ಶಿವಮೊಗ್ಗ: ಚಲಿಸುತ್ತಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಬಸ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಇಂದು ನಡೆಯಿತು. ಭಟ್ಕಳದಿಂದ ಬೆಂಗಳೂರಿಗೆ ಹೊರಟಿದ್ದ ಬಸ್ ಸಾಗರದ ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.
ಬಸ್‌ನಲ್ಲಿ 12 ಜನ ಪ್ರಯಾಣಿಕರಿದ್ದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ಬಸ್ನಿಂದ ಇಳಿದಿದ್ದಾರೆ. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸಿ ಸಂಭಾವ್ಯ ಅಪಾಯ ತಪ್ಪಿಸಿದ್ದಾರೆ.
ಎಲ್ಲ ಪ್ರಯಾಣಿಕರು ಹಾಗೂ ವಾಯುವ್ಯ ಸಾರಿಗೆ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ. ಬಸ್‌ನಲ್ಲಿ ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ.
ಘಟನಾ ಸ್ಥಳಕ್ಕೆ ಸಾಗರ ಟೌನ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಸ್ನಲ್ಲಿದ್ದ ಪ್ರಯಾಣಿಕರಿಗೆ ಪರ್ಯಾಯ ಬಸ್ ವ್ಯವಸ್ಥೆ ಮಾಡಲಾಯಿತು.
ಇದನ್ನೂ ಓದಿ : ಐರಾವತ ಬಸ್‌ನಲ್ಲಿ ಬೆಂಕಿ: ಕೆಸರು, ಮಣ್ಣು, ನೀರೆರಚಿ ಅನಾಹುತ ತಪ್ಪಿಸಿದ ಸ್ಥಳೀಯರು - KSRTC Bus Catches Fire