ಮೈಸೂರು: 50:50 ಸೈಟ್ ಹಂಚಿಕೆ ಹಗರಣ ಬೆಳಕಿಗೆ ಬಂದ ನಂತರ ಇದೇ ಮೊದಲ ಬಾರಿಗೆ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ನೇತೃತ್ವದಲ್ಲಿ ಮುಡಾ ಸಭೆ ಕರೆಯಲಾಗಿದೆ. ಕಳೆದ 10 ತಿಂಗಳಿನಿಂದ ಮುಡಾ ಸಾಮನ್ಯ ಸಭೆ ನಡೆದಿಲ್ಲ. ಇದರಿಂದ ಜನ ಸಾಮಾನ್ಯರಿಗೆ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ಇಂದು ಸಭೆ ಕರೆದು, ಚರ್ಚಿಸಲಾಗುತ್ತಿದೆ. ಸಭೆಯಲ್ಲಿ ಶಾಸಕರಾದ ಹರೀಶ್ ಗೌಡ, ಶ್ರೀವತ್ಸ್ ಹಾಗೂ ಜಿ.ಟಿ. ದೇವೇಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಸಭೆಗೂ ಮುನ್ನ ಜಿಲ್ಲಾಧಿಕಾರಿ ಮತ್ತು ಶಾಸಕರು ಮಾಧ್ಯಮಗಳ ಜೊತೆ ಮಾತನಾಡಿದರು. "ಇವತ್ತು ಮುಡಾದಲ್ಲಿ ಸಾಮಾನ್ಯ ಸಭೆ ನಡೆಯುತ್ತಿದೆ. ಸಭೆಯಲ್ಲಿ ಯಾವುದೇ ವಿಶೇಷ ಅಜೆಂಡಾ ಇಲ್ಲ. ಜನ ಸಾಮಾನ್ಯರ ಒತ್ತಾಯದ ಮೇರೆಗೆ ಹಾಗೂ ಜನರಿಗೆ ಆಗುತ್ತಿರುವ ತೊಂದರೆಗಳ ಪರಿಹಾರಕ್ಕಾಗಿ ಮುಡಾದ ಇಂದಿನ ಸಾಮಾನ್ಯ ಸಭೆ ನಡೆಯುತ್ತಿದೆ. ಈ ಸಾಮಾನ್ಯ ಸಭೆಗೆ ಮುಡಾದ ಎಲ್ಲಾ ಸದಸ್ಯರು ಬರಲು ಅವಕಾಶವಿದೆ" ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಪ್ರತಿಕ್ರಿಯೆ ನೀಡಿದರು.
"ಮುಡಾ ಹಗರಣದ ಬಗ್ಗೆ ಜಾರಿ ನಿರ್ದೇಶನಾಲಯ ಸರಿಯಾಗಿ ತನಿಖೆ ಮಾಡುತ್ತಿದೆ. ಆದರೆ ಲೋಕಾಯುಕ್ತ ಸರಿಯಾಗಿ ತನಿಖೆ ಮಾಡುತ್ತಿಲ್ಲ. ಹಗರಣದಲ್ಲಿ ಎರಡನೇ ಆರೋಪಿ ಪಾರ್ವತಿ ಸಿದ್ದರಾಮಯ್ಯ ವಿಚಾರಣೆಯನ್ನು ಗೌಪ್ಯವಾಗಿ ಇಟ್ಟಿದ್ದೇಕೆ? ಇದು ಮುಡಾದ ತನಿಖೆ ಬಗ್ಗೆ ಅನುಮಾನ ಉಂಟು ಮಾಡಿದೆ. ಇಂದಿನ ಮುಡಾದ ಸಾಮಾನ್ಯ ಸಭೆಯಲ್ಲಿ 172 ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಇದರ ಜತೆಗೆ ಹಲವಾರು ಹೊಸ ಬಡಾವಣೆಗಳ ನಕ್ಷೆ ಅನುಮೋದನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಗುವುದು" ಎಂದು ಬಿಜೆಪಿ ಶಾಸಕ ಶ್ರೀವತ್ಸ್ ಹೇಳಿದರು.
