ಹೈದರಾಬಾದ್: ಕಳೆದ 17 ಲೋಕಸಭೆ ಚುನಾವಣೆಯಲ್ಲಿ (1952-2019) ಕರ್ನಾಟಕದಿಂದ 12 ಮಹಿಳಾ ಸಂಸದರು ಪೂರ್ಣಾವಧಿಗೆ ಆಯ್ಕೆಯಾಗಿದ್ದಾರೆ. ಜೊತೆಗೆ ಮೂವರು ಉಪಚುನಾವಣೆಗಳಲ್ಲಿ ಗೆದ್ದಿದ್ದಾರೆ. ಅಂದರೆ ಒಟ್ಟು 15 ಮಹಿಳಾ ಸಂಸದೆಯರು ದೆಹಲಿಯಲ್ಲಿ ಕರ್ನಾಟಕದ ಪರವಾಗಿ ಧ್ವನಿಯೆತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿದ್ದು, ಮತ್ತು ದೇಶದ ಗಮನ ಸೆಳೆದ ಚುನಾವಣೆ ಎಂದರೆ ಅದು 1978ರಲ್ಲಿ ನಡೆದ ಚಿಕ್ಕಮಗಳೂರು ಉಪ ಚುನಾವಣೆ. ಏಕೆಂದರೆ ಈ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು ಇಂದಿರಾಗಾಂಧಿ. ಇಂದಿರಾಗೆ ರಾಜಕೀಯ ಮರು ಜನ್ಮ ನೀಡಿದ್ದು ಕರ್ನಾಟಕದ ಚಿಕ್ಕಮಗಳೂರು.
1956ರಲ್ಲಿ ಕರ್ನಾಟಕ ರಾಜ್ಯ ಏಕೀಕರಣವಾಗುವರೆಗೂ ಮೈಸೂರು ಪ್ರಾಂತ್ಯ ಎಂದು ಕರೆಯಲಾಗುತ್ತಿತ್ತು. ಮೈಸೂರು ಪ್ರಾಂತ್ಯದಿಂದ ಸಂಸದೆಯಾಗಿ ಆಯ್ಕೆಯಾದ ಮೊಟ್ಟ ಮೊದಲ ಎಂಪಿ ಎಂದರೆ ಅದು ಸರೋಜಿನಿ ಬಿಂದುರಾವ್ ಮಹಿಷಿ. 1973 ರಲ್ಲಿ ಕರ್ನಾಟಕ ಎಂದು ನಾಮಕರಣವಾದ ಬಳಿಕವೂ ಸರೋಜಿನಿ ಮಹಿಷಿ ಅವರೇ ಏಕೈಕ ಮಹಿಳಾ ಸಂಸದೆಯಾಗಿದ್ದರು. ಇವರು ನಾಲ್ಕು ಬಾರಿ ರಾಜ್ಯದಿಂದ ಆಯ್ಕೆಯಾಗಿದ್ದಾರೆ.
ಕರ್ನಾಟಕದ ಜಿದ್ದಾಜಿದ್ದಿನ ಲೋಕಸಭೆ ಕದನವನ್ನೂ ಕಂಡಿದೆ. 1978 ರಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಲೋಕಸಭಾ ಉಪಸಮರದಲ್ಲಿ ಸ್ಪರ್ಧಿಸಿದಾಗ ವಿಶ್ವಮಟ್ಟದಲ್ಲಿ ಸದ್ದು ಮಾಡಿತ್ತು. ಇಂತದ್ದೇ ಸೌಂಡ್ ಮಾಡಿದ್ದು 1999 ರಲ್ಲಿ ಸೋನಿಯಾ ಗಾಂಧಿ ಮತ್ತು ಸುಷ್ಮಾ ಸ್ವರಾಜ್ ಅವರು ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಾಗ.
ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಬಳಿಕ ನಡೆದ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ಪಾರಂಪರಿಕ ಉತ್ತರ ಪ್ರದೇಶದ ಲೋಕ ಕದನದಲ್ಲಿ ಸೋಲು ಕಂಡಿದ್ದರು. ಇದಾದ ಬಳಿಕ ಅವರು ಕರ್ನಾಟಕದಿಂದ ಸ್ಪರ್ಧಿಸಿ ರಾಜಕೀಯ ಪುನರ್ಜನ್ಮ ಪಡೆದಿದ್ದರು. ಇದಲ್ಲದೇ, 17 ಚುನಾವಣೆಗಳಲ್ಲಿ 1991ರಲ್ಲಿ ಮಾತ್ರ ಮೂವರು ಮಹಿಳೆಯರು ಏಕಕಾಲಕ್ಕೆ ಸಂಸತ್ತಿಗೆ ಆಯ್ಕೆಯಾಗಿದ್ದರು. ಬಳ್ಳಾರಿಯಿಂದ ಬಸವರಾಜೇಶ್ವರಿ, ಚಿಕ್ಕಮಗಳೂರಿನಿಂದ ಡಿ.ಕೆ. ತಾರಾದೇವಿ ಮತ್ತು ಮೈಸೂರಿನಿಂದ ಚಂದ್ರಪ್ರಭಾ ಅರಸ್ ಅವರು ಆಯ್ಕೆಯಾಗಿದ್ದರು.
ಪಕ್ಷವಾರು ಆಯ್ಕೆ: 1962 ರಿಂದ 2019 ರ ನಡುವೆ ನಡೆದ 17 ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ನಿಂದ ಅತಿ ಹೆಚ್ಚು ಮಹಿಳೆಯರು ಸಂಸತ್ತಿಗೆ ಆಯ್ಕೆಯಾಗಿ ಹೋಗಿದ್ದಾರೆ. ಆ ಪಕ್ಷದಿಂದ 13 ಮಹಿಳಾ ಅಭ್ಯರ್ಥಿಗಳು ಗೆದ್ದಿದ್ದರೆ, ಬಿಜೆಪಿಯಿಂದ 4, ಜೆಡಿಯುನಿಂದ ಒಬ್ಬ ಮಹಿಳೆ ಗೆಲುವಿನ ನಗೆ ಬೀರಿದ್ದಾರೆ. ಒಬ್ಬರು ಪಕ್ಷೇತರರಾಗಿ ಆಯ್ಕೆ ಆಗಿದ್ದಾರೆ.
2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್, ಜೆಡಿಎಸ್ - ಕಾಂಗ್ರೆಸ್ನ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿ ಭರ್ಜರಿ ಗೆಲುವು ಸಾಧಿಸಿದ್ದರು.
ಉಪ ಚುನಾವಣಾ ಫಲಿತಾಂಶ: ಉಪ ಚುನಾವಣೆಗಳಲ್ಲೂ ಮಹಿಳೆಯರು ಗೆಲುವಿನ ನಗೆ ಬೀರಿದ್ದಾರೆ. ಮಂಗಳಾ ಅಂಗಡಿ, ನಟಿ ರಮ್ಯಾ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಜಯ ಕಂಡಿದ್ದಾರೆ. 1978 ರಲ್ಲಿ ಚಿಕ್ಕಮಗಳೂರು ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಗೆಲುವು ಸಾಧಿಸಿ ರಾಜಕೀಯ ಜೀವನದಲ್ಲಿ ತಿರುವು ಪಡೆದಿದ್ದರು. ಅವರ ಪ್ರತಿಸ್ಪರ್ಧಿ ಜನತಾ ಪಾರ್ಟಿ( ಜನತಾಪಕ್ಷ)ಯ ವೀರೇಂದ್ರ ಪಾಟೀಲ್ ವಿರುದ್ಧ 70 ಸಾವಿರ ಮತಗಳಿಂದ ಗೆದ್ದಿದ್ದರು.
2013ರಲ್ಲಿ ಮಂಡ್ಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ ನಟಿ ರಮ್ಯಾ(ದಿವ್ಯ ಸ್ಪಂದನ) ಅವರು ಗೆಲುವು ಸಾಧಿಸಿದ್ದರು. ಇದಾದ ಬಳಿಕ ಕೇಂದ್ರದ ಮಾಜಿ ಸಚಿವ ಸುರೇಶ್ ಅಂಗಡಿ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ 2021 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಮಂಗಳಾ ಸುರೇಶ್ ಅಂಗಡಿ ಅವರು ಸ್ಪರ್ಧಿಸಿದ್ದರು. ಕಾಂಗ್ರೆಸ್ನ ಕಾರ್ಯಾಧ್ಯಕ್ಷರಾಗಿದ್ದ ಸತೀಶ್ ಜಾರಕಿಹೊಳಿ ಅವರನ್ನು 5,240 ಮತಗಳಿಂದ ಸೋಲಿಸಿದ್ದರು. ಸತೀಶ್ ಜಾರಕಿಹೊಳಿ ಅವರ 30 ವರ್ಷಗಳ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಮಹಿಳಾ ಸಂಸದೆಯೊಬ್ಬರು ಸೋಲುಣಿಸಿದ್ದು ಇತಿಹಾಸವಾಗಿದೆ.
ಆಯ್ಕೆಯಾದ ಸಂಸದೆಯರ ಪಟ್ಟಿ | ಪಕ್ಷ | ಕ್ಷೇತ್ರ | |
1 | ಸರೋಜಿನಿ ಬಿಂದುರಾವ್ ಮಹಿಷಿ | ಕಾಂಗ್ರೆಸ್ | ಧಾರವಾಡ ಉತ್ತರ |
2 | ಬಸವರಾಜೇಶ್ವರಿ | ಕಾಂಗ್ರೆಸ್ | ಬಳ್ಳಾರಿ |
3 | ಡಿ.ಕೆ. ತಾರಾದೇವಿ | ಕಾಂಗ್ರೆಸ್ | ಚಿಕ್ಕಮಗಳೂರು |
4 | ಚಂದ್ರಪ್ರಭಾ ಅರಸ್ | ಕಾಂಗ್ರೆಸ್ | ಮೈಸೂರು |
5 | ರತ್ನಮಾಲಾ ಧಾರೇಶ್ವರ್ ಸವಣೂರು | ಜೆಡಿಯು | ಚಿಕ್ಕೋಡಿ |
6 | ಸೋನಿಯಾ ಗಾಂಧಿ | ಕಾಂಗ್ರೆಸ್ | ಬಳ್ಳಾರಿ |
7 | ಆಳ್ವಾ ಮಾರ್ಗರೇಟ್ | ಕಾಂಗ್ರೆಸ್ | ಕೆನರಾ(ಉತ್ತರ ಕನ್ನಡ) |
8 | ತೇಜಸ್ವಿನಿ ರಮೇಶ್ | ಕಾಂಗ್ರೆಸ್ | ಕನಕಪುರ |
9 | ಮನೋರಮಾ ಮಧ್ವರಾಜ್ | ಬಿಜೆಪಿ | ಉಡುಪಿ |
10 | ಜೆ.ಶಾಂತಾ | ಬಿಜೆಪಿ | ಬಳ್ಳಾರಿ |
11 | ಶೋಭಾ ಕರಂದ್ಲಾಜೆ | ಬಿಜೆಪಿ | ಉಡುಪಿ- ಚಿಕ್ಕಮಗಳೂರು |
12 | ಸುಮಲತಾ ಅಂಬರೀಶ್ | ಪಕ್ಷೇತರ | ಮಂಡ್ಯ |
ಉಪ ಚುನಾವಣೆಯಲ್ಲಿ ಗೆದ್ದವರು | ಪಕ್ಷ | ಕ್ಷೇತ್ರ | |
13 | ಇಂದಿರಾ ಗಾಂಧಿ | ಕಾಂಗ್ರೆಸ್ | ಚಿಕ್ಕಮಗಳೂರು |
14 | ರಮ್ಯಾ (ದಿವ್ಯ ಸ್ಪಂದನಾ) | ಕಾಂಗ್ರೆಸ್ | ಮಂಡ್ಯ |
15 | ಮಂಗಳಾ ಅಂಗಡಿ | ಬಿಜೆಪಿ | ಬೆಳಗಾವಿ |
- 1962-2019ರವರೆಗೆ ಮಹಿಳಾ ಮತದಾರರು ಹಕ್ಕು ಚಲಾಯಿಸಿದ ವಿವರ ಹೀಗಿದೆ..
ವರ್ಷ | ಒಟ್ಟು ಮಹಿಳಾ ಮತದಾರರು | ಹಕ್ಕು ಚಲಾಯಿಸಿದವರು | ಶೇಕಡಾವಾರು |
---|---|---|---|
1962 | 5513993 | 2854100 | 51.76 |
1967 | 6257870 | 3651098 | 58.34 |
1971 | 6598795 | 3478367 | 52.71 |
1977 | 8162610 | 4743376 | 58.11 |
1980 | 9606787 | 4957213 | 51.6 |
1984 | 10365763 | 6308129 | 60.86 |
1989 | 13968457 | 8954732 | 64.11 |
1991 | 14111120 | 6929185 | 49.1 |
1996 | 15662388 | 8694923 | 55.51 |
1998 | 16333323 | 9950823 | 60.92 |
1999 | 16836520 | 10942454 | 64.99 |
2004 | 18986838 | 11962519 | 63 |
2009 | 20474457 | 11592518 | 56.62 |
2014 | 22621081 | 14876307 | 65.76 |
2019 | 25248925 | 17080301 | 67.65 |
2024 | - | - | - |
ಇದನ್ನೂ ಓದಿ: ನಾಳೆನೇ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಿದ್ರೆ ನಾನು ಚುನಾವಣೆಗೆ ನಿಲ್ಲುವುದಿಲ್ಲ: ಕೆ ಎಸ್ ಈಶ್ವರಪ್ಪ - KS ESHWARAPPA