ಬೆಂಗಳೂರು: ಬಿಸಿಲ ಧಗೆಗೆ ದಿಢೀರ್ ಬೆಂಕಿ ಕಾಣಿಸಿಕೊಂಡು ಅನಾಹುತ ಸಂಭವಿಸುತ್ತದೆ. ಇಂಥದ್ದೇ ಘಟನೆ ನಗರದ ಗೋದಾಮೊಂದರಲ್ಲಿ ನಡೆದಿದ್ದು, ಕೋಟ್ಯಾಂತರ ರೂಪಾಯಿ ಮೌಲ್ಯದ ವಸ್ತುಗಳು ಅಗ್ನಿಗೆ ಆಹುತಿಯಾಗಿವೆ.
ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೈರತಿ ಎಂಬಲ್ಲಿನ ಗಾಯತ್ರಿ ಅಸೋಸಿಯೇಟ್ ಗೋದಾಮಿನಲ್ಲಿ ಇಂದು ಮುಂಜಾವು ಸುಮಾರು ನಾಲ್ಕು ಗಂಟೆಯ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಅಗ್ನಿ ಗೋದಾಮು ಪೂರ್ತಿ ಆವರಿಸಿಕೊಂಡಿತು. ಉಗ್ರಾಣದಲ್ಲಿದ್ದ ಅಪಾರ ಮೌಲ್ಯದ ದಿನಬಳಕೆಯ ವಸ್ತುಗಳು ಸುಟ್ಟು ಕರಕಲಾಗಿವೆ. ಮಾಹಿತಿ ಆಧರಿಸಿ ಸ್ಥಳಕ್ಕೆ ದೌಡಾಯಿಸಿದ 9 ಅಗ್ನಿಶಾಮಕ ವಾಹನಗಳಿಂದ ಸಿಬ್ಬಂದಿ ನಿರಂತವಾಗಿ ಅಗ್ನಿ ನಂದಿಸಿ ಪರಿಸ್ಥಿತಿಯನ್ನು ತಹಬದಿಗೆ ತಂದರು.
ಪ್ರಾಥಮಿಕ ಮಾಹಿತಿ ಪ್ರಕಾರ, ಗಾಯತ್ರಿ ಅಸೋಸಿಯೇಟ್ ಗೋದಾಮಿನಲ್ಲಿ ಡಿ ಮಾರ್ಟ್ ಸೇರಿದಂತೆ ನಗರದ ಹಲವು ಸೂಪರ್ ಮಾರ್ಕೆಟ್ಗಳಿಗೆ ಸರಬರಾಜು ಮಾಡಲು ದಿನಬಳಕೆಯ ಸಾಮಗ್ರಿಗಳನ್ನು ಸಂಗ್ರಹಿಸಿಡಲಾಗಿತ್ತು.
ಇನ್ನು, ಅಗ್ನಿ ಅವಾಂತರಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಶಾರ್ಟ್ ಸಕ್ಯೂರ್ಟ್ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.
ಬೆಂಕಿ ನಂದಿಸಲು ಸ್ಥಳೀಯ ಅಪಾರ್ಟ್ಮೆಂಟ್ಗಳಿಂದ ನೀರು: ತ್ವರಿತಗತಿಯಲ್ಲಿ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯ ಅಪಾರ್ಟ್ಮೆಂಟ್ಗಳ ಟ್ಯಾಂಕ್ ಹಾಗೂ ಈಜುಕೊಳದಲ್ಲಿದ್ದ ನೀರನ್ನು ಟ್ಯಾಂಕರ್ ಮೂಲಕ ತರಿಸಿಕೊಂಡರು. ಮಾನ್ಯತಾ ಟೆಕ್ ಪಾರ್ಕ್, ಭಾರತಿ ಸಿಟಿ, ಪೂರ್ವಂಕಾರ ಅಪಾರ್ಟ್ಮೆಂಟ್ಗಳಿಂದಲೂ ಅಗ್ನಿಶಾಮಕ ಸಿಬ್ಬಂದಿ ನೀರು ಪಡೆದು ಬೆಂಕಿ ನಂದಿಸಿದರು.
ಗೋದಾಮಿನ ಮಾಲೀಕ ಸಂತೋಷ್ ಪ್ರತಿಕ್ರಿಯಿಸಿ, "ದೇವರ ದಯೆಯಿಂದ ಯಾರಿಗೂ ಯಾವುದೇ ಹಾನಿ ಸಂಭವಿಸಿಲ್ಲ. ಬೆಂಕಿ ನಂದಿಸಲು ಅಕ್ಕಪಕ್ಕದವರು ಸಹಕಾರ ನೀಡಿದ್ದಾರೆ. ನಿನ್ನೆ ಭಾನುವಾರವಾಗಿದ್ದರಿಂದ ಯಾರೂ ಸಹ ಗೋದಾಮಿನಲ್ಲಿ ಕೆಲಸ ಮಾಡುತ್ತಿರಲಿಲ್ಲ. ತನಿಖೆಯ ನಂತರವೇ ಕಾರಣ ಹೊರಬರಬೇಕಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಗೋದಾಮಿನಲ್ಲಿದ್ದವು" ಎಂದು ಮಾಹಿತಿ ನೀಡಿದರು.
ಅಗ್ನಿಶಾಮಕ ಇಲಾಖೆಯ ನಿರ್ದೇಶಕ ಶಿವಶಂಕರ ರೆಡ್ಡಿ ಮಾತನಾಡಿ, "ಮುಂಜಾನೆ 3.30ರ ವೇಳೆ ಬೆಂಕಿ ಕಾಣಸಿಕೊಂಡಿದೆ. ಫುಡ್ ಪ್ರಾಡಕ್ಟ್ಗಳನ್ನು ಶೇಖರಿಸಿಟ್ಟಿದ್ದ ಗೋದಾಮು ಇದಾಗಿದ್ದು ಅಕ್ಕಿ, ಬೇಳೆ, ಗೋದಿ ಹಿಟ್ಟು, ಅಡುಗೆ ಎಣ್ಣೆ ಹೀಗೆ ಬಗೆಬಗೆಯ ದಿನಸಿ ಸಾಮಗ್ರಿಗಳನ್ನು ಶೇಖರಿಸಿಡಲಾಗಿತ್ತು. ತ್ವರಿತಗತಿಯಲ್ಲಿ ಬೆಂಕಿ ಆರಿಸಲು ಸ್ಥಳೀಯ ಅಪಾರ್ಟ್ಮೆಂಟ್ಗಳ ಈಜುಕೊಳದಿಂದ ನೀರು ತರಿಸಿಕೊಳ್ಳಲಾಯಿತು" ಎಂದು ತಿಳಿಸಿದರು.
ಇದನ್ನೂ ಓದಿ: ರಾಯಚೂರು: ಆಕಸ್ಮಿಕ ಬೆಂಕಿಯಿಂದ ಮೇವಿನ ಬಣವೆಗಳು ಸುಟ್ಟು ಕರಕಲು