ಕಾರವಾರ: ಶೈಕ್ಷಣಿಕ ಪ್ರವಾಸಕ್ಕೆ ಆಗಮಿಸಿ ಉತ್ತರ ಕನ್ನಡದ ಮುರುಡೇಶ್ವರ ಕಡಲತೀರದಲ್ಲಿ ನಾಪತ್ತೆಯಾಗಿದ್ದ ಮುಳಬಾಗಿಲು ತಾಲೂಕಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮೂವರು ವಿದ್ಯಾರ್ಥಿನಿಯರ ಮೃತದೇಹಗಳು ಇಂದು ಪತ್ತೆಯಾಗಿವೆ.
ಕೋಲಾರದ ಮುಳಬಾಗಿಲು ಮುರಾರ್ಜಿ ದೇಸಾಯಿ ವಸತಿ ಶಾಲೆಯಿಂದ ಒಟ್ಟು 46 ವಿದ್ಯಾರ್ಥಿಗಳು ಹಾಗೂ 7 ಮಂದಿ ಶಿಕ್ಷಕರು ಪ್ರವಾಸಕ್ಕೆ ಆಗಮಿಸಿದ್ದರು. ಆದರೆ, ನೀರಿನಲ್ಲಿ ಇಳಿದಿದ್ದ ಏಳು ಮಂದಿ ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿನಿ ಶ್ರಾವಂತಿ ಗೋಪಾಲಪ್ಪ (15) ನಿನ್ನೆಯೇ ಮೃತಪಟ್ಟಿದ್ದಾಳೆ. ಅಲೆಗೆ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದ ದೀಕ್ಷಾ (15), ಲಾವಣ್ಯಾ (15), ವಂದನಾ (15) ಈ ಮೂವರು ವಿದ್ಯಾರ್ಥಿಗಳ ಮೃತದೇಹಗಳು ಇಂದು (ಬುಧವಾರ) ಪತ್ತೆಯಾಗಿವೆ.
ಇನ್ನು ಸ್ಥಳೀಯ ಮೀನುಗಾರರು ಹಾಗೂ ಲೈಫ್ ಗಾರ್ಡ್ ಸಿಬ್ಬಂದಿಯಿಂದ ರಕ್ಷಣೆಗೊಳಗಾಗಿ ಗಂಭೀರ ಸ್ಥಿತಿಯಲ್ಲಿರುವ ಮೂವರು ವಿದ್ಯಾರ್ಥಿನಿಯರಾದ ಯಶೋಧಾ, ವೀಕ್ಷಣಾ, ಲಿಪಿಕಾ ಇಲ್ಲಿನ ಆರ್ಎನ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುದ್ದಿ ತಿಳಿದ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ, ರಕ್ಷಣೆ ಮಾಡಿರುವವರಿಂದ ಹಾಗೂ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದ ಸ್ಥಳೀಯರು ರಕ್ಷಣೆಗೆ ಬೇಕಾದ ಕನಿಷ್ಠ ಸೌಕರ್ಯವನ್ನು ನೀಡದೆ ಇರುವುದಕ್ಕೆ ಪ್ರವಾಸೋದ್ಯಮ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೈಫ್‌ಗಾರ್ಡ್ಸ್ ವಿದ್ಯಾರ್ಥಿಗಳ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ಅವರಿಗೆ ರಕ್ಷಣಾ ಕಾರ್ಯಾಚರಣೆಗೆ ಬೇಕಾದ ಅಗತ್ಯ ಯಾವುದೇ ಸಲಕರಣೆ ನೀಡಿಲ್ಲ. ಇದರಿಂದ ವಿದ್ಯಾರ್ಥಿನಿಯರ ಸಾವಿಗೆ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯೇ ಕಾರಣವಾಗಿದೆ. ಇನ್ನಾದರೂ ಅತಿ ಹೆಚ್ಚು ಪ್ರವಾಸಿಗರು ಆಗಮಿಸುವ ಮುರುಡೇಶ್ವರ ಕಡಲತೀರಕ್ಕೆ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿ ಅವರಿಗೆ ಅಗತ್ಯ ಪರಿಕರಗಳನ್ನು ನೀಡುವಂತೆ ಸ್ಥಳೀಯರಾದ ಮಂಜುನಾಥ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮುರುಡೇಶ್ವರಕ್ಕೆ ಪ್ರವಾಸ ಬಂದಿದ್ದ ಓರ್ವ ವಿದ್ಯಾರ್ಥಿನಿ ಸಮುದ್ರದಲ್ಲಿ ಮುಳುಗಿ ಸಾವು, ಮೂವರು ನಾಪತ್ತೆ