ಬೆಂಗಳೂರು: ಫೆಂಗಲ್ ಚಂಡಮಾರುತದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ತರಕಾರಿ ಇಳುವರಿ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಮಾರುಕಟ್ಟೆಗೆ ಪೂರೈಕೆ ಗಣನೀಯವಾಗಿ ಇಳಿದಿದ್ದು, ತರಕಾರಿ ಬೆಲೆ ಗಗನಕ್ಕೇರಿದೆ. ದಿಢೀರ್ ತರಕಾರಿ ಬೆಲೆ ಏರಿಕೆಯಿಂದಾಗಿ ಜನರ ಜೇಬಿಗೆ ಮತ್ತಷ್ಟು ಕತ್ತರಿ ಬಿದ್ದಿದೆ.
ಬೆಂಗಳೂರಿಗೆ ಅಕ್ಕಪಕ್ಕದ ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಮತ್ತು ಪಕ್ಕದ ತಮಿಳುನಾಡಿನಿಂದಲೂ ನಿತ್ಯ ತರಕಾರಿ ಪೂರೈಕೆ ಆಗುತ್ತದೆ. ಆದರೆ ಇತ್ತೀಚೆಗೆ ಚಂಡಮಾರುತದಿಂದಾಗಿ ತಮಿಳುನಾಡು ಮತ್ತು ರಾಜ್ಯದ ಹಲವೆಡೆ ಭಾರೀ ಮಳೆಯಾಗಿ ಅಸ್ತವ್ಯಸ್ತ ಉಂಟಾಗಿದೆ. ಮಳೆಯಿಂದ ತರಕಾರಿ ಬೆಳೆಗೆ ಹಾನಿಯಾಗಿದ್ದು, ಇಳುವರಿ ಕಡಿಮೆಯಾಗಿದೆ. ಜೊತೆಗೆ ಕೆಲವೆಡೆ ತರಕಾರಿ ಕೆಟ್ಟು ಹೋಗಿದೆ. ಇದರಿಂದಾಗಿ ಮಾರುಕಟ್ಟೆಗೆ ಅಗತ್ಯಕ್ಕೆ ತಕ್ಕಷ್ಟು ಪ್ರಮಾಣದಲ್ಲಿ ತರಕಾರಿ ಪೂರೈಕೆಯಾಗದ ಕಾರಣ ಬೆಲೆ ಏರಿಕೆಯಾಗಿದೆ.
600 ಗಡಿ ದಾಟಿದ ಬೆಳ್ಳುಳ್ಳಿ: ಮಾರುಕಟ್ಟೆಯಲ್ಲಿ ಮುಖ್ಯವಾಗಿ ಬೆಳ್ಳುಳ್ಳಿ ಕೆ.ಜಿಗೆ 600 ರೂಪಾಯಿ ಗಡಿ ದಾಟಿದ್ದು, ನುಗ್ಗೇಕಾಯಿ ಕೆ.ಜಿಗೆ 500 ರೂಪಾಯಿ ತಲುಪಿದೆ. ಈರುಳ್ಳಿ ಬೆಲೆ 100 ರೂಪಾಯಿ ಇದ್ದರೆ, ಟೊಮೆಟೋ 50 ರೂಪಾಯಿ ಆಗಿದೆ.
ತರಕಾರಿ ದರಗಳ ವಿವರ:
ಟೊಮೆಟೊ (ಕೆ.ಜಿಗೆ) - 60 ರಿಂದ 70 ರೂಪಾಯಿ
ಬೆಳ್ಳುಳ್ಳಿ - 550 ರಿಂದ 600 ರೂಪಾಯಿ
ಈರುಳ್ಳಿ - 70 ರಿಂದ 80 ರೂಪಾಯಿ
ನುಗ್ಗೇಕಾಯಿ - 500 ರೂಪಾಯಿ
ಬಟಾಣಿ - 180 ರಿಂದ 200 ರೂಪಾಯಿ
ಮೆಣಸಿನಕಾಯಿ - 40 ರಿಂದ 50 ರೂಪಾಯಿ
ಆಲೂಗಡ್ಡೆ- 35 ರಿಂದ 40 ರೂಪಾಯಿ
ಬೀನ್ಸ್ - 60 ರೂಪಾಯಿ
ಕ್ಯಾರೆಟ್ - 60 ರಿಂದ 80 ರೂಪಾಯಿ
ಗ್ರೀನ್ ಕ್ಯಾಪ್ಸಿಕ್ಸಂ - 50 ರೂಪಾಯಿ
ಯೆಲ್ಲೋ, ರೆಡ್ ಕ್ಯಾಪ್ಸಿಕ್ಸಂ - 150ರಿಂದ 180 ರೂಪಾಯಿ
ಇದನ್ನೂ ಓದಿ: ಫೆಂಗಲ್ ಚಂಡಮಾರುತದ ಎಫೆಕ್ಟ್: ದಾವಣಗೆರೆಯಲ್ಲಿ ಅರ್ಧಕ್ಕೆ ನಿಂತ ಭತ್ತದ ಕಟಾವು