ಬೆಳಗಾವಿ: ಪ್ರವಾಹ ಜನಸಾಮಾನ್ಯರ ಬದುಕಿನ ಮೇಲಷ್ಟೇ ತನ್ನ ವಕ್ರದೃಷ್ಟಿ ಬೀರುತ್ತಿಲ್ಲ. ಮಕ್ಕಳ ಶಿಕ್ಷಣಕ್ಕೂ ಸಾಕಷ್ಟು ಅಡ್ಡಿಯುಂಟು ಮಾಡುತ್ತಿದೆ. ನದಿ ತೀರದ ಮಕ್ಕಳಿಗೆ ಪ್ರತಿವರ್ಷವೂ ಈ ಗೋಳು ತಪ್ಪಿದ್ದಲ್ಲ. ದಯವಿಟ್ಟು ತಮಗೆ ಏನಾದರೂ ವ್ಯವಸ್ಥೆ ಮಾಡಿಕೊಡುವಂತೆ ಮಕ್ಕಳು ಅಂಗಲಾಚುತ್ತಿದ್ದಾರೆ.
ಹೌದು, ಪಶ್ಚಿಮಘಟ್ಟಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಸಪ್ತನದಿಗಳು ಹರಿಯುವ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ನದಿಗಳು ಅಪಾಯದ ಮಟ್ಟ ಮೀರಿ ಹರಿದ ಪರಿಣಾಮ ಜನ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು. ಪಾಲಕರ ಜೊತೆಗೆ ಮಕ್ಕಳು ಕೂಡ ಇಲ್ಲಿಯೇ ವಾಸ್ತವ್ಯ ಹೂಡಿದ್ದರು. ನೀರು ನುಗ್ಗಿದ್ದರಿಂದ ಮನೆ ವಸ್ತುಗಳ ಜೊತೆಗೆ ಮಕ್ಕಳ ಪುಸ್ತಕಗಳಿಗೂ ಹಾನಿಯಾಗಿದೆ. ಹಾಗಾಗಿ, ಪ್ರತಿ ಬಾರಿಯೂ ಮಳೆಗಾಲದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆಯಾಗುತ್ತಿದೆ. ಅದರಲ್ಲೂ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ತೀವ್ರ ತೊಂದರೆ ಆಗುತ್ತಿದೆ.
ಕೃಷ್ಣಾ, ವೇದಗಂಗಾ, ದೂಧಗಂಗಾ ನದಿಗಳ ಪ್ರವಾಹದಿಂದ ಅಥಣಿ, ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ, ಘಟಪ್ರಭಾ ನೆರೆಯಿಂದ ಗೋಕಾಕ, ಮೂಡಲಗಿ ಹಾಗೂ ಮಲಪ್ರಭಾ ನದಿಯಿಂದ ಖಾನಾಪುರ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಒಟ್ಟು 40ಕ್ಕೂ ಅಧಿಕ ಗ್ರಾಮಗಳು ಪ್ರವಾಹ ಬಾಧಿತವಾಗಿವೆ. ಈ ಪೈಕಿ ಜಿಲ್ಲೆಯ 160ಕ್ಕೂ ಅಧಿಕ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು. ಗೋಕಾಕಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಕಾಳಜಿ ಕೇಂದ್ರದಲ್ಲಿ 6 ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ವಾಸ್ತವ್ಯ ಹೂಡಿದ್ದು, ಇಲ್ಲಿಯೇ ಸದ್ದು ಗದ್ದಲದ ನಡುವೆ ಉತ್ತಮ ಅಂಕ ಗಳಿಸುವ ಉದ್ದೇಶದಿಂದ ಅಭ್ಯಾಸ ಮಾಡುತ್ತಿದ್ದರು. ಈಗ ನೀರು ಕಡಿಮೆ ಆಗಿದ್ದರಿಂದ ವಾಪಸ್ ತಮ್ಮ ಮನೆಗಳಿಗೆ ಸಂತ್ರಸ್ತರು ತೆರಳಿದ್ದಾರೆ. ಮತ್ತೆ ಪ್ರವಾಹ ಸೃಷ್ಟಿಯಾದರೆ, ಇಲ್ಲಿಯೇ ಓಡಿಬರಬೇಕು.
ಮನೆಗಾಗಿ ಮನವಿ: ಗೋಕಾಕದ ದಾಳಿಂಬೆ ತೋಟದ ಮಜಗಾರ ಓಣಿ ವಿದ್ಯಾರ್ಥಿ ವಿದ್ಯಾಶ್ರೀ ದಿಲೀಪ ಕದಮ್ ಈಟಿವಿ ಭಾರತ ಜೊತೆಗೆ ಮಾತನಾಡಿ, ಹೊಳಿ ಬಂತು ಎಂದರೆ ಸಾಕು ಶಾಲೆಗೆ ಹೋಗಲು ತೊಂದರೆ ಆಗುತ್ತದೆ. ಪ್ರತಿ ವರ್ಷ ಇದೇ ರೀತಿ ಕಷ್ಟ ಅನುಭವಿಸುತ್ತಿದ್ದೇವೆ. ಕಷ್ಟ ಪಟ್ಟು ಓದಿ ನಮ್ಮ ತಂದೆ ತಾಯಿಗೆ ಹೆಸರು ತರಬೇಕು ಎಂದರೆ ಪ್ರವಾಹ ನಮಗೆ ಅಡ್ಡಿಯಾಗಿದೆ. ಹೊಳಿ ಬರದ ಪ್ರದೇಶದಲ್ಲಿ ತಮಗೆ ಮನೆ ಕಟ್ಟಿಸಿ ಕೊಡುವಂತೆ ಕೇಳಿಕೊಂಡರು.
