ಬೆಂಗಳೂರು: ಲೋಕಸಭಾ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಡು ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಕಾರ್ಯನಿರ್ವಾಹಕ ದಂಡಾಧಿಕಾರಿ ರೂಪೇಶ್ ಡಿ.ಎಂ ನೀಡಿರುವ ದೂರಿನನ್ವಯ, ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಶ್ರೀಧರ್ ರೆಡ್ಡಿರವರು ಪಕ್ಷದ ಕಚೇರಿಯ ನಾಮಫಲಕ ಹಾಗೂ ಕಾಂಪೌಂಡ್ ಮೇಲೆ ಪಕ್ಷದ ಚಿಹ್ನೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಅಂಟಿಸುತ್ತಿರುವ ಬಗ್ಗೆ ಸ್ಥಳೀಯರು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರು. ಅದರನ್ವಯ ಚುನಾವಣಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದಾಗ ನೀತಿ ಸಂಹಿತೆ ಉಲ್ಲಂಘಿಸಿರುವುದು ಕಂಡುಬಂದಿತ್ತು.
ಈ ಬಗ್ಗೆ ಚುನಾವಣಾಧಿಕಾರಿಗಳು ಕೋರಮಂಗಲ ಬಿಜೆಪಿ ಕಚೇರಿಯ ಮೇಲುಸ್ತುವಾರಿ ನೋಡಿಕೊಳ್ಳುವ ರಾಘವೇಂದ್ರ ನಾಯ್ಡುರನ್ನ ಪ್ರಶ್ನಿಸಿದ್ದರು. ಆಗ ಪ್ರತಿರೋಧ ವ್ಯಕ್ತಪಡಿಸಿದ ಆರೋಪದಡಿ ರಾಘವೇಂದ್ರ ನಾಯ್ಡು ವಿರುದ್ಧ ಚುನಾವಣಾಧಿಕಾರಿಗಳು ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರನ್ವಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಧಾರವಾಡ: 3 ಚೆಕ್ಪೋಸ್ಟ್ಗಳಲ್ಲಿ ಒಂದೇ ದಿನ ₹6 ಲಕ್ಷಕ್ಕೂ ಹೆಚ್ಚು ನಗದು ಜಪ್ತಿ - Cash Seized In Check Posts