"ಇಂದಿನ ಸಾಮಾನ್ಯ ಸಭೆಯಲ್ಲಿ ಹಲವಾರು ವಿಚಾರಗಳು ಚರ್ಚೆಗೆ ಬರಲಿದ್ದು, ನಾನು 50:50 ಅನುಪಾತದಲ್ಲಿ ನಿವೇಶನ ಹಂಚಿಕೆ, ಪ್ರಕ್ರಿಯೆ ರದ್ದು ಮಾಡಿ ಎಂದು ಹೇಳುವುದಿಲ್ಲ. ಅಕ್ರಮವಾಗಿ ಹಂಚಿಕೆಯಾಗಿರುವ 50:50 ಅನುಪಾತದ ನಿವೇಶನ ವಾಪಸ್ ಪಡೆಯಿರಿ ಎಂದು ಹೇಳುತ್ತೇನೆ. ಈ 50:50 ಬದಲಿ ನಿವೇಶನ ಹಂಚಿಕೆಯಿಂದ ಮುಡಾ ಹಾಗೂ ಗೃಹಮಂಡಳಿಗೆ ಅನುಕೂಲವಾಗಲಿದೆ" ಎಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅಭಿಪ್ರಾಯಪಟ್ಟರು.
"ಮುಡಾ ಪ್ರಕರಣದಿಂದ ಇಡೀ ಮೈಸೂರಿಗೆ ಕಳಂಕ ಬಂದಿದೆ. ಈ ಕಳಂಕವನ್ನು ತೊಳೆಯುವ ಕೆಲಸ ಈಗ ಮಾಡಬೇಕು. ಯಾರೋ ಒಬ್ಬರು ಮಾಡಿದ ತಪ್ಪಿಗೆ, ಎಲ್ಲರನ್ನು ಅನುಮಾನದಿಂದ ನೋಡುವ ಪರಿಸ್ಥಿತಿ ಈಗ ಬಂದಿದೆ. ಈ ವಿಚಾರದಲ್ಲಿ ನನಗೆ ಮಾನಸಿಕವಾಗಿ ನೋವಾಗಿದೆ. ನಿನ್ನೆ ಮುಖ್ಯಮಂತ್ರಿಗಳು ಈ ನೆಲದ ಕಾನೂನಿಗೆ ಗೌರವ ಕೊಟ್ಟು, ವಿಚಾರಣೆಗೆ ಬಂದಿದ್ದಾರೆ. ಮುಖ್ಯಮಂತ್ರಿಗಳು ಮುಡಾ ಸ್ವಚ್ಛಗೊಳಿಸುವ ಕೆಲಸ ಮಾಡಬೇಕು" ಎಂದು ಕಾಂಗ್ರೆಸ್ ಶಾಸಕ ಹರೀಶ್ ಗೌಡ ಪ್ರತಿಕ್ರಿಯೆ ನೀಡಿದರು.
"2020 ರಿಂದ 2024 ರ ವರೆಗೆ 50:50 ಅನುಪಾತದಲ್ಲಿ ಮುಡಾ ನೀಡಿರುವ ಎಲ್ಲಾ ಸೈಟ್ಗಳನ್ನ ತಕ್ಷಣ ಸರ್ಕಾರ ಜಪ್ತಿ ಮಾಡಬೇಕು. ದೇಸಾಯಿ ಆಯೋಗದ ತನಿಖಾ ವರದಿ ಬಂದ ಮೇಲೆ ನ್ಯಾಯ ಸಮ್ಮತ ಸೈಟ್ಗಳನ್ನ ವಾಪಸ್ ಕೊಡಲಿ. ಅಲ್ಲಿವರೆಗೆ ಒಟ್ಟಾರೆ ಎಲ್ಲಾ ನಿವೇಶನಗಳನ್ನು ಸದ್ಯಕ್ಕೆ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿ. ಜೊತೆಗೆ ಸಿದ್ದರಾಮಯ್ಯ ಪತ್ನಿ ಆರೋಪ ಬಂದ ನಂತರ ಸೈಟ್ಗಳನ್ನ ವಾಪಸ್ ನೀಡಿದ ಹಾಗೇ ಎಲ್ಲರೂ ನಿವೇಶನಗಳನ್ನ ವಾಪಸ್ ನೀಡಲಿ" ಎಂದು ಕಾಂಗ್ರೆಸ್ ಶಾಸಕ ಹರೀಶ್ ಗೌಡ ಹೇಳಿಕೆ ನೀಡಿದರು.
ಇದನ್ನೂ ಓದಿ: ವಿಚಾರಣೆಯಲ್ಲಿ ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿರುವೆ: ಸಿದ್ದರಾಮಯ್ಯ