ಹುಬ್ಬಳ್ಳಿ : ಕೇಶ್ವಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ರಮೇಶಭವನದ ಎದುರುಗಡೆಯಿರುವ ಭುವನೇಶ್ವರಿ ಜ್ಯುವೆಲ್ಲರ್ಸ್ ಅಂಗಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಅಂತರರಾಜ್ಯ ಕಳ್ಳರನ್ನು ಬಂಧಿಸಲಾಗಿದ್ದು, 77 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಕಾರು, ಗ್ಯಾಸ್ ಕಟರ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹು - ಧಾ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಹೇಳಿದ್ದಾರೆ.
ಈ ಕುರಿತು ನಗರದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಕಳ್ಳತನ ಪ್ರಕರಣದಲ್ಲಿ ಮುಂಬೈ ಮೂಲದ ಫರಾನ್ ಶೇಖ್, ಮುಖೇಶ್ ಉರ್ಫ ರಾಜು ಯಾದವ್, ಫಾತಿಮಾ ಶೇಖ್, ಅಪ್ತಾಬ್ ಅಹ್ಮದ್ ಶೇಖ್, ತಲತ್ ಶೇಖ್ ಎಂಬುವರನ್ನು ಬಂಧಿಸಿದ್ದು, ಮೂರು ಪ್ರಮುಖ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದೇವೆ. ಫರಾನ್ ಶೇಖ್ ಮೇಲೆ 15 ಪ್ರಕರಣಗಳು ಇದ್ದು, ಫಾತಿಮಾ ಶೇಖ್ ಮೇಲೆ 2 ಪ್ರಕರಣ ಸೇರಿ ಆರೋಪಿಗಳ ಮೇಲೆ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವುದು ತಿಳಿದು ಬಂದಿದೆ.
ಪ್ರಕರಣ ಭೇದಿಸಲು ಕೇಶ್ವಾಪೂರ ಪೊಲೀಸ್ ಠಾಣೆ, ಗೋಕುಲ್ ರೋಡ್ ಹಾಗೂ ಕಮರಿಪೇಟ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ ಮೂರು ತಂಡ ರಚಿಸಲಾಗಿತ್ತು. ಸುಮಾರು ಸಿಸಿಟಿವಿ ಫೂಟೇಜ್, ಆರೋಪಿಗಳ ಚಲನವಲನ ಹಾಗೂ ಮಾಹಿತಿ ಕಲೆ ಹಾಕಿ 20 ದಿನಗಳ ಕಾಲ ಮುಂಬೈ ನಗರದಲ್ಲಿ ಇದ್ದು, ಆರೋಪಿಗಳನ್ನು ಬಂಧಿಸಲಾಗಿದೆ. 55 ಲಕ್ಷ ಮೌಲ್ಯದ 780 ಗ್ರಾಂ ಬಂಗಾರ, 17 ಲಕ್ಷ ಮೌಲ್ಯದ 23.3 ಕೆಜಿ ಬೆಳ್ಳಿ ಹಾಗೂ 10 ಸಾವಿರ ನಗದು ಮತ್ತು ಕಳ್ಳತನಕ್ಕೆ ಬಳಸಿದ 5 ಲಕ್ಷ ರೂ. ಮೌಲ್ಯದ ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಬಂಗಾರದ ಅಂಗಡಿ ಮಾಲೀಕರು ತಮ್ಮ ಅಂಗಡಿಗಳ ಆಭರಣ ಹಾಗೂ ಅಂಗಡಿ ಸುರಕ್ಷತೆಗಾಗಿ ಇತ್ತೀಚಿಗೆ ವಿವಿಧ ತಂತ್ರಜ್ಞಾನ ಹಾಗೂ ವಿವಿಧ ಲಾಕರ್ಗಳು ಬಂದಿದ್ದು, ಅವುಗಳ ಬಳಕೆ ಮಾಡಿಕೊಂಡು ಎಚ್ಚರವಹಿಸಬೇಕು ಎಂದರು.
ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ ಅಂಗಡಿ ಮಾಲೀಕ : 'ಜುಲೈ ತಿಂಗಳಲ್ಲಿ 1680 ಗ್ರಾಂ ಬಂಗಾರ, 51 ಕೆಜಿ ಬೆಳ್ಳಿ, ಕಳ್ಳತನವಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ಉತ್ತಮ ಕಾರ್ಯ ಮಾಡಿದ್ದಾರೆ. ಮುಂಬೈ ಸೇರಿದಂತೆ ವಿವಿಧ ಕಡೆ ಐವರನ್ನು ಬಂಧಿಸಿ, ಆಭರಣ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಕಾರ್ಯಕ್ಕೆ ಅಭಿನಂದನೆಗಳನ್ನ ಸಲ್ಲಿಸುತ್ತೇನೆ. ನಮಗೆ ತುಂಬಾ ಸಂತೋಷವಾಗಿದೆ' ಎಂದು ಜ್ಯುವೆಲ್ಲರಿ ಅಂಗಡಿ ಮಾಲೀಕ ಜಗದೀಶ್ ಮಹಾದೇವ ದೈವಜ್ಞ ಖುಷಿ ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ. ಆರ್, ಎಸಿಪಿಗಳಾದ ಚಿಕ್ಕಮಠ, ಶಿವಪ್ರಕಾಶ್ ನಾಯ್ಕ್, ಕೇಶ್ವಾಪೂರ ಠಾಣೆ ಇನ್ಸ್ಪೆಕ್ಟರ್ ಕೆ ಎಸ್ ಹಟ್ಟಿ, ಗೋಕುಲ್ ರೋಡ್ ಇನ್ಸ್ಪೆಕ್ಟರ್ ಪ್ರವೀಣ್ ನೀಲಮ್ಮಣ್ಣವರ್, ಕಮರಿಪೇಟ್ ಇನ್ಸ್ಪೆಕ್ಟರ್ ಮಹಾಂತೇಶ ಹೂಳಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಇದ್ದರು.
ಇದನ್ನೂ ಓದಿ : Davanagere crime: ವೈದ್ಯರ ಮನೆಗೆ ಕನ್ನ; ₹22 ಲಕ್ಷ ನಗದು, ಚಿನ್ನಾಭರಣ ಕಳ್ಳತನ