ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಾಯಿ ವಿಚಾರಕ್ಕೆ ಒಂದಲ್ಲಾ ಒಂದು ಕಿತ್ತಾಟ ನಡೆಯುತ್ತಲೇ ಇರುತ್ತವೆ. ಇದೀಗ, ಜೀವನ್ ಭೀಮಾನಗರದಲ್ಲಿ ಸಾಕು ನಾಯಿಯ ವಿಚಾರಕ್ಕೆ ಮನೆ ಮಾಲೀಕ ಹಾಗೂ ಬಾಡಿಗೆದಾರರು ಕೈ ಕೈ ಮಿಲಾಯಿಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ನಾಯಿ ಸಾಕದಂತೆ ನಾಲ್ಕೈದು ಜನರು ಬಾಡಿಗೆದಾರ ಮಹಿಳೆಯ ಮನೆ ಆವರಣ ಪ್ರವೇಶಿಸಿ ಆಕೆಯ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಬಾಡಿಗೆದಾರ ಮಹಿಳೆ ನಾಯಿ ಸಾಕುವುದನ್ನು ಅಪಾರ್ಟ್ಮೆಂಟ್ ಮಾಲೀಕ ವಿರೋಧಿಸಿದ್ದಾರೆ. ಆದರೆ ಅದಕ್ಕೆ ಒಪ್ಪದೆ ಮಹಿಳೆ ತಾನು ನಾಯಿ ಸಾಕುವುದಾಗಿ ಪಟ್ಟು ಹಿಡಿದಿದ್ದಾರೆ. ಈ ವೇಳೆ ನಾಯಿಯನ್ನ ಸಾಕುವುದೇ ಆದ್ರೆ ಮನೆ ಖಾಲಿ ಮಾಡುವಂತೆ ಮಾಲೀಕ ಸೂಚಿಸಿದ್ದಾರೆ. ಇದಕ್ಕೆ ಬಾಡಿಗೆದಾರ ಮಹಿಳೆ ಒಪ್ಪದಿದ್ದಾಗ ಇಬ್ಬರ ನಡುವೆ ಗಲಾಟೆಯಾಗಿದೆ. ಈ ಸಂದರ್ಭದಲ್ಲಿ ಮನೆ ಮಾಲೀಕ ಮತ್ತವರ ಕಡೆಯವರು ಹಲ್ಲೆ ಮಾಡಿರುವುದಾಗಿ ಬಾಡಿಗೆದಾರ ಮಹಿಳೆ ಆರೋಪಿಸಿದ್ದಾರೆ. ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ದೂರು ನೀಡಿದರೂ ಸಹ ಪೊಲೀಸರು ಎಫ್ಐಆರ್ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಈ ಕುರಿತು ಬಾಡಿಗೆದಾರರಾದ ಪೂಜಾ ಪ್ರತಿಕ್ರಿಯಿಸಿ, "ಮನೆ ಮಾಲೀಕರು ಹೆಚ್ಚುವರಿ ಹಣದ ಬೇಡಿಕೆಗೆ ನಾನು ಒಪ್ಪದವರೆಗೂ ಯಾವುದೇ ಸಮಸ್ಯೆ ಇರಲಿಲ್ಲ. ಸಹೋದರನ ಮದುವೆಯಿದೆ, ಐವತ್ತು ಸಾವಿರ ಹೆಚ್ಚುವರಿ ಹಣ ಬೇಕು ಎಂದು ಮನೆ ಮಾಲೀಕರ ಮಗಳು ಮೆಸ್ಸೇಜ್ ಕಳಿಸಿದ್ದರು. ಒಂದೂವರೆ ವರ್ಷದ ಲೀಸ್ ಅಗ್ರಿಮೆಂಟ್ ಇನ್ನೂ ಸಹ ರಿನ್ಯೂವಲ್ ಮಾಡಿಲ್ಲ, ಆದರೆ 50 ಸಾವಿರ ರೂ. ಹೆಚ್ಚುವರಿ ಹಣಕ್ಕಾಗಿ ಒತ್ತಾಯಿಸಿದ್ದರು. ಹಣ ಕೊಡದಿದ್ದಾಗ ಈ ರೀತಿ ಮಾಡುತ್ತಿದ್ದಾರೆ. ಹಣ ಕೊಡದಿದ್ದರೆ ಮನೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೂ ಸ್ಪಂದಿಸುವುದಿಲ್ಲ ಎಂದಿದ್ದರು. ಅಪಾರ್ಟ್ಮೆಂಟ್ ಮೇನ್ ಗೇಟ್ ಇರದ ಕಾರಣ ನಾನು ನನ್ನ ಮನೆ ಬಳಿ ಬ್ಯಾರಿಯರ್ ಗೇಟ್ ಹಾಕಿಸಿದ್ದೆ, ಕುಡಿದ ಅಮಲಿನಲ್ಲಿ ಮಾಲೀಕ ಗೋಪಾಲ್ ಅದನ್ನೂ ಕಿತ್ತು ಹಾಕಿದ್ದಾರೆ. ಮನೆಯ ಬಳಿ ಬಂದು ಕಿಟಕಿಯಲ್ಲಿ ಇಣುಕಿ ನೋಡುವುದನ್ನ ಮಾಡುತ್ತಿದ್ದರು. ಅದರ ಬಗ್ಗೆಯೂ ಹೇಳಿ, ಸಿಸಿಟಿವಿ ದೃಶ್ಯಗಳನ್ನ ಕೇಳಿದ್ದೆ. ಆದರೆ ಸಿಸಿಟಿವಿ ಇಲ್ಲ ಎಂದಾಗ ನಾನೇ ನನ್ನ ಖರ್ಚಿನಲ್ಲಿ ಮನೆಗೆ ಸಿಸಿಟಿವಿ ಅಳವಡಿಸಿಕೊಂಡಿದ್ದೇನೆ" ಎಂದು ಹೇಳಿದ್ದಾರೆ.
ಬಾಡಿಗೆದಾರೆ ಪೂಜಾ ಅವರ ಆರೋಪದ ಕುರಿತು ಪ್ರತಿಕ್ರಿಯಿಸಿದ ಮನೆ ಮಾಲಕಿ ಪ್ರಮಿಳಾ, ''ಒಂದೂವರೆ ವರ್ಷದಿಂದ ಅವರು ಬಾಡಿಗೆಗೆ ವಾಸವಿದ್ದಾರೆ. ಅವರ ತಾಯಿ ಇಲ್ಲಿರುವವರೆಗೂ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ನಂತರದಲ್ಲಿ ಮನೆಯನ್ನು ಸ್ವಚ್ಚವಾಗಿಟ್ಟುಕೊಳ್ಳುತ್ತಿರಲಿಲ್ಲ. ಯಾರಾದರೂ ಬಂದಾಗ ಸಮಸ್ಯೆಯಾಗುತ್ತದೆ ಸ್ವಚ್ಛವಾಗಿಟ್ಟುಕೊಳ್ಳಿ ಎಂದರೂ ಸಹ ಕಾಂಪೌಂಡ್ ಮೇಲೆ ನಾಯಿಗೆ ಊಟ ಹಾಕುವುದು, ಎಲ್ಲೆಂದರಲ್ಲಿ ನಾಯಿಯನ್ನ ಬಿಡುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಕರೆಂಟ್ ಬಿಲ್, ವಾಟರ್ ಬಿಲ್ ಕೊಡುತ್ತಿರಲಿಲ್ಲ. ನಾವೇ ಹೋಗಿ ಪ್ರತೀ ಬಾರಿ ಅವರ ರೂಮ್ ಎದುರು ನಿಂತುಕೊಳ್ಳಬೇಕಿತ್ತು. ಬೇಕಾದರೆ ನಿಮ್ಮ ಹಣ ವಾಪಸ್ ಕೊಡುತ್ತೇವೆ, ಮನೆ ಖಾಲಿ ಮಾಡಿ ಎಂದರೂ ಒಪ್ಪುತ್ತಿಲ್ಲ. ಘಟನೆಯ ದಿನ ನಾವು ಗೇಟ್ ತೆಗೆದುಹಾಕಿ ನಾಯಿಯನ್ನ ಬಿಡಲು ಹೋಗಿದ್ದೆವು, ಆ ದಿನ ಅವರೇ ಬೈದು 75 ವರ್ಷದ ನಮ್ಮ ತಂದೆಯನ್ನ ಹೊಡೆಯಲು ಬಂದರು. ಅವರ ಅಣ್ಣ ನಮಗೆ ಜಾತಿ ವಿಚಾರವಾಗಿ ಮಾತನಾಡಿ ನಿಂದನೆ ಮಾಡಿದ್ದಾರೆ" ಎಂದು ಪ್ರತ್ಯಾರೋಪ ಮಾಡಿದ್ದಾರೆ.
ಇದನ್ನೂ ಓದಿ: ಕಲಬುರಗಿ: ಆರೇಳು ಜನ ಸೇರಿ ಮಹಿಳೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ.. ದೂರು ದಾಖಲು