ಕಲಬುರಗಿ: ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮಾವ ಹಾಗೂ ಸೊಸೆ ಸಾವನ್ನಪ್ಪಿರುವ ಘಟನೆ ಕಲಬುರಗಿ ತಾಲೂಕಿನಲ್ಲಿ ಸೋಮವಾರ ನಡೆದಿದೆ. ಗುರುನಾಥ್(46) ಹಾಗೂ ಸಂಗೀತಾ (32) ಮೃತ ದುರ್ದೈವಿಗಳು.
ಘಟನೆಯಲ್ಲಿ ಲಕ್ಷ್ಮಣ್ ಎಂಬುವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಲಬುರಗಿ ತಾಲೂಕಿನ ಬೇಲೂರು ಗ್ರಾಮದಿಂದ ಬಸವಕಲ್ಯಾಣಕ್ಕೆ ಮದುವೆಗೆ ಎಂದು ಹೋಗುವಾಗ ದುರ್ಘಟನೆ ನಡೆದಿದೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲೆಯ ಪ್ರತ್ಯೇಕ ಪ್ರಕರಣ: - 8 ಜನರ ಮೇಲೆ ಮಾರಣಾಂತಿಕ ಹಲ್ಲೆ: ಉದ್ರಿಕ್ತರಿಂದ ಠಾಣೆಗೆ ಮುತ್ತಿಗೆ: ಸೇಡಂ ತಾಲೂಕಿನ ಊಡಗಿಯಲ್ಲಿ ಭಾನುವಾರ ರಾತ್ರಿ 9 ಗಂಟೆಗೆ ಸುಮಾರು 8 ಜನರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ್ದು, ಅವರೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಉದ್ರಿಕ್ತಗೊಂಡ ಅನ್ಯ ಕೋಮಿನ ಜನರು ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ರಾತ್ರಿ ಹತ್ತು ಗಂಟೆಗೆ ಪೊಲೀಸ್ ಠಾಣೆಯ ಮುಖ್ಯ ರಸ್ತೆ ತಡೆದು ಮತ್ತೊಂದು ಸಮಾಜದ ಮುಖಂಡರು ಹಾಗೂ ಯುವಕರು ಪ್ರತಿಭಟನೆ ಆರಂಭಿಸಿದರು.
ಮಲ್ಲಿಕಾರ್ಜುನ್ ಮತ್ತು ಅವರ ಸಹಚರರು ಹತ್ತರಿಂದ 15 ಜನ ಯುವಕರು ಸೇರಿ ಜವರ್ ಪಟೇಲ್(48), ಸೈಯದ್ ಹಮೀದ್(54), ಸೈಯದ್ ಮೋಸಿನ್(25), ರಸ್ತಾಗಿರ(22), ಚಾಂದ್ ಪಾಶಾ (25), ಸದ್ದಾಂ ಸೇರಿದಂತೆ ಒಟ್ಟು 8 ಜನರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದು, ಅವರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನಿನ ಶಿಕ್ಷೆಗೆ ಒಳಪಡಿಸಬೇಕು ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು.
ಕಳೆದ 23 ರಂದು ಮಧ್ಯರಾತ್ರಿಯಲ್ಲಿ ಊಡಗಿ ಗ್ರಾಮದ ಸರ್ಕಾರಿ ಆಸ್ಪತ್ರೆ ಬಳಿ ನಿಲ್ಲಿಸಿದ್ದ 4 ರಿಂದ 5 ಆಟೋಗಳನ್ನು ಯಾರೋ ಅಪರಿಚಿತ ವ್ಯಕ್ತಿಗಳು ಆಟೋ ಗ್ಲಾಸ್ ಹಾಗೂ ಟಾಪ್ ಜಖಂಗೊಳಿಸಿ ಹಾಳು ಮಾಡಿದ್ದರು. ಆ ಕುರಿತು ಮರುದಿನ 24ರಂದು ಪೊಲೀಸ್ ಠಾಣೆಗೆ ಸೈಯದ್ ಹಮೀದ್ ಮತ್ತು ಗುಲಾಮಸಾಬ್ ಅವರಿಬ್ಬರೂ ದೂರು ಸಲ್ಲಿಸಿದ್ದರು. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಪ್ರತಿಭಟನೆಕಾರರು ಆರೋಪಿಸಿದರು.
ಹಲ್ಲೆಯಿಂದಾಗಿ ಗಾಯಗೊಂಡವರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜವರ್ ಪಟೇಲ್ ಅವರಿಗೆ ತಲೆಗೆ ಗಂಭೀರ ಗಾಯಗಳಾಗಿದ್ದು, ಜಿಮ್ಸ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ರವಾನಿಸಿ ತುರ್ತು ಹವಾನಿಯಂತ್ರಿತ ಘಟಕದಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚೇಂದ್ರ, ಹೆಚ್ಚುವರಿ ವರಿಷ್ಠಾಧಿಕಾರಿ ಶ್ರೀನಿಧಿ, ಸಿಪಿಐ ಸಂಗಮನಾಥ್ ಹಿರೇಮಠ್, ಶಹಾಬಾದ್ ಸಿಪಿಐ ಶಂಕರಗೌಡ, ಮಂಜುನಾಥ್, ಸಿಪಿಐ ತಿರುಮೇಶ್ ಮುಂತಾದವರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಿದರು.
ಶಿವಮೊಗ್ಗದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನೋಡಿ ವಾಪಾಸ್ ಆಗುತ್ತಿದ್ದವ ಮಸಣಕ್ಕೆ: ಕಾರು ಮತ್ತು ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ್ದು, ಬೈಕ್ನ ಹಿಂಬದಿ ಸವಾರನ ಕಾಲು ಮುರಿದಿರುವ ಘಟನೆ ಸಾಗರ ತಾಲೂಕು ಗೌತಮಪುರದ ಬಳಿ ನಡೆದಿದೆ. ಬೈಕ್ ಸವಾರ ಭೀಮೇಶ್ (42) ಎಂಬುವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಹಿಂಬದಿ ಸವಾರ ಪ್ರತಾಪ್(26)ನ ಕಾಲು ಮುರಿತವಾಗಿದೆ. ಗಾಯಾಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರಗೆ ದಾಖಲಿಸಲಾಗಿದೆ.
ಸೋಮವಾರ ಶಿಕಾರಿಪುರ ತಾಲೂಕು ಕಪ್ಪನಹಳ್ಳಿ ಗ್ರಾಮದಲ್ಲಿ ರಾಜ್ಯ ಮಟ್ಟದ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆ ನೋಡಲು ಗೌತಮಪುರದ ನಿವಾಸಿಗಳಾದ ಭೀಮೇಶ್ ಹಾಗೂ ಪ್ರತಾಪ್ ತೆರಳಿದ್ದರು. ಹೋರಿ ಬೆದರಿಸುವ ಸ್ಪರ್ಧೆ ನೋಡಿ ವಾಪಸ್ ಆಗುವಾಗ ಬೈಕ್ಗೆ ಕಾರು ಡಿಕ್ಕಿ ಹೊಡೆದಿದೆ. ಈ ಕುರಿತು ಆನಂದಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಪ್ರತ್ಯೇಕ ರಸ್ತೆ ಅಪಘಾತ: ಇಬ್ಬರು ಮಕ್ಕಳು ಸೇರಿ ಐದು ಜನ ಸಾವು