ಬೆಂಗಳೂರು : ಎಸ್ಸಿ ಎಸ್ಟಿ ಹಣ ದೋಚಿ, ಸಿದ್ದರಾಮಯ್ಯ ಆ ಸಮುದಾಯಕ್ಕೆ ನ್ಯಾಯ ಕೊಟ್ಟಿದ್ದು ಇದೆನಾ? ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮದ ಬಗ್ಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ಮಲ್ಲೇಶ್ವರ ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಸಂಬಂಧ ಪ್ರತಿಕ್ರಿಯಿಸಿದರು. ಇದರಿಂದ ಸಹಜವಾಗಿ ಸಮುದಾಯದಲ್ಲೂ ಆಕ್ರೋಶ ಇದ್ದೇ ಇರುತ್ತೆ. ಖಾಸಗಿ ಬ್ಯಾಂಕ್ಗಳಿಗೆ ಹಣ ವರ್ಗಾವಣೆ ಆಗಿದೆ. ಈಗಾಗಲೇ ಯೂನಿಯನ್ ಬ್ಯಾಂಕ್ ಅಧಿಕಾರಿಗಳ ವಿರುದ್ಧ ತನಿಖೆ ನಡೆಯುತ್ತಿದೆ. ತನಿಖೆ ನಂತರ ಮುಂದಿನ ಕ್ರಮ ಕೈಗೊಳ್ತೇವೆ. ಅಧಿಕಾರಿಗಳು ತಪ್ಪು ಮಾಡಿದ್ರೆ ಕ್ರಮ ಖಚಿತ. ಆದರೆ ರಾಜ್ಯ ಸರ್ಕಾರ ಅವರ ಸಚಿವರಾಗಿದ್ದವರ ಮೇಲೆ ಏನು ಕ್ರಮ ಕೈಗೊಂಡಿದೆ? ಎಂದು ಪ್ರಶ್ನಿಸಿದರು.
ಅಕ್ರಮ ನಿವೇಶನ ಪಡೆದಿದ್ದನ್ನು ಸಿಎಂ ಒಪ್ಪಿಕೊಳ್ಳಲಿ- ಸಚಿವೆ ನಿರ್ಮಿಲಾ ಸೀತಾರಾಮನ್ : ಮುಡಾದಿಂದ ಬಿಜೆಪಿಯವರೂ ಅಕ್ರಮ ಸೈಟುಗಳನ್ನು ಪಡೆದಿದ್ದಾರೆ ಎಂಬ ಕಾಂಗ್ರೆಸ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಕಾಂಗ್ರೆಸ್ನವರು ಪ್ರತೀ ಆರೋಪಗಳಿಗೂ ಕೌಂಟರ್ ಕೊಡೋದಷ್ಟೇ ಮಾಡ್ತಾರೆ. ಆರೋಪಕ್ಕೆ ಕೌಂಟರ್ ಆರೋಪ ಮಾಡ್ತಾರೆ. ಅದು ಕಾಂಗ್ರೆಸ್ನವರಿಗೆ ಅಭ್ಯಾಸ ಆಗಿಹೋಗಿದೆ. ಆದ್ರೆ ಸಿದ್ದರಾಮಯ್ಯ ಅವರು ಇದುವರೆಗೆ ಅಕ್ರಮವಾಗಿ ನಿವೇಶನ ಪಡೆದಿದ್ದನ್ನು ಒಪ್ಕೊಂಡೇ ಇಲ್ಲ. ಇದನ್ನು ಮೊದಲು ಒಪ್ಪಿಕೊಳ್ಳಲಿ. ಅದನ್ನು ಬಿಟ್ಟು ಕೌಂಟರ್ ಕೊಡೋದು ಸರಿಯಲ್ಲ ಎಂದರು.
