ಮಂಗಳೂರು: ವಿವಿಧ ವ್ಯಕ್ತಿಗಳ ಹೆಸರಿನಲ್ಲಿ 42 ಸಿಮ್ ಕಾರ್ಡ್ ಖರೀದಿಸಿ ಬೆಂಗಳೂರಿಗೆ ತೆರಳುತ್ತಿದ್ದ ಅಪ್ರಾಪ್ತ ಸೇರಿದಂತೆ ಐವರು ಯುವಕರನ್ನು ಧರ್ಮಸ್ಥಳ ಠಾಣಾ ಪೊಲೀಸರು ಬಂಧಿಸಿದ್ದಾರೆ. ನೆರಿಯ ಗ್ರಾಮದ ಗುಂಪಕಲ್ಲು ನಿವಾಸಿ ರಮೀಝ್(20), ಬಂಟ್ವಾಳ ಪಾಂಡವಕಲ್ಲು ನಿವಾಸಿ ಅಕ್ಬರ್ ಆಲಿ (24), ಬೆಳ್ತಂಗಡಿ ಸಂಜಯನಗರ ನಿವಾಸಿ ಮೊಹಮ್ಮದ್ ಮುಸ್ತಫಾ(22), ಬೆಳ್ತಂಗಡಿ ಪಡಂಗಡಿ ನಿವಾಸಿ ಮುಹಮ್ಮದ್ ಸಾಧಿಕ್(27) ಹಾಗೂ ಬೆಳ್ತಂಗಡಿ ಕಲ್ಮಂಜ ನಿಡಿಗಲ್ ನಿವಾಸಿ 17 ವರ್ಷದ ಅಪ್ರಾಪ್ತ ಬಾಲಕ ಬಂಧಿತರು.
ಆರೋಪಿಗಳು ವ್ಯವಹಾರಕ್ಕೆಂದು ಹೇಳಿ ಬೇರೆ ಬೇರೆಯವರ ಹೆಸರಿನಲ್ಲಿ 42 ಸಿಮ್ ಕಾರ್ಡ್ ಗಳನ್ನು ಖರೀದಿಸಿದ್ದರು. ಸಿಮ್ ಕಾರ್ಡ್ ದಂಧೆಯಲ್ಲಿ ಈ ತಂಡ ತೊಡಗಿಸಿಕೊಂಡಿರುವ ಶಂಕೆಯಿದೆ. ಸದ್ಯ ಆರೋಪಿಗಳ ಬಳಿ ಇದ್ದ 42 ಸಿಮ್ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ದಂಧೆಯಲ್ಲಿ ಮತ್ತಷ್ಟು ಮಂದಿ ಸೇರಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತ ನಾಲ್ವರು ಯುವಕರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನಾಲ್ವರಿಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅಪ್ರಾಪ್ತನನ್ನು ಬಾಲ ನ್ಯಾಯಲಯಕ್ಕೆ ಹಾಜರಾಗಲು ನೋಟಿಸ್ ನೀಡಿ ತಂದೆಯೊಂದಿಗೆ ಮನೆಗೆ ಕಳುಹಿಸಲಾಗಿದೆ.
ಪ್ರಕರಣವನ್ನು ಎನ್ಐಎಗೆ ವಹಿವಂತೆ ಶಾಸಕ ಆಗ್ರಹ: ಈ ಪ್ರಕರಣವನ್ನು ಎನ್ಐಎಗೆ ವಹಿಸುವಂತೆ ಶಾಸಕ ಹರೀಶ್ ಪೂಂಜಾ ಆಗ್ರಹಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು, 'ವಾರದ ಹಿಂದೆ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿಯಲ್ಲಿ ನಡೆದ ಸ್ಫೋಟದ ನಂತರ ಈಗ ನಕಲಿ ದಾಖಲೆ ನೀಡಿ ನಲವತ್ತಕ್ಕೂ ಅಧಿಕ ಸಿಮ್ ಖರೀದಿ ಪ್ರಕರಣ ಬೆಳಕಿಗೆ ಬಂದಿದೆ. ಈ ಖರೀದಿಸಿದ ಸಿಮ್ ಗಳನ್ನು ರಾಜ್ಯ ರಾಜಧಾನಿ ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು ಎಂಬುದು ಇನ್ನೂ ಆತಂಕಕಾರಿ ವಿಚಾರ. ಇದೊಂದು ಗಂಭೀರ ಪ್ರಕರಣವಾಗಿದ್ದು, ಯಾವುದೋ ದೊಡ್ಡ ಷಡ್ಯಂತ್ರದ ಭಾಗವಾಗಿರುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಗೃಹ ಸಚಿವ ಪರಮೇಶ್ವರ್ ಅವರು, ನಿಷ್ಪಕ್ಷಪಾತ ತನಿಖೆ ನಡೆಸುವ ನಿಟ್ಟಿನಲ್ಲಿ ಈ ಕೂಡಲೇ ಎರಡೂ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ಒಪ್ಪಿಸುವಂತೆ ಒತ್ತಾಯಿಸುತ್ತೇನೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ನಿರ್ಬಂಧಿತ ಪ್ರದೇಶದಲ್ಲಿ ಡ್ರೋನ್ ಹಾರಾಟ, ವಿಡಿಯೋಗ್ರಾಫರ್ ಬಂಧನ