ಬೆಂಗಳೂರು: ಮನೆ ಮುಂದೆ ಸ್ನೇಹಿತನನ್ನು ಹತ್ಯೆಗೈದ ಐವರು ಆರೋಪಿಗಳನ್ನು ಸುಬ್ರಹ್ಮಣ್ಯಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಜನವರಿ 24ರಂದು ರಾತ್ರಿ ದರ್ಶನ್ ಎಂಬಾತನ ತಲೆ ಮೇಲೆ ಹಾಲೋಬ್ಲಾಕ್ ಇಟ್ಟಿಗೆಯಿಂದ ಹೊಡೆದು ಹತ್ಯೆಗೈದಿದ್ದ ಚಂದ್ರಶೇಖರ್ ಅಲಿಯಾಸ್ ಪ್ರೀತಂ, ಯಶವಂತ, ಪ್ರಶಾಂತ್, ಲಂಕೇಶ್ ಮತ್ತು ದರ್ಶನ್ ಎಂಬವರನ್ನು ಬಂಧಿಸಲಾಗಿದೆ.
ದರ್ಶನ್ ತಾಯಿಗೆ ಕೊಡುವಂತೆ 3 ಸಾವಿರ ರೂ ಹಣವನ್ನು ಆತನ ದೊಡ್ಡಮ್ಮ ನೀಡಿದ್ದಳು. ಆದರೆ ಅದೇ ಹಣವನ್ನು ತೆಗೆದುಕೊಂಡು ದರ್ಶನ್ ತನ್ನ ಸ್ನೇಹಿತ ನಿತಿನ್, ರಮೇಶ್ ಜೊತೆಗೆ ಬಾರ್ಗೆ ತೆರಳಿದ್ದರು. ಅದೇ ಬಾರ್ಗೆ ಆರೋಪಿಗಳಾದ ಚಂದ್ರಶೇಖರ್ ಅಲಿಯಾಸ್ ಪ್ರೀತಂ, ಯಶವಂತ, ಪ್ರಶಾಂತ್, ಲಂಕೇಶ್ ಮತ್ತು ದರ್ಶನ್ ಬಂದಿದ್ದರು. ಎಲ್ಲರೂ ಸ್ನೇಹಿತರೇ. ಆದರೆ ಪಾರ್ಟಿ ಮಧ್ಯೆ ನಿತಿನ್ ಹಾಗೂ ಪ್ರೀತಂ ನಡುವೆ ಗಲಾಟೆಯಾಗಿತ್ತು.
ಬಳಿಕ ದರ್ಶನ್ ಹಾಗೂ ನಿತಿನ್ ಸ್ನೇಹಿತ ರಮೇಶ್ ಮನೆ ಬಳಿ ಬಂದಿದ್ದರು. ಪ್ರೀತಂ ಹಾಗೂ ಆರೋಪಿಗಳ ತಂಡ ಸಹ ರಮೇಶ್ ಮನೆ ಬಳಿ ಬಂದಿತ್ತು. ಈ ವೇಳೆ ನಿತಿನ್ ಹಾಗೂ ಪ್ರೀತಂ ನಡುವೆ ಗಲಾಟೆಯಾಗಿತ್ತು. ಆಗ ನಿತಿನ್ಗೆ ಪ್ರೀತಂ ಹೊಡೆದಿದ್ದಾನೆ. ಮಧ್ಯಪ್ರವೇಶಿಸಿದ್ದ ದರ್ಶನ್, ನಿತಿನ್ಗೆ ಹೊಡೆದಿದ್ದನ್ನು ಪ್ರಶ್ನಿಸಿದ್ದಾನೆ. ಸಿಟ್ಟಿಗೆದ್ದ ಪ್ರೀತಂ 'ನಿನ್ನಿಂದಲೇ ಇಷ್ಟೆಲ್ಲಾ ಆಗಿದ್ದು' ಎಂದು ದರ್ಶನ್ ತಲೆ ಮೇಲೆ ಹಾಲೋಬ್ಲಾಕ್ ಇಟ್ಟಿಗೆಯಿಂದ ಹೊಡೆದಿದ್ದನು. ತೀವ್ರವಾಗಿ ಗಾಯಗೊಂಡಿದ್ದ ದರ್ಶನ್ ಸ್ಥಳದಲ್ಲೆ ಮೃತಪಟ್ಟಿದ್ದನು. ಘಟನೆಯ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಸುಬ್ರಹ್ಮಣ್ಯಪುರ ಠಾಣಾ ಪೊಲೀಸರು ಪ್ರಮುಖ ಆರೋಪಿ ಪ್ರೀತಂ ಸೇರಿದಂತೆ ಐವರು ಆರೋಪಿಗಳನ್ನ ಬಂಧಿಸಿದ್ದಾರೆ.
ಅಂಗಡಿಗಳ ಶಟರ್ ಮುರಿದು ಕಳ್ಳತನ, ಆರೋಪಿಗಳ ಬಂಧನ: ಅಂಗಡಿಗಳ ರೋಲಿಂಗ್ ಶಟರ್ ಮುರಿದು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಲ್ಲೇಶ್ವರಂ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆದಿತ್ಯ ಹಾಗೂ ವರುಣ್ ಬಂಧಿತ ಆರೋಪಿಗಳು. ಜನವರಿ 7ರಂದು ಮಲ್ಲೇಶ್ವರಂನ ಸಂಪಿಗೆ ರಸ್ತೆಯ 15ನೇ ಕ್ರಾಸ್ನಲ್ಲಿರೋ ಅಂಗಡಿ ಶಟರ್ ಒಡೆದಿದ್ದ ಆರೋಪಿಗಳು, ಅಂಗಡಿಯಲ್ಲಿದ್ದ ಹಣ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 40 ಸಾವಿರ ರೂ ನಗದು, ಒಂದು ದ್ವಿಚಕ್ರ ವಾಹನ, ಎರಡು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿದ್ದಾರೆ. ಬಂಧಿತರು ಇದೇ ರೀತಿ ನಗರದ ಹತ್ತಕ್ಕೂ ಅಧಿಕ ಕಡೆಗಳಲ್ಲಿ ಕೃತ್ಯ ಎಸಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ಮೈಸೂರು: ಹುಡುಗಿ ಚುಡಾಯಿಸಿದ್ದಕ್ಕೆ ಗಲಾಟೆ, ಯುವಕನ ಕೊಲೆ