ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಅಭ್ಯರ್ಥಿಗಳು ಪ್ರಚಾರಕ್ಕೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್‌ಕುಮಾರ್ ಕಣಕ್ಕಿಳಿದಿದ್ದು, ಅವರ ಬೆಂಬಲಕ್ಕೆ ಸ್ಯಾಂಡಲ್ವುಡ್ನ ನಿರ್ಮಾಪಕರು ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಶಿವರಾಜ್‌ಕುಮಾರ್ ಅವರ ನಾಗವಾರದ ನಿವಾಸದಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್, ಮಾಜಿ ಅಧ್ಯಕ್ಷರುಗಳಾದ ಸಾರಾ ಗೋವಿಂದು, ಕೆ.ವಿ.ಚಂದ್ರಶೇಖರ್, ಥಾಮಸ್ ಡಿಸೋಜಾ, ಚಿನ್ನೇಗೌಡ್ರು, ನಿರ್ಮಾಪಕ ಕೆ.ಪಿ ಶ್ರೀಕಾಂತ್, ಉಮೇಶ್ ಬಣಕಾರ್ ಸೇರಿದಂತೆ ಅನೇಕರು ಪತ್ರಿಕಾಗೋಷ್ಠಿ ನಡೆಸುವ ಮೂಲಕ ದೊಡ್ಮನೆ ಸೊಸೆಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.
ಫಿಲ್ಮ್ ಚೇಂಬರ್ ಅಧ್ಯಕ್ಷ ಹಾಗೂ ನಿರ್ಮಾಪಕ ಎನ್ ಎಂ ಸುರೇಶ್ ಮಾತನಾಡಿ, "ದೊಡ್ಮನೆಗೆ ಅವಕಾಶ ಸಿಕ್ಕಿರೋದು ಖುಷಿಯಾಗಿದೆ. ಅದರಲ್ಲಿ ಗೀತಾ ಅವರಿಗೆ ಟಿಕೆಟ್ ಸಿಕ್ಕಿರೋದು ನಮಗೆಲ್ಲಾ ಸಂತಸ ತಂದಿದೆ. ಶಿವಮೊಗ್ಗ ಬಹಳ ಪವಿತ್ರವಾದ ಸ್ಥಳ. ಚಿತ್ರೋದ್ಯಮದ ಆಸ್ತಿ ದೊಡ್ಮನೆಗೆ ನಾವು ಸಾಥ್ ಕೊಡುತ್ತೇವೆ. ನಾವು ಚುನಾವಣೆ ಕೆಲಸ ಮಾಡ್ತೀವಿ. ನಾವೆಲ್ಲಾ ಗೀತಾ ಶಿವರಾಜ್‌ಕುಮಾರ್ ಅವರು ನಾಮಪತ್ರ ಸಲ್ಲಿಸುವ ದಿನ ಅವರೊಂದಿಗೆ ಇರುತ್ತೇವೆ. ಈ ಚುನಾವಣೆ ನಮಗೆ ಹಬ್ಬ ಇದ್ದಂತೆ, ಇಡೀ ಚಿತ್ರರಂಗ ಒಟ್ಟಾಗಿ ಗೀತಾ ಶಿವರಾಜ್‌ಕುಮಾರ್ ಅವರನ್ನ ಬೆಂಬಲಿಸುತ್ತೇವೆ ಎಂದರು.
