ಬೆಂಗಳೂರು: ಪರಿಚಿತ ಮಹಿಳೆಯ ಫೋಟೋಗಳನ್ನು ಮಾರ್ಫ್ ಮಾಡಿ, ಆಕೆಯ ತಾಯಿಯಿಂದ ಹಣ ಪೀಕುತ್ತಿದ್ದ ಆರೋಪಿಯ ವಿರುದ್ಧ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಜೈಲಿನಲ್ಲಿರುವ ರೌಡಿ ಶೀಟರ್ ಮನೋಜ್ ಅಲಿಯಾಸ್ ಕೆಂಚ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರುದಾರ ಮಹಿಳೆಗೆ ಕಳೆದ ವರ್ಷ ಆಗಸ್ಟ್‌ನಲ್ಲಿ ಆರೋಪಿ ತನ್ನ ನಂಬರ್ನಿಂದ ವಾಟ್ಸ್ಆ್ಯಪ್ ಮೂಲಕ ಆಕೆಯ ವಿವಾಹಿತ ಮಗಳ ಅಶ್ಲೀಲ ಫೋಟೊ ಕಳುಹಿಸಿದ್ದ. ತಕ್ಷಣ ದೂರುದಾರೆ ಆ ನಂಬರಿಗೆ ಕರೆ ಮಾಡಿದಾಗ 'ನಿನ್ನ ಮಗಳ ಇಂಥಹ ನಗ್ನ ಫೋಟೋಗಳು ನನ್ನ ಬಳಿ ಇವೆ. ಅವುಗಳನ್ನು ನಿನ್ನ ಅಳಿಯನಿಗೆ ಕಳುಹಿಸುತ್ತೇನೆ. ಕಳುಹಿಸಬಾರದೆಂದರೆ ಹಣ ಕೊಡಬೇಕು' ಎಂದು ಆರೋಪಿ ಬೆದರಿಕೆ ಒಡ್ಡಿದ್ದ. ಇದರಿಂದ ಭಯಗೊಂಡ ಮಹಿಳೆ ಆತ ಹೇಳಿದಂತೆ ಎರಡು ಖಾತೆಗಳಿಗೆ ಹಣ ವರ್ಗಾಯಿಸಿದ್ದರು.
ಆದರೆ ಫೆಬ್ರವರಿ 9ರಂದು ಪುನಃ ವಾಟ್ಸ್ಆ್ಯಪ್ ಕರೆ ಮಾಡಿದ್ದ ಕಾರ್ತಿಕ್ ಎಂಬಾತ, 'ನಾನು ಮನು ಕಡೆಯವನು, ಹಣ ಕೊಡದಿದ್ದರೆ ನಿನ್ನ ಮಗಳ ನಗ್ನ ಫೋಟೋಗಳನ್ನು ನಿನ್ನ ಅಳಿಯನಿಗೆ ಕಳಿಹುಸುತ್ತೇನೆ' ಎಂದು ಬೆದರಿಸಿದ್ದನು. ಫೆಬ್ರವರಿ 12ರಂದು ಮನು ಮತ್ತು ಆತನ ಕಡೆಯವರು ಸಾಕಷ್ಟು ಕರೆ ಮಾಡಿ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ನೊಂದ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ದೂರಿನನ್ವಯ ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜೈಲಿನಲ್ಲಿರುವ ಆರೋಪಿ ಮನುನನ್ನು ಬಾಡಿ ವಾರೆಂಟ್ ಆಧಾರದಲ್ಲಿ ವಶಕ್ಕೆ ಪಡೆಯಲು ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಪ್ರಕರಣದ ಬಗ್ಗೆ ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿಪ್ರಸಾದ್ ಮಾಹಿತಿ ನೀಡಿದ್ದು, "ರೌಡಿ ಶೀಟರ್ ಆಗಿರುವ ಮನು ಅಲಿಯಾಸ್ ಕೆಂಚನನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದೆವು. ಈಗ ಆತ ಒಬ್ಬ ಮಹಿಳೆಗೆ ಬೆದರಿಕೆಯೊಡ್ಡಿ ಹಣ ಸುಲಿಗೆ ಮಾಡಲು ಪ್ರಯತ್ನಿಸಿದ್ದಾನೆ. ಅವನ ಬಳಿ ಯಾವುದೋ ಒಂದು ಹಳೆಯ ಫೋಟೋ ಇದೆ. ಅದನ್ನಿಟ್ಟುಕೊಂಡು ಬೇರೆಯವರ ಕಡೆಯಿಂದ ಮಹಿಳೆಗೆ ಮೆಸೇಜ್ ಮಾಡಿಸಿ, 1 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾನೆ. ಇದೇ ರೀತಿ ಹಿಂದಿನ ವರ್ಷ ಕೂಡ ಬ್ಲ್ಯಾಕ್ಮೇಲ್ ಮಾಡಿ 5- 10 ಸಾವಿರ ಹಣ ಪಡೆದುಕೊಂಡಿದ್ದಾನೆ ಎನ್ನುವ ಮಾಹಿತಿ ಇದೆ. ಸದ್ಯ ನಮಗೆ ಯಾವುದೇ ಫೋಟೋ ದೊರೆತಿಲ್ಲ. ಅವನ ಬಳಿ ಫೋಟೋ ಇದೆ ಎಂದು ಬೆದರಿಕೆಯೊಡ್ಡಿ, ಹಣ ಸುಲಿಗೆ ಮಾಡಿದ್ದಾನೆ. ಈ ಪ್ರಕರಣವನ್ನು ತನಿಖೆಗಾಗಿ ಸಿಸಿಬಿಯವರಿಗೆ ವರ್ಗಾಯಿಸಲಾಗಿದೆ." ಎಂದು ತಿಳಿಸಿದರು.
ಇದನ್ನೂ ಓದಿ: ವಿದ್ಯಾರ್ಥಿನಿಗೆ ಕಿರುಕುಳ, ಬೆದರಿಕೆ: ಶಿಕ್ಷಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು