ಗಂಗಾವತಿ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ತನ್ನ ಪುತ್ರನ ಕಣ್ಣುಗಳನ್ನು ದಾನ ಮಾಡುವ ಮೂಲಕ, ತಂದೆಯೊಬ್ಬರು ಪುತ್ರನ ಸಾವಿನಲ್ಲೂ ಸಾರ್ಥಕತೆ ಕಂಡುಕೊಂಡಿದ್ದಾರೆ.
ಭಟ್ಟರಹಂಚಿನಾಳ ಗ್ರಾಮದ ಶಿವಾಜಿ ಗಣೇಶನ್ ಎಂಬ ಯುವಕ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರಕ್ತಸ್ರಾವವಾಗಿದ