ಮಂಗಳೂರು (ದಕ್ಷಿಣ ಕನ್ನಡ) : ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಕೆನ್ನೆಗೆ ಹೊಡೆಯಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವ ಶಾಸಕ ಭರತ್ ಶೆಟ್ಟಿ ಮೇಲೆ ಕಾವೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಂಗಳೂರಿನ ಕಾವೂರಿನಲ್ಲಿ ಸೋಮವಾರ ನಡೆದಿದ್ದ ಬಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶಾಸಕ ಭರತ್ ಶೆಟ್ಟಿ, ರಾಹುಲ್ ಗಾಂಧಿಗೆ ಪಾರ್ಲಿಮೆಂಟ್ ಒಳಗೆ ಹೋಗಿ ಕೆನ್ನೆಗೆ ಬಾರಿಸಬೇಕಿತ್ತು ಅನಿಸುತ್ತಿದೆ. ಅಲ್ಲದೇ ರಾಹುಲ್ ಗಾಂಧಿಯವರು ಶಿವನ ಫೋಟೋ ಹಿಡಿದು ನಿಂತಿದ್ದ. ಈ ಹುಚ್ಚನಿಗೆ ಶಿವ ಮೂರನೇ ಕಣ್ಣು ಬಿಟ್ಟರೆ ಸುಟ್ಟು ಬೂದಿಯಾಗ್ತಾನೆ ಎಂದು ಗೊತ್ತಿಲ್ಲ ಎಂದು ಏಕವಚನದಲ್ಲಿ ಹೇಳಿಕೆ ನೀಡಿದ್ದರು.
ಈ ಹಿನ್ನೆಲೆ ಸ್ಥಳೀಯ ಕಾರ್ಪೋರೇಟರ್ ಅನಿಲ್ ಕುಮಾರ್ ನೀಡಿರುವ ದೂರಿನಡಿ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಬಿಎನ್ಎಸ್ 353(3), 353 ಸೆಕ್ಷನ್‌ನಡಿ ಪ್ರಕರಣ ದಾಖಲಿಸಿದ್ದೇವೆ. ಮುಂದಿನ ಕ್ರಮ ಆಗಲಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದ್ದಾರೆ.
ದೂರಿನಲ್ಲಿ ಏನಿದೆ? : 08.07.2024 ರಂದು ಬೆಳಗ್ಗೆ ಸುಮಾರು 10-30 ಗಂಟೆಯಿಂದ 11-30 ಗಂಟೆಯ ಮಧ್ಯ ಸಮಯದಲ್ಲಿ ಕಾವೂರು ಜಂಕ್ಷನ್ನಲ್ಲಿ ಏರ್ಪಡಿಸಲಾಗಿದ್ದ ಸುಮಾರು 100-150 ಜನ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಪ್ರಚೋದನಾಕಾರಿಯಾಗಿ ಭಾಷಣವನ್ನು ಮಾಡುತ್ತಿದ್ದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ವೈ ಭರತ್ ಶೆಟ್ಟಿ, ಕಾಂಗ್ರೆಸ್ನ ರಾಹುಲ್ ಗಾಂಧಿ ಒಬ್ಬ ಹುಚ್ಚ, ಅವನನ್ನು ಪಾರ್ಲಿಮೆಂಟ್ನಿಂದ ದೂಡಿ ಹೊರಗೆ ಹಾಕಬೇಕು.
ಅವನು ಮಾತನಾಡುವ ಶೈಲಿ ನೋಡಿದರೆ ಹಿಂದೂ ಆದ ನಾನು ಲೋಕಸಭೆಯ ಒಳಗೆ ಹೊಕ್ಕಿ ಅವನ ಕೆನ್ನೆಗೆ ಯಾರಾದರೂ ಎರಡು ಹೊಡೆಯಬೇಕು ಎಂದು ಅನಿಸುತ್ತದೆ. ಹಾಗೆ ಮಾಡಿದರೆ ಮಾತ್ರ ಅವನಿಗೆ ಬುದ್ದಿ ಬರುತ್ತದೆ. ನಾನು ಒಬ್ಬ ಹಿಂದೂ. ಹಿಂದೂ ವಿಚಾರದಲ್ಲಿ ಯಾರಾದರೂ ಮಾತನಾಡಿದರೆ ಅವರಿಗೆ ತಕ್ಕ ಬುದ್ಧಿ ಕಲಿಸಲು ನಾವೆಲ್ಲರೂ ಒಂದಾಗಬೇಕು ಎಂದಿದ್ದರು.
ಅಗತ್ಯವಿದ್ದರೆ ಶಸ್ತ್ರಾಸ್ತ್ರಗಳನ್ನು ತೆಗೆದು ಹೋರಾಟ ಮಾಡಲು ನಾವೆಲ್ಲ ಸಿದ್ದರಾಗಬೇಕು ಎಂದು ಸಭೆ ಉದ್ದೇಶಿಸಿ ಸೇರಿದ ಯುವಕರನ್ನು ಪ್ರಚೋದಿಸಿ, ಹಿಂದೂತ್ವದ ಬಗ್ಗೆ ಯಾರಾದರೂ ಮಾತನಾಡಿದರೆ ಶಸ್ತ್ರಾಸ್ತ್ರಗಳನ್ನು ಹಿಡಿದು ಹೋರಾಟ ಮಾಡೋಣ ಎಂದು ಸಾರ್ವಜನಿಕವಾಗಿ ಪ್ರಚೋದಿಸುವ ಭಾಷಣ ಮಾಡುತ್ತಿದ್ದರು.
