ಬೆಂಗಳೂರು : ತಡರಾತ್ರಿ ಆನೆದಾಳಿಗೆ ಗುತ್ತಿಗೆ ಕಾವಲುಗಾರರೊಬ್ಬರು ಸಾವನ್ನಪ್ಪಿದ್ದಾರೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪಕ್ಕದ ಹಕ್ಕಿ ಪಿಕ್ಕಿ ಕಾಲೋನಿಯ ಚಿಕ್ಕಮಾದಯ್ಯ (45) ಸಾವನ್ನಪ್ಪಿದ್ದಾರೆ. ತಡರಾತ್ರಿ ಅರಣ್ಯ ಇಲಾಖೆ ನೀಡಿದ್ದ ಪಟಾಕಿ, ಬ್ಯಾಟರಿಯನ್ನಷ್ಟೇ ಹಿಡಿದು ಕಾಡಿಗಿಳಿದಿದ್ದ ಚಿಕ್ಕಮಾದಯ್ಯ ಕರ್ತವ್ಯ ನಿರತ ವಾಗಿರುವಾಗಲೇ ಆನೆ ದಾಳಿಗೆ ಒಳಗಾಗಿದ್ದಾರೆ.
ಈ ಹಿಂದೆ ಇವರ ಸಂಬಂಧಿ ಮಹಿಳೆ ಮೇಲೆ ಒಂಟಿ ಸಲಗ ದಾಳಿ ಮಾಡಿ ಕೊಂದಿತ್ತು. ಬೆಳಗ್ಗೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಘೋಷಿಸುವ ಭರವಸೆ ನೀಡಿ ಪರಿಶೀಲನೆಯಲ್ಲಿ ತೊಡಗಿದ್ದಾರೆ. ರಾತ್ರಿ ಪಾಳಯದಲ್ಲಿ ಅರಣ್ಯದಲ್ಲಿನ ಕಾಡು ಮೃಗಗಳ ನಡುವೆ ಜೀವ ಹಿಡಿದು ಹೋರಾಡುವ ಇಂತಹ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಟ ರಕ್ಷಣೆಗೂ ಒಂದು ಅಸ್ತ್ರ ಇಲ್ಲದಿರುವುದು ನಾಗರಿಕ ವಲಯದಲ್ಲಿ ಚರ್ಚೆಗೆ ಒಳಗಾಗುತ್ತಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಇತ್ತೀಚೆಗಷ್ಟೇ ಕರಡಿ ದಾಳಿಗೆ ಪ್ರಾಣಿ ಪಾಲಕ ಗಂಭೀರ ಗಾಯಗೊಂಡು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದನ್ನು ಮರೆಯುವ ಮುನ್ನ, ಇಂತಹ ಘಟನೆಗಳು ಬನ್ನೇರುಘಟ್ಟ ಅರಣ್ಯದ ಸುತ್ತಲ ಗ್ರಾಮಸ್ಥರಿಗೆ ಭೀತಿ ಮೂಡಿಸಿದೆ.
ಈಗಾಗಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸಾವನ್ನಪ್ಪಿದ ಕಾರ್ಮಿಕನನ್ನು ಸಾಗಿಸಲಾಗಿದೆ. ಆನೆ ದಾಳಿಯಿಂದಲೇ ಎರಡು ಸಾವನ್ನ ಕಂಡಿರುವ ಕುಟುಂಬದ ಆಕ್ರಂದನಕ್ಕೆ ಅರಣ್ಯ ಇಲಾಖೆ ಮೌನ ವಹಿಸಿರುವುದು ಉಳಿದ ಅರಣ್ಯ ಗುತ್ತಿಗೆ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದೆ.
ಇದನ್ನೂ ಓದಿ : ಚಾಮರಾಜನಗರ: ಎದೆ ಮೇಲೆ ಕಾಲಿಟ್ಟ ಕಾಡಾನೆ, ಅದೃಷ್ಟವಶಾತ್ ಪಾರಾದ ರೈತ