ವಿದ್ಯಾಶ್ರೀ ಸಹೋದರಿ ರೇಷ್ಮಾ ಕದಮ್ ಮಾತನಾಡಿ, ಕಾಳಜಿ ಕೇಂದ್ರಗಳಲ್ಲೆ ಅಭ್ಯಾಸ ಮಾಡುತ್ತಿದ್ದೇವೆ. ದಿನವಿಡೀ ಓದುತ್ತೇವೆ. ಆದರೆ, ಇಲ್ಲಿ ಬಹಳಷ್ಟು ಜನರು ಇರೋದರಿಂದ ಗದ್ದಲದಲ್ಲಿ ಓದೋಕೆ ತೊಂದರೆ ಆಗುತ್ತಿದೆ. ದಯವಿಟ್ಟು ಸರ್ಕಾರ ನಮಗೆ ಸಹಾಯ ಮಾಡಬೇಕು. ಮನೆಯೊಂದು ಕಟ್ಟಿಸಿ ಕೊಟ್ಟರೆ ತುಂಬಾ ಉಪಕಾರ ಆಗುತ್ತದೆ ಎಂದು ಅಳಲು ತೋಡಿಕೊಂಡರು.
ಈ ಇಬ್ಬರೂ ವಿದ್ಯಾರ್ಥಿನಿಯರ ತಾಯಿ ಜಯಶ್ರೀ ಕದಮ್ ಮಾತನಾಡಿ, ನಾವು ಮೂಲತಃ ನಿಪ್ಪಾಣಿಯವರು. ಗೋಕಾಕಿನ ದಾಳಿಂಬೆ ತೋಟದ ಮಜಗಾರ ಓಣಿಯಲ್ಲಿ 20 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದೇವೆ. ಗಂಡ ಹೆಂಡತಿ ಇಬ್ಬರು ಕೂಲಿ ಮಾಡಿ, ಐದು ಮಕ್ಕಳನ್ನು ಕಷ್ಟ ಪಟ್ಟು ಓದಿಸುತ್ತಿದ್ದೇವೆ. ಆದರೆ, ಈ ಪ್ರವಾಹದಿಂದ ನಮಗೆ ಸಾಕು ಸಾಕಾಗಿ ಹೋಗಿದೆ. ನೀರು ಬಾರದ ಪ್ರದೇಶದಲ್ಲಿ ನಮಗೆ ಮನೆ ಕಟ್ಟಿಸಿ, ಮಕ್ಕಳ ಶಾಲೆಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿಕೊಂಡರು.
ಪ್ರಭಾರ ಡಿಡಿಪಿಐ ಮೋಹನಕುಮಾರ ಹಂಚಾಟಿ ಅವರನ್ನು ಸಂಪರ್ಕಿಸಿದಾಗ, ಆಯಾ ಕಾಳಜಿ ಕೇಂದ್ರಗಳಲ್ಲಿ ಪಾಠ ಮತ್ತು ಶೈಕ್ಷಣಿಕ ಚಟುಚಟಿಕೆ ಹಮ್ಮಿಕೊಳ್ಳಲು ಸೂಚಿಸಿದ್ದೇವು. ಕೆಲವೊಂದು ಕಡೆ ಶಿಕ್ಷಕರೇ ಕಾಳಜಿ ಕೇಂದ್ರಗಳಲ್ಲಿ ಇದ್ದುಕೊಂಡು ತರಗತಿಗಳನ್ನು ತೆಗೆದುಕೊಂಡಿದ್ದಾರೆ. ಈಗ ಪ್ರವಾಹ ನಿಂತಿದ್ದು, ಬಹುತೇಕ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ. ಅವರಿಗೆ ವಿಶೇಷ ತರಗತಿ ನಡೆಸಿ, ಕಲಿಕೆಯಲ್ಲಿ ಹಿಂದುಳಿಯದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಒಟ್ಟಿನಲ್ಲಿ ಮಕ್ಕಳಲ್ಲಿ ಓದುವ ಛಲ, ಹುಮ್ಮಸ್ಸಿದೆ. ಆದರೆ, ಅನುಕೂಲಕರ ಪರಿಸ್ಥಿತಿ ಇಲ್ಲ. ಸರ್ಕಾರ, ಜಿಲ್ಲಾಡಳಿತ ಎಚ್ಚೆತ್ತುಕೊಂಡು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಶ್ವತ ಪರಿಹಾರ ಕೈಗೊಳ್ಳುವ ಅವಶ್ಯಕತೆಯಿದೆ.
ಓದಿ: ಸ್ಪೀಕರ್ ಯು.ಟಿ.ಖಾದರ್ ಮುತುವರ್ಜಿ: ಶಾಸಕರ ಭವನಕ್ಕೆ ಹೊಸ ರಂಗು - Shasakara Bhavana