ಈ ಸಂದರ್ಭದಲ್ಲಿ ಅಲ್ಲಿ ಹಾಜರಿದ್ದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ್ ಕಾಮತ್, ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಅನೇಕ ಕಾರ್ಪೋರೇಟರ್ಗಳು, ಭರತ್ ಶೆಟ್ಟಿ ಅವರ ಭಾಷಣಕ್ಕೆ ಪ್ರಚೋದಿಸುತ್ತಿದ್ದರು.
ಲೋಕಸಭಾ ಪ್ರತಿಪಕ್ಷದ ನಾಯಕರಾದ ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಭಾಷಣವನ್ನು ಮುಂದುವರೆಸಿದ ಭರತ್ ಶೆಟ್ಟಿ ಅವರು, ಸಭೆಯ ಮುಂದೆ ಹಾದು ಹೋಗುತ್ತಿದ್ದ ಬೀದಿ ನಾಯಿಯೊಂದನ್ನು ಉದ್ದೇಶಿಸಿ ರಾಹುಲ್ ಗಾಂಧಿ ಬೀದಿ ನಾಯಿ, ಬೀದಿ ನಾಯಿಯಷ್ಟು ಬುದ್ದಿ ರಾಹುಲ್ ಗಾಂಧಿಗೆ ಇಲ್ಲ ಎಂದು ಹೇಳುವ ಮೂಲಕ ರಾಹುಲ್ ಗಾಂಧಿಯನ್ನು ಏಕ ವಚನದಲ್ಲಿ ಬೈದು ಸಾರ್ವಜನಿಕವಾಗಿ ಅವಮಾನಿಸುತ್ತಿದ್ದರು. ಈ ಎಲ್ಲ ವಿಚಾರಗಳನ್ನು ಅವರ ಜೊತೆಯಲ್ಲಿದ್ದ ಶಾಸಕರು ಹಾಗೂ ಸಂಸದರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿದ್ದರು.
ಕಾಂಗ್ರೆಸ್ ಪಕ್ಷದ ಲೋಕಸಭೆಯ ಪ್ರತಿಪಕ್ಷದ ನಾಯಕರಾದ ರಾಹುಲ್ ಗಾಂದಿಯವರು ಮಾಡಿದ ಭಾಷಣವನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿ ಕಾರ್ಯಕರ್ತರು ಮನಸ್ಸು ಮಾಡಿದರೆ ಕಾಂಗ್ರೆಸ್ ಪಕ್ಷವನ್ನು ನಾಶ ಮಾಡಲು ಸಿದ್ಧರಿದ್ದೇವೆ. ಹಿಂದುತ್ವದ ವಿಚಾರ ಮಾತನಾಡಿದರೆ ಶಸ್ತ್ರಾಸ್ತ್ರ ಉಪಯೋಗಿಸಿ ಯಾವ ಹೋರಾಟಕ್ಕೂ ಸಿದ್ಧರಿದ್ದೇವೆ. ನಮ್ಮ ಮೇಲೆ ಕೇಸು ದಾಖಲು ಮಾಡಿದರೆ ನಾವು ಹೆದರುವವರಲ್ಲ ಎಂದು ಪ್ರಚೋದನೆ ಮಾಡಿ ಹೋರಾಟಕ್ಕೆ ಸಿದ್ಧರಾಗಿ ಎಂದು ಸಾರ್ವಜನಿಕರಲ್ಲಿ ಮತ್ತು ಕಾರ್ಯಕರ್ತರಲ್ಲಿ ಪ್ರೋತ್ಸಾಹಿಸುತ್ತಿದ್ದರು.
ಶಾಸಕರಾಗಿ ಸಾರ್ವಜನಿಕ ಸಭೆಗಳಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿ, ವ್ಯಕ್ತಿ ನಿಂದನೆ ಮಾಡಿರುತ್ತಾರೆ. ಈ ರೀತಿಯಾಗಿ ಕೋಮು ಕೋಮುಗಳ ಮಧ್ಯೆ ವೈರತ್ವ ಮೂಡಿಸಿ ಶಸ್ತ್ರಾಸ್ತ್ರ ಉಪಯೋಗಿಸಿ ಹೋರಾಟ ಮಾಡೋಣ ಎಂದು ಪ್ರಚೋದನಾಕಾರಿ ಹೇಳಿಕೆಯನ್ನು ನೀಡಿದ ಡಾ. ಭರತ್ ಶೆಟ್ಟಿ ಮತ್ತು ಇದನ್ನು ಬೆಂಬಲಿಸಿದ ವೇದವ್ಯಾಸ್ ಕಾಮತ್, ಬ್ರಿಜೇಶ್ ಚೌಟ್, ಸತೀಶ ಕುಂಪಳ ಮತ್ತೆ ಕಾರ್ಪೋರೇಟರ್ಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಸಿಎಂ ಬದಲಾವಣೆ ಬಗ್ಗೆ ಸ್ವಾಮೀಜಿಗಳು ಮಾತನಾಡಬಾರದು ಎನ್ನುವುದು ಸರಿಯಲ್ಲ: ಪೇಜಾವರ ಶ್ರೀ - pejavara shree