ಧಾರವಾಡ: ಐದು ದಿನಗಳಲ್ಲಿ ಐದು ಹತ್ಯೆ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ನೈಟ್ ರೌಂಡ್ಸ್ ಹೆಚ್ಚಿಸಿದೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ಇದೀಗ ಫುಲ್ ಹೈ ಅಲರ್ಟ್ ಆಗಿದೆ.
ಎಲ್ಲ ಪೊಲೀಸ್ ಠಾಣೆಗಳಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದು, ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಆದೇಶದಂತೆ ನೈಟ್ ರೌಂಡ್ಸ್ ಮಾಡಲಾಗುತ್ತಿದೆ. ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆ, ಉಪನಗರ ಪೊಲೀಸ್ ಠಾಣೆ, ಶಹರ ಪೊಲೀಸ್ ಠಾಣೆಯಿಂದ ಎಸಿಪಿ ಪ್ರಶಾಂತ್ ಸಿದ್ದನಗೌಡ ನೇತೃತ್ವದಲ್ಲಿ ನೈಟ್ ರೌಂಡ್ ನಡೆಸಲಾಗುತ್ತಿದೆ.
ಎಸಿಪಿ ಸಿದ್ದನಗೌಡರ್ ಅವರಿಗೆ ಉಪನಗರ ಪೊಲೀಸ್ ಠಾಣೆ ಸಿಪಿಐ ದಯಾನಂದ ಸೇಗುಣಸಿ, ವಿದ್ಯಾಗಿರಿ ಪೊಲೀಸ್ ಠಾಣೆಯ ಸಂಗಮೇಶ ದಿಡಗಿನಾಳ್ ಸಾಥ್ ನೀಡಿದ್ದಾರೆ. ಈ ಬಗ್ಗೆ ಯುವಕರಿಗೆ ಎಸಿಪಿ ಪ್ರಶಾಂತ ಸಿದ್ದನಗೌಡ ಮಾಹಿತಿ ಕೊಟ್ಟಿದ್ದಾರೆ. ಸದ್ಯ ಅವಳಿ ನಗರದಲ್ಲಿ ಕ್ರೈಂ ತಡೆಗಟ್ಟುವಲ್ಲಿ ಪೊಲೀಸರು ಕಾರ್ಯನಿರತರಾಗಿದ್ದಾರೆ. ಎಲ್ಲ ಪೊಲೀಸ್ ಠಾಣೆ ಪಿಎಸ್ಐ ಮತ್ತು ಸಿಪಿಐಗಳಿಗೆ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ವಾರ್ನ್ ಮಾಡಿದ್ದರು.
ಇದರಿಂದ ಎಚ್ಚೆತ್ತುಕೊಂಡಿರುವ ಪೊಲೀಸರು ರಾತ್ರಿ 1 ಗಂಟೆಯಾದರು ಗಸ್ತು ತಿರುಗುತ್ತಿದ್ದಾರೆ. ಧಾರವಾಡದ ಸಪ್ತಾಪೂರ, ಶ್ರಿನಗರ, ಸೇರಿದಂತೆ ಹಲವು ಕಡೆ ನೈಟ್ ವಾಚ್ ಜಾರಿಯಲ್ಲಿದೆ. ಧಾರವಾಡದಲ್ಲಿ ಸತತವಾಗಿ ಐದು ದಿನಗಳಲ್ಲಿ ಐದು ಜನರನ್ನು ಕೊಲೆ ಮಾಡಲಾಗಿತ್ತು. ನವಲೂರು ಗ್ರಾಮದಲ್ಲಿ ಎರಡು ಕೊಲೆ, ಡೈರಿ ರಸ್ತೆಯಲ್ಲೊಂದು ಕೊಲೆ, ತಾಯಿಯಿಂದ ಐದು ವರ್ಷದ ಮಗಳ ಕೊಲೆ ಸೇರಿದಂತೆ ಐದು ಕೊಲೆ ಪ್ರಕರಣಗಳು ವರದಿಯಾಗಿವೆ. ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದರ ಹಿನ್ನೆಲೆ ಪೊಲೀಸ್ ಇಲಾಖೆ ಇದೀಗ ಎಚ್ಚೆತ್ತುಕೊಂಡಿದ್ದು, ರಾತ್ರಿ ಗಸ್ತು ಹೆಚ್ಚಿಸಿದೆ.
ಇದನ್ನೂ ಓದಿ: ‘ಹಲೋ ಮೈ ಲವ್ಲಿ ಲೇಡಿ ಹೂ ಆರ್ ಯು’ ರೀಲ್ಸ್: 38 ವಿದ್ಯಾರ್ಥಿಗಳಿಗೆ ಅಮಾನತು ಶಿಕ್ಷೆ