ಬೆಂಗಳೂರು: ರಾಜ್ಯ ವಕ್ಫ್ ಮಂಡಳಿಯ ಖಾತೆಯಲ್ಲಿನ ಹಣ ಅಕ್ರಮವಾಗಿ ವರ್ಗಾವಣೆ ಮಾಡಿರುವ ಆರೋಪದಡಿ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಝುಲ್ಫಿಕಾರುಲ್ಲಾ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಡಳಿಯ ಬ್ಯಾಂಕ್ ಖಾತೆಯಲ್ಲಿದ್ದ 4 ಕೋಟಿ 45 ಸಾವಿರ ರೂ. ಹಣವನ್ನು ಅಕ್ರಮವಾಗಿ ವರ್ಗಾಯಿಸಿದ್ದಾರೆ ಎಂದು ಮುಖ್ಯ ಲೆಕ್ಕಾಧಿಕಾರಿ ಮೀರ್ ಅಹಮದ್ ಅಬ್ಬಾಸ್ ನೀಡಿರುವ ದೂರಿನನ್ವಯ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪವೇನು?: 2016ರಲ್ಲಿ ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಝುಲ್ಫಿಕಾರುಲ್ಲಾ ಮಂಡಳಿಯ ಗಮನಕ್ಕೆ ತರದೆ ಖಾತೆಯಲ್ಲಿದ್ದ 4 ಕೋಟಿ 45 ಸಾವಿರ ರೂ. ಹಣವನ್ನ ವರ್ಗಾಯಿಸಿರುವ ಆರೋಪವಿದೆ. ಬೆನ್ಸನ್ ಟೌನ್ನಲ್ಲಿರುವ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ವಕ್ಫ್ ಮಂಡಳಿಯ ಖಾತೆಯಿಂದ ಚೆಕ್ ಮೂಲಕ ವಿಜಯಾ ಬ್ಯಾಂಕ್, ಚಿಂತಾಮಣಿ ಶಾಖೆಯಲ್ಲಿರುವ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಖಾತೆಗೆ ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಆದ್ದರಿಂದ ಕ್ರಮಕ್ಕೆ ಮುಂದಾಗಿದ್ದ ವಕ್ಫ್ ಮಂಡಳಿ, ಹಣ ವರ್ಗಾವಣೆಯಾಗಿರುವುದರ ಕುರಿತು ಸಮರ್ಪಕ ವಿವರ ನೀಡುವಂತೆ 2022ರಲ್ಲಿ ಝುಲ್ಫಿಕಾರುಲ್ಲಾ ಅವರಿಗೆ ನೋಟಿಸ್ ನೀಡಿತ್ತು. ಆದರೆ, ನೋಟಿಸ್‌ಗೆ ಉತ್ತರಿಸದಿದ್ದಾಗ ಝುಲ್ಫಿಕಾರುಲ್ಲಾ ವಿರುದ್ಧ ಪ್ರಕರಣ ದಾಖಲಿಸುವಂತೆ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಹಾಗೂ ವಕ್ಫ್ ಇಲಾಖೆ ಸೂಚಿಸಿದೆ. ಇದರನ್ವಯ ಕಾನೂನು ಕ್ರಮ ಕೈಗೊಳ್ಳುವಂತೆ ವಕ್ಫ್ ಮಂಡಳಿಯ ಮುಖ್ಯ ಲೆಕ್ಕಾಧಿಕಾರಿ ಮೀರ್ ಅಹಮದ್ ಅಬ್ಬಾಸ್ ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಂಡಿರುವ ಹೈಗ್ರೌಂಡ್ಸ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: KSRTC ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯ: ಎಸ್.ಆರ್.ಶ್ರೀನಿವಾಸ್