ಗೀತಾರನ್ನು ಒಮ್ಮೆ ಸಂಸದೆ ಆಗಿ ನೋಡಬೇಕು ಎಂಬ ಆಸೆ ಇದೆ: ನಟ ಶಿವರಾಜ್‌ಕುಮಾರ್ ಮಾತನಾಡಿ, ಡಾ. ರಾಜ್ಕುಮಾರ್ ಅವರ ಮಾತಿನಂತೆ ಚಿತ್ರರಂಗ ಅಂದರೆ ಒಂದು ಕುಟುಂಬ. ನನ್ನ ಪತ್ನಿ ಗೆಲುವಿಗಾಗಿ ನಿಮ್ಮ ಸಹಕಾರ ನನಗೆ ಖುಷಿ ಕೊಟ್ಟಿದೆ. ರಾಜಕೀಯದಲ್ಲಿ ಅನುಭವ ಇದ್ದರೆ ಸಾಲದು. ನಂಬಿಕೆ, ಆತ್ಮವಿಶ್ವಾಸ ಕೂಡಬೇಕು. ಡಾ. ರಾಜ್ ಕುಮಾರ್ ಅವರಿಗೆ ರಾಜಕೀಯ ಇಷ್ಟ ಇರಲಿಲ್ಲ. ಆದರೆ ರಾಜಕೀಯ ಮಾಡುವವರಿಗೆ ಯಾವತ್ತೂ ಬೇಡ ಅನ್ನಲಿಲ್ಲ. ಹಾಗಾಗಿಯೇ ನಾನು ಬಂಗಾರಪ್ಪ ಅವರ ಮಗಳನ್ನು ಮದುವೆಯಾದೆ. ಕರ್ನಾಟಕದಲ್ಲಿ ಹೆಣ್ಣು ಮಕ್ಕಳು ಹೆಚ್ಚಾಗಿ ರಾಜಕೀಯಕ್ಕೆ ಬರಬೇಕು. ಗೀತಾರನ್ನು ಒಮ್ಮೆ ಸಂಸದೆ ಆಗಿ ನೋಡಬೇಕು ಎಂಬ ಆಸೆ ಇದೆ. ಅದರಂತೆ ಗೀತಾ ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗೀತಾ ಶಿವರಾಜ್‌ಕುಮಾರ್ ಮಾತನಾಡಿ, ನನ್ನ ಪರವಾಗಿ ನಿಂತ ನಿರ್ಮಾಪಕರಿಗೆ ಧನ್ಯವಾದ. ನಾನು ರಾಜಕೀಯದಲ್ಲಿ ಮೊದಲು ಸೋತೆ. ರಾಜಕೀಯದಲ್ಲಿ ಸೋಲು - ಗೆಲುವಿಗೆ ನಾನು ಹೆದರುವುದಿಲ್ಲ. ಈ ಬಾರಿ ನಾನು ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದರು.
ಇನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ನನಗೆ ಚಿತ್ರರಂಗದ ಮೇಲೆ ಬಹಳ ಗೌರವವಿದೆ. ಇಂದು ನಿರ್ಮಾಪಕರು ನಮ್ಮ ಅಕ್ಕನ ಪರವಾಗಿ ನಿಂತಿದ್ದಾರೆ. 2014ರಲ್ಲಿ ಬೇರೆ ಪಕ್ಷದಲ್ಲಿ ಇದ್ದೆವು. ಆಗ ಸೋಲಾಯ್ತು. ಚುನಾವಣೆಯಲ್ಲಿ ನಾನು ಈವರೆಗೆ ನಾನು 6 ಬಾರಿ ಸೋತಿದ್ದೇನೆ. ಮಧು ಬಂಗಾರಪ್ಪ ಚುನಾವಣೆಯಲ್ಲಿ ಮಾತ್ರ ಸೋತಿದ್ದಾನೆ, ರಾಜಕೀಯದಲ್ಲಿ ಅಲ್ಲ. ಆದೇ ರೀತಿ ಈ ಬಾರಿ ಗೀತಾ ಶಿವರಾಜ್‌ಕುಮಾರ್ ಅವರನ್ನು ಗೆದ್ದೇ ಗೆಲ್ಲಿಸುತ್ತೇನೆ. ಇದೇ ಮಾರ್ಚ್ 20 ರಂದು ಗೀತಾ ಶಿವರಾಜ್‌ಕುಮಾರ್ ಅವರು ಶಿವಮೊಗ್ಗಕ್ಕೆ ಆಗಮಿಸಲಿದ್ದು, ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 400 ಸಭೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಶಿವಮೊಗ್ಗ: ಸುಳ್ಳುಗಳೇ ಕಾಂಗ್ರೆಸ್ ಪಕ್ಷದ ಬಂಡವಾಳ; ಪ್ರಧಾನಿ ಮೋದಿ ಟೀಕಾಪ್ರಹಾರ, ಈಶ್ವರಪ್ಪ ಗೈರು