ಅಸಂತೋಷ ಆಗುತ್ತೆ ಅಂತ ಇಡಿ ಬರದೇ ಇರಲು ಸಾಧ್ಯನಾ? : ಇಡಿ ದುರ್ಬಳಕೆ ಬಗ್ಗೆ ಕಾಂಗ್ರೆಸ್ ಆರೋಪಕ್ಕೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿ, ಇಡಿ ದುರ್ಬಳಕೆ ಬಗ್ಗೆ ಚುನಾವಣೆಗೂ ಮುನ್ನವೂ ಆರೋಪ ಮಾಡ್ತಿದ್ರು. ಇಡಿ ಬಂದು ಬ್ಲ್ಯಾಕ್ ಮನಿ ಪತ್ತೆ ಮಾಡಿ ತನಿಖೆ ಮಾಡ್ತಿದೆ. ಕಾಂಗ್ರೆಸ್ನವರಿಗೆ ಅಸಂತೋಷ ಆಗುತ್ತದೆ ಅಂತ ಇಡಿಯವರು ಬರದೇ ಇರೋಕ್ಕಾಗುತ್ತಾ? ಎಂದು ಪ್ರಶ್ನಿಸಿದರು.
ಇಡಿಯವರು ತಮ್ಮ ಕೆಲಸ ಮಾಡ್ತಿದ್ದಾರೆ, ಅವರಿಗೆ ಕೇಂದ್ರ ಸ್ವಾತಂತ್ರ್ಯ ಕೊಟ್ಟಿದೆ. ಇಡಿಯವರು ಎಲ್ಲೇ ಹೋದರೂ ಅಪಾರ ಹಣ, ಚಿನ್ನ ಸೀಜ್ ಮಾಡ್ತಾರೆ. ಕಾಂಗ್ರೆಸ್ನವರು ಸಿಬಿಐ ತನಿಖೆಗೆ ಅವಕಾಶ ಕೊಡ್ತಿಲ್ಲ. ಯಾಕಂದ್ರೆ ಅವರ ಸಚಿವರೇ ಶಾಮೀಲಾಗಿದ್ದಾರೆ ಅದಕ್ಕೆ ಎಂದು ನಿರ್ಮಲಾ ಸೀತಾರಾಮನ್ ಆರೋಪಿಸಿದರು.
ನೀತಿ ಆಯೋಗ ಸಭೆಗೆ ಬರಬೇಕಿತ್ತು : ನೀತಿ ಆಯೋಗ ಸಭೆಗೆ ಸಿಎಂ ಸಿದ್ದರಾಮಯ್ಯ ಬಹಿಷ್ಕಾರ ವಿಚಾರವಾಗಿ ಪ್ರತಿಕ್ರಿಯಿಸಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಭೆಗೆ ಬಂದಿದ್ರು, ಸಂತೋಷ. ಆದ್ರೆ ಅವರು ನಿಗದಿತ ಅವಧಿಯಲ್ಲಿ ಮಾತಾಡಿ, ಸಮಯ ಕಡಿಮೆ ಅಂತ ಹೇಳಿ ಹೊರಗೆ ಹೋದ್ರು, ಇದು ತಪ್ಪು. ಸಿದ್ದರಾಮಯ್ಯ ಸಭೆಗೆ ಬರಲಿಲ್ಲ. ಕೇಂದ್ರದಿಂದ ಅನ್ಯಾಯ, ತಾರತಮ್ಯ ಆಗ್ತಿದೆ ಅಂತಾರೆ. ಅವರಿಗೆ ಮಾತನಾಡಲು ವೇದಿಕೆ ಸಿಕ್ಕಿದಾಗ ಬರದಿರುವುದು ಖಂಡನೀಯ. ಪ್ರತಿಪಕ್ಷಗಳು ಸಭೆಗೆ ಬರಬೇಕಿತ್ತು, ಮಾತಾಡಬೇಕಿತ್ತು ಎಂದು ಹೇಳಿದರು.
ಇದನ್ನೂ ಓದಿ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರಬಾರದೆಂದು ಕೇಂದ್ರ ವಾಮಮಾರ್ಗ ಅನುಸರಿಸುತ್ತಿದೆ: ಸಿಎಂ ಸಿದ್ದರಾಮಯ್ಯ - CM Siddaramaiah