ಶಿವಮೊಗ್ಗ: ಶ್ರಾವಣ ಮಾಸ ಪ್ರಾರಂಭವಾದರೆ ಸಾಕು ಸಾಲು ಸಾಲು ಹಬ್ಬಗಳು ಬರುತ್ತವೆ. ನಾಗರ ಪಂಚಮಿಯ ನಂತರ ಬರುವ ಹಬ್ಬವೇ ವರಮಹಾಲಕ್ಷ್ಮಿ ಹಬ್ಬ. ಈ ಹಬ್ಬವನ್ನು ಮಹಿಳೆಯರು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸುತ್ತಾರೆ.
ನಾಳೆ ಹಬ್ಬದ ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗದ ಮಾರುಕಟ್ಟೆಗಳಲ್ಲಿ ವ್ಯಾಪಾರ, ವಹಿವಾಟು ಜೋರಾಗಿತ್ತು. ಹೂವು, ಹಣ್ಣು, ಬಾಳೆ ಎಲೆ, ಬಳೆ ಸೇರಿದಂತೆ ಇತರೆ ವಸ್ತುಗಳನ್ನು ಗ್ರಾಹಕರು ಖರೀದಿಸುತ್ತಿದ್ದರು.
ಹೇಗಿದೆ ಹೂ, ಹಣ್ಣುಗಳ ಬೆಲೆ?: ಸೇಬು- 200 ರೂ, ದಾಳಿಂಬೆ- 250 ರೂ, ಮೂಸುಂಬಿ- 200 ರೂ, ದ್ರಾಕ್ಷಿ- 200 ರೂ, ಸಪೋಟ- 200, ಮಿಕ್ಸ್ ಹಣ್ಣು ಕೆಜಿಗೆ 200 ರೂ.ಗೆ ಮಾರಾಟವಾಗುತ್ತಿತ್ತು.
ಮಲ್ಲಿಗೆ ಹೂವು ಮಾರಿಗೆ- 250 ರೂ, ಕಾಕಡ ಮಾರು- 250, ದುಂಡು ಮಲ್ಲಿಗೆ- 500 ರೂ, ಮಿಕ್ಸ್ ಹೂವು ಕಾಲು ಕೆಜಿಗೆ 150 ರೂ ಆಗಿದೆ.
ಬಾಳೆ ಕಂಬ ಎರಡಕ್ಕೆ 50 ರೂ, ವೀಳ್ಯದೆಲೆ ಒಂದು ಕಟ್ಟಿಗೆ 80 ರೂ, ಬಾಳೆದೆಲೆ 2ಕ್ಕೆ 10 ರೂ ಇತ್ತು. ಕಮಲದ ಹೂವು ಜೋಡಿಗೆ 50 ರೂ.ಗೆ ಮಾರಾಟ ಮಾಡಲಾಗುತ್ತಿತ್ತು.
ದರ ಏರಿಕೆಯ ಕುರಿತು ಗ್ರಾಹಕರಾದ ಶಕುಂತಲ 'ಈಟಿವಿ ಭಾರತ್' ಜೊತೆ ಮಾತನಾಡಿ, "ಮಾರುಕಟ್ಟೆಯಲ್ಲಿ ಹೂವು, ಹಣ್ಣು ಸೇರಿದಂತೆ ಎಲ್ಲವೂ ದುಬಾರಿಯಾಗಿದೆ. ಹೀಗೆಯೇ ದರ ಏರಿಕೆಯಾದರೆ ನಮ್ಮಂತಹ ಮಧ್ಯಮ ವರ್ಗದವರು ಹಬ್ಬ ಆಚರಿಸುವುದು ಹೇಗೆ?" ಎಂದು ಆತಂಕ ವ್ಯಕ್ತಪಡಿಸಿದರು.
ಇನ್ನೋರ್ವ ಗ್ರಾಹಕರಾದ ಮಹೇಶ್ ಮಾತನಾಡಿ, "ಹಬ್ಬ ಬಂದ್ರೆ ಸಾಕು ಹೂವು, ಹಣ್ಣಿನ ದರ ಏರಿಕೆ ಆಗುತ್ತದೆ. ನಿನ್ನೆ ಹೂವಿನ ದರ ಕಡಿಮೆ ಇತ್ತು. ಇಂದು ಏರಿದೆ. ಹಬ್ಬ ಅಲ್ವಾ? ದರ ಏರಿಕೆಯಾಗಿದೆ. ಆದರೂ ಹಬ್ಬ ಮಾಡಬೇಕು. ಹೀಗಾಗಿ, ಹೆಚ್ಚಿಗೆ ಏನೂ ಖರೀದಿಸದೇ ಸ್ವಲ್ಪ ಖರೀದಿ ಮಾಡುತ್ತಿದ್ದೇವೆ" ಎಂದರು.
ಗ್ರಾಹಕಿ ಮಂಜುಳಾ ಮಾತನಾಡಿ, "ಹೂವು, ಹಣ್ಣು ದರ ಏರಿಕೆ ಆಗಿರಬಹುದು. ಆದರೆ ಹಬ್ಬ ಮಾಡದಿರಲು ಆಗಲ್ಲ" ಎಂದು ತಿಳಿಸಿದರು.
ವ್ಯಾಪಾರಿ ಪ್ರಭು ಎಂಬವರು ಮಾತನಾಡಿ, "ಹೂವು, ಹಣ್ಣು ಮಂಡಿಯಲ್ಲಿ ಸಿಗುವ ದರದಂತೆ ನಾವು ಮಾರಾಟ ಮಾಡುತ್ತಿದ್ದೇವೆ. ಮಳೆಯಿಂದ ಗ್ರಾಹಕರು ಕಡಿಮೆ ಇದ್ದರು. ಆದ್ರೆ ಈಗ ಮಳೆ ಕಡಿಮೆಯಾದ ಕಾರಣ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ, ವ್ಯಾಪಾರ ಚೆನ್ನಾಗಿದೆ" ಎಂದರು.
ಇದನ್ನೂ ಓದಿ : ವರಮಹಾಲಕ್ಷ್ಮಿ ಹಬ್ಬ: ಹೂವು, ಹಣ್ಣು ತುಟ್ಟಿಯಾದ್ರೂ ಖರೀದಿಗೆ ಮುಗಿಬಿದ್ದ ಗ್ರಾಹಕರು - Varamahalakshmi Festival Price Hike