ವಿಜಯಪುರ: ಜಿಲ್ಲೆಯಲ್ಲಿ ವಿದೇಶಿ ಸೇರಿದಂತೆ ವಿವಿಧ ಕಂಪನಿಗಳು ಬಂಡವಾಳ ಹೂಡಿಕೆಗೆ ಮುಂದಾಗಿದ್ದು, ವಿವಿಧ ಕೈಗಾರಿಕೆಗಳ ಸ್ಥಾಪನೆಯಿಂದ ಐದು ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ.ಎಂ.ಬಿ.ಪಾಟೀಲ್ ಹೇಳಿದರು. ಅವರು ಜಿಲ್ಲಾಡಳಿತದಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ವಿಜಯಪುರದಲ್ಲಿ ಲುಲು ಕಂಪನಿ ಹೂಡಿಕೆ: ಲುಲು ಕಂಪನಿ ವಿಜಯಪುರದಲ್ಲಿ 300 ಕೋಟಿ ರೂ. ವೆಚ್ಚದಲ್ಲಿ ಹಣ್ಣು ಮತ್ತು ತರಕಾರಿ ಸಂಸ್ಕರಣ ಘಟಕವನ್ನು ತೆರೆಯಲು ಒಪ್ಪಿಕೊಂಡಿದೆ. ಉತ್ತರಪ್ರದೇಶ ಮೂಲದ ಬಿ.ಎಲ್. ಆಗ್ರೋ ಕಂಪನಿ ಕೂಡ ನಮ್ಮ ಜಿಲ್ಲೆಯಲ್ಲಿ ತನ್ನ ಆಹಾರ ಸಂಸ್ಕರಣಾ ಘಟಕವನ್ನು ಆರಂಭಿಸಲು ಮುಂದೆ ಬಂದಿದೆ. ಇದರಿಂದ ಬಂಡವಾಳ ಹೂಡಿಕೆಯಾಗಿ ಉದ್ಯೋಗ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಸಹಕಾರಿಯಾಗಲಿದೆ. ಜಿಲ್ಲೆಯ ಮುಳವಾಡ ಗ್ರಾಮದಲ್ಲಿ ಕೆಐಎಡಿಬಿ ಸ್ವಾಧೀನದಲ್ಲಿರುವ 1,300 ಎಕರೆ ಜಾಗದಲ್ಲಿ `ಉತ್ಪಾದನಾ ಕ್ಲಸ್ಟರ್’ ಅನ್ನು ಸ್ಥಾಪಿಸಲಾಗುತ್ತಿದೆ ಎಂದು ಸಚಿವರು ಇದೇ ವೇಳೆ ಸ್ಪಷ್ಟಪಡಿಸಿದರು.
ಹಿಂದಿನ ಸೆಪ್ಟೆಂಬರ್ - ಅಕ್ಟೋಬರ್ ತಿಂಗಳಲ್ಲಿ ಅಮೆರಿಕಕ್ಕೆ ತೆರಳಿ ಜಾಗತಿಕ ಮಟ್ಟದ ಹಲವು ಕಂಪನಿಗಳೊಂದಿಗೆ ಮಹತ್ವದ ಮಾತುಕತೆಗಳನ್ನು ನಡೆಸಿದ್ದು, ಇದರಿಂದಾಗಿ ಕರ್ನಾಟಕಕ್ಕೆ 24 ಸಾವಿರ ಕೋಟಿ ರೂ. ಆದಾಯ ಹರಿದು ಬರುವುದು ನಿಚ್ಚಳವಾಗಿದೆ. ಅದರಲ್ಲಿ 8,500 ಕೋಟಿ ಬಂಡವಾಳ ಹೂಡಲು ಕಂಪನಿಗಳು ಈಗಾಗಲೇ ಕಾರ್ಯಾರಂಭ ಮಾಡಿವೆ ಎಂದು ಮಾಹಿತಿ ನೀಡಿದರು.
ಕಳೆದ ವಾರ ಸ್ವಿಟ್ಜರ್ಲೆಂಡ್ ದೇಶದ ದಾವೋಸ್ ನಗರದಲ್ಲಿ ನಡೆದ ವಿಶ್ವ ಆರ್ಥಿಕ ಸಮಾವೇಶದಲ್ಲಿ ಎಚ್ಪಿ., ಲುಲು, ನೆಸ್ಲೆ, ಬಿಎಲ್ ಆಗ್ರೋ, ಎಚ್.ಸಿ.ಎಲ್, ಮುಂತಾದ ಕಂಪನಿಗಳೊಂದಿಗೆ ಮಾತುಕತೆ ನಡೆಸುವ ಮೂಲಕ ರಾಜ್ಯಕ್ಕೆ 22 ಸಾವಿರ ಕೋಟಿ ರೂಪಾಯಿ ಗಿಂತ ಹೆಚ್ಚಿನ ಬಂಡವಾಳ ಬರುವುದನ್ನು ಖಾತ್ರಿ ಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ವಿಜಯಪುರ ಜಿಲ್ಲೆಯ ಸದ್ಬಳಕೆಗಾಗಿ 100 ಟಿಎಂಸಿ ನೀರು ನಿಗದಿಪಡಿಸಿ, ಕೃಷ್ಣಾ ನ್ಯಾಧೀಕರಣದ ಅಂತಿಮ ಅಧಿಸೂಚನೆ ಮುಂಚೆ ಅಗತ್ಯ ಕ್ರಮ ಕೈಗೊಂಡು ತಾತ್ಕಾಲಿಕ ನೀರು ಅವಕಾಶ ಮಾಡಲಾಗಿದೆ. ಮುಳವಾಡ, ಚಿಮ್ಮಲಗಿ, ತುಬಚಿ-ಬಬಲೇಶ್ವರ ಸೇರಿದಂತೆ 10 ವಿವಿಧ ಯೋಜನೆಗಳ ಕಾಮಗಾರಿಗಳನ್ನು ಯುದ್ದೋಪಾದಿಯಲ್ಲಿ ಪೂರ್ಣಗೊಳಿಸಿ, ಮುಖ್ಯ ಕಾಲುವೆಗಳಿಗೆ ನೀರು ಹರಿಸಿ, ಕೆರೆಗಳನ್ನು ತುಂಬಿಸಿದ್ದರಿಂದ ಜಿಲ್ಲೆಯ ಜನತೆ ಬರಗಾಲದಲ್ಲಿಯೂ ನೆಮ್ಮದಿಯಿಂದ ಇದ್ದು, ಇಂದು ಗುಳೆಯ ಪ್ರಮಾಣ ಗಣನೀಯವಾಗಿ ಕುಸಿದಿದೆ ಎಂದು ವಿವರಣೆ ನೀಡಿದರು.
ನಾಡು ಕಂಡ ನಿಜವಾದ ಧರ್ಮ ಮತ್ತು ಸಮಾಜ ಸುಧಾರಕ, 12ನೇ ಶತಮಾನದ ಸಂತ ಬಸವಣ್ಣನವರನ್ನು ನಮ್ಮ ಸರಕಾರವು ಇತ್ತೀಚೆಗೆ `ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿರುವುದು ನಿಮ್ಮೆಲ್ಲರಿಗೂ ಗೊತ್ತಿದೆ. ಇದರಿಂದ ವಿಶೇಷವಾಗಿ ಅವಿಭಜಿತ ವಿಜಯಪುರ ಜಿಲ್ಲೆಗೆ ಹೆಮ್ಮೆ ತಂದಿದೆ ಎಂದು ಹೇಳಿದರು.
ಶ್ರೀ ರಾಮಂದಿರ ಉದ್ಘಾಟನೆ ಪಕ್ಷಾತೀತ ಆಗಬೇಕಿತ್ತು : ರಾಮಮಂದಿರ ಉದ್ಘಾಟನೆ ಚುನಾವಣೆ ಮೇಲೆ ಪರಿಣಾಮ ಬೀರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ್, ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ಪಕ್ಷಾತೀತ ಆಗಬೇಕಿತ್ತು. ಅದನ್ನೂ ಬಿಜೆಪಿಯವರು ಪಕ್ಷದ ಕಾರ್ಯಕ್ರಮ ರೀತಿ ಚುನಾವಣೆಗೋಸ್ಕರ ಬಿಂಬಿಸಿದರು.
ರಾಮಮಂದಿರ ಉದ್ಘಾಟನೆ ಪೊಲಿಟಿಕಲ್ ಫಂಕ್ಷನ್ ಆಯ್ತು. ಅದಕ್ಕೆ ನಮ್ಮ ವಿರೋಧವಿದೆ ಹೊರತು, ರಾಮಮಂದಿರಕ್ಕಲ್ಲ. ಆ ಕಾರಣದಿಂದ ನಾವು ಭಾಗವಹಿಸಿಲ್ಲ. ರಾಮನನ್ನು ಯಾರು ವಿರೋಧಿಸುವರು ಇಲ್ಲ. ನಾವು ರಾಮನನ್ನು ಗೌರವಿಸುತ್ತೇವೆ. ಶಿವನನ್ನು ಗೌರವಿಸುತ್ತೇವೆ. ಬುದ್ಧನನ್ನು ಗೌರವಿಸುತ್ತೇವೆ. ಅಲ್ಲಾನನ್ನು ಗೌರವಿಸುತ್ತೇವೆ. ಗುರುನಾನಕರನ್ನು, ಮಹಾವೀರರನ್ನು ನಾವು ಗೌರವಿಸುತ್ತೇವೆ. ನಾವು ಭೇದ ಮಾಡುವುದಿಲ್ಲ ಎಂದು ಎಂ ಬಿ ಪಾಟೀಲ್ ಹೇಳಿದರು.
ಮರಳಿ ಬಿಜೆಪಿ ಸೇರ್ಪಡೆಯಿಂದ ಶೆಟ್ಟರ್ ವ್ಯಕ್ತಿತ್ವಕ್ಕೆ ಬಹುದೊಡ್ಡ ಪೆಟ್ಟು: ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಿಮಗೆ ಸ್ವಂತ ಮನೆಯಿಂದ ಅನ್ಯಾಯ, ಅಪಮಾನ ಆಗಿ ಯಾಕೆ ಬಿಟ್ಟು ಬಂದ್ರಿ. ಇದನ್ನು ನಾನು ಹೇಳಬೇಕಿಲ್ಲ, ಶೆಟ್ಟರ್ ಅವರೇ ಬಿಜೆಪಿಯಿಂದ ಅನ್ಯಾಯ, ಅಪಮಾನ ಆಗಿದೆ ಅಂದಿದ್ರು. ಮೊನ್ನೆಯವರಿಗೆ ಬಿಜೆಪಿ ಅನ್ಯಾಯದ ಬಗ್ಗೆ ಹೇಳುತ್ತ ಬಂದಿದ್ದರು. ಮಾಜಿ ಮುಖ್ಯಮಂತ್ರಿ ಆಗಿದ್ದವರಿಗೆ ಒಂದು ಎಂಎಲ್ ಎ ಟಿಕೆಟ್ ಬಿಜೆಪಿ ಕೊಡಲಿಲ್ಲ. ನನ್ನ ಮಂತ್ರಿ ಮಾಡಬೇಡಿ ಎಂಎಲ್ ಎ ಟಿಕೆಟ್ ಕೊಡಿ ಅಂದಿದ್ರು. ಎಂಎಲ್ಎ ಟಿಕೆಟ್ ಕೊಡದಿದ್ದಾಗ ನಾವು ಕರೆದು ಎಂಎಲ್ಎ ಟಿಕೆಟ್ ಕೊಟ್ಟೆವು.
ಸೋತು ಮೇಲೆ ಅವರ ಗೌರವಕ್ಕೆ ತಕ್ಕಂತೆ ಚಿಂತಕರ ಚಾವಡಿ , ಎಂಎಲ್ಸಿ ಸ್ಥಾನ ಕೊಟ್ಟಿದ್ದೆವು. ಜಗದೀಶ್ ಶೆಟ್ಟರ್ ಲೋಕಸಭೆಗೆ ಬಯಿಸಿದ್ರೆ ಮುಂದೆ ಟಿಕೆಟ್ ಕನ್ಸಿಡರ್ ಮಾಡುವುದಿತ್ತು. ಇಷ್ಟೆಲ್ಲಾ ಗೌರವ ಕೊಟ್ಟ ಮೇಲೆ ಬಂದು ವಾಪಸ್ ಹೋಗಿರೋದಕ್ಕೆ ಅವರ ಘನತೆಗೆ ಶೋಭೆ ತರುವಂತಹದ್ದಲ್ಲ. ಮರಳಿ ಬಿಜೆಪಿ ಸೇರ್ಪಡೆಯಿಂದ ಜಗದೀಶ್ ಶೆಟ್ಟರ್ ಸಣ್ಣವರಾಗಿದ್ದಾರೆ. ನಮಗೇನು ಹಾನಿ ಆಗಲ್ಲ. ಇದರಿಂದ ಜಗದೀಶ್ ಶೆಟ್ಟರ್ ವ್ಯಕ್ತಿತ್ವಕ್ಕೆ ಬಹುದೊಡ್ಡ ಪೆಟ್ಟು ಬಿದ್ದಿದೆ ಎಂದು ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.