತೋರಿಸುತ್ತಿಲ್ಲ, ಹೀಗಾಗಿ ಕೊನೆಯ ಅಸ್ತ್ರವಾಗಿ ಭಾವನಾತ್ಮಕವಾಗಿ ಮಾತನಾಡುತ್ತಿದ್ದಾರೆ ಎಂದ ಅವರು, ಸಂವಿಧಾನ ಬದಲಾವಣೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್‌ನವರು ಎಸ್ಸಿ, ಎಸ್ಟಿಗಳಿಗೆ ಭಯ ಹುಟ್ಟಿಸಿ ಅವರ ಮತ ಪಡೆಯಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಇಷ್ಟು ದಿನ ಅಲ್ಪಸಂಖ್ಯಾತರಿಗೆ ಭಯ ಹುಟ್ಟಿಸಿ ಅವರ ಮತ ತಗೆದುಕೊಳ್ಳುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.
ಡಿಸಿಎಂ ಡಿ. ಕೆ. ಶಿವಕುಮಾರ್ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದರೆ ಅಲ್ಪ ಸಂಖ್ಯಾತರನ್ನು ಪಾಕಿಸ್ತಾನಕ್ಕೆ ಕಳುಸುವುದಾಗಿ ಹೇಳಿಕೆ ನೀಡಿದ್ದರು. ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿ, ಬಳಿಕ 10 ವರ್ಷಗಳಿಂದ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ. ಶಿವಕುಮಾರ್ ಯಾರನ್ನಾದರೂ ಪಾಕಿಸ್ತಾನಕ್ಕೆ ಕಳುಹಿಸಿದ್ದಾರಾ?. ಬದಲಿಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ಜನರು ಬರುತ್ತಿದ್ದಾರೆ. ಕಾಂಗ್ರೆಸ್‌ನವರು ದಲಿತರಿಗೆ ಭಯ ಹುಟ್ಟಿಸಲು ಈ ರೀತಿ ಮಾತನಾಡುತ್ತಿದ್ದಾರೆ. ಆದರೆ ನಮ್ಮ ನಿಲುವು ಸ್ಪಷ್ಟವಾಗಿದೆ. ನರೇಂದ್ರ ಮೋದಿ ಪ್ರಧಾನಿಯಾಗುತ್ತಿದ್ದಂತೆ ಸಂಸತ್ ನಮ್ಮ ದೇಗುಲ, ಸಂವಿಧಾನ ನಮ್ಮ ಧರ್ಮಗ್ರಂಥ ಎಂದು ಹೇಳಿದ್ದರು ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರಕ್ಕೆ ಜನರು ಕೊಟ್ಟ ತೆರಿಗೆ ಹಣ ಎಲ್ಲ ದರೋಡೆಯಾಗಿದೆ: ಯಡಿಯೂರಪ್ಪ - B S Yediyurappa