ಬೆಂಗಳೂರು: ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಪ್ರವೇಶ ದರ 200 ರೂ. ನಿಗದಿಗೊಳಿಸುವಂತೆ ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಿಎಂ ಸಿದ್ದರಾಮಯ್ಯಗೆ ಮನವಿ ಪತ್ರ ಸಲ್ಲಿಸಿದೆ.
ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಭೇಟಿಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್, ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಮನವಿ ಪತ್ರ ಸಲ್ಲಿಸಿದರು. ಭೇಟಿ ಬಳಿಕ ಮಾತನಾಡಿದ ಸಾ.ರಾ. ಗೋವಿಂದು, ಇತ್ತೀಚೆಗೆ ಮಲ್ಟಿಪ್ಲೆಕ್ಸ್ ಸೇರಿದಂತೆ ಚಿತ್ರಮಂದಿರಗಳಲ್ಲಿ ಪ್ರವೇಶ ದರ ದುಬಾರಿಯಾಗಿದ್ದು, ಸಾವಿರದಿಂದ ಒಂದೂವರೆ ಸಾವಿರ ರೂಪಾಯಿವರೆಗೂ ಟಿಕೆಟ್ ದರವನ್ನು ನಿಗದಿಪಡಿಸಲಾಗುತ್ತಿದೆ. ಇದರಿಂದ ಕನ್ನಡ ಪ್ರೇಕ್ಷಕರಿಗೆ ಹೊರೆಯಾಗಿದೆ. ರೂ.200 ಮೀರದಂತೆ ಪ್ರವೇಶದರ ವಿಧಿಸುವಂತೆ ಸಿಎಂಗೆ ಮನವಿ ಸಲ್ಲಿಸಿದ್ದೇವೆ ಎಂದರು.
ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ವಾಣಿಜ್ಯ ಮಂಡಳಿಯು ಚಿತ್ರೋದ್ಯಮದ ಪರವಾಗಿ ಮನವಿ ಮಾಡಿಕೊಂಡ ಮೇರೆಗೆ ಸರ್ಕಾರ ಗೃಹ ಇಲಾಖೆಯ ಮೂಲಕ ಆದೇಶ ಹೊರಡಿಸಬೇಕಾಗಿದ್ದು, ಅದರ ಬದಲು ವಾರ್ತಾ ಇಲಾಖೆಯ ಮೂಲಕ ಆದೇಶ ಹೊರಡಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಅಧಿಕಾರ ವ್ಯಾಪ್ತಿಗೆ ಒಳಪಡುವುದಿಲ್ಲವೆಂದು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮಾಲೀಕರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ಈ ಆದೇಶವನ್ನು ತೆರವು ಮಾಡುವಂತೆ ಮನವಿ ಪತ್ರ ಸಲ್ಲಿಕೆ ಮಾಡಿದ್ದೇವೆ ಎಂದು ಹೇಳಿದರು.
ಇತ್ತೀಚೆಗೆ ವಾಣಿಜ್ಯ ಮಂಡಳಿಯ ಮುಂಭಾಗದಲ್ಲಿ ನಿರ್ಮಾಪಕರು, ವಿತರಕರು, ಪ್ರದರ್ಶಕರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ದುಬಾರಿ ಪ್ರವೇಶ ದರದಿಂದ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸಲು ಪ್ರೇಕ್ಷಕರು ಗಣನೀಯ ಪ್ರಮಾಣದಲ್ಲಿ ಕುಂಠಿತಗೊಂಡು ಚಿತ್ರ ನಿರ್ಮಾಣಕ್ಕೆ ಹಾಕಿದ ಬಂಡವಾಳ ಸಹ ವಾಪಸ್ ಪಡೆಯಲು ಕಷ್ಟಸಾಧ್ಯವಾಗುತ್ತಿದೆ. ಹಾಗಾಗಿ ಕೂಡಲೇ 200 ರೂ.ಗೆ ಮೀರದಂತೆ ಪ್ರವೇಶದರ ನಿಗದಿಪಡಿಸಲು ಕೋರಿದ್ದೇವೆ. ಇನ್ನು 10 ದಿನ ಕಾಯಿರಿ ಈ ಸಂಬಂಧ ಕ್ರಮ ತೆಗದುಕೊಳ್ಳಲಾಗುವುದು ಎಂದರು.
ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್ ಮಾತನಾಡಿ, ಈಗಾಗಲೇ ನೆರೆರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ ಮತ್ತು ಚೆನ್ನೈ ಮಲ್ಟಿಪ್ಲೆಕ್ಸ್‌ಗಳಲ್ಲಿ 150 ರಿಂದ 200 ರೂ. ಪ್ರವೇಶದರ ನಿಗದಿಪಡಿಸಿರುವಂತೆ ನಮ್ಮಲ್ಲೂ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಗಳಲ್ಲಿ ರೂ. 150-200ಗೆ ಮೀರದಂತೆ ಪ್ರವೇಶದರ ನಿಗದಿಪಡಿಸುವಂತೆ ಸರ್ಕಾರಿ ಆದೇಶ ಹೊರಡಿಸುವಂತೆ ಮನವಿ ಪತ್ರ ನೀಡಿದ್ದೇವೆ ಎಂದು ತಿಳಿಸಿದರು.
10 ದಿನಗಳಲ್ಲಿ ಹೋಮ್ ಡಿಪಾರ್ಟ್ಮೆಂಟ್ ಕಡೆಯಿಂದ ಆದೇಶ ಹೊರಡಿಸೋದಾಗಿ ಸಿಎಂ ಹೇಳಿದ್ದಾರೆ. ಈ ಹಿಂದೆ ಏಕರೂಪ ದರ ನಿಗದಿಗೆ ಮನವಿ ಮಾಡಿದ್ವಿ. ಅಂದು ವಾರ್ತಾ ಇಲಾಖೆಯಿಂದ ಆದೇಶ ಹೊರಡಿಸಲಾಗಿತ್ತು. ಮಲ್ಟಿಪ್ಲೆಕ್ಸ್ ನವರು ಕೋರ್ಟ್ಗೆ ಹೋಗಿ ಸ್ಟೇ ತಂದಿದ್ದಾರೆ. ನಾವು ಈ ಸ್ಟೇ ವೇಕೆಟ್ ಮಾಡಿಸುವ ಕೆಲಸ ಮಾಡ್ತಿದ್ದೇವೆ. ಪರ ಭಾಷೆ ಚಿತ್ರಗಳು ನಮ್ಮಲ್ಲಿ ಹಣವನ್ನು ಲೂಟಿ ಮಾಡ್ತಿದ್ದಾರೆ ಎಂದು ದೂರಿದರು.
ಇದನ್ನೂ ಓದಿ: ಬೆಂಗಳೂರಲ್ಲಿ ಅಕ್ರಮ ಕಟ್ಟಡ ನಿರ್ಮಾಣ ನಿಯಂತ್ರಣಕ್ಕಾಗಿ ಕಾನೂನು ತರಲು ತೀರ್ಮಾನ : ಸಿಎಂ ಸಿದ್ದರಾಮಯ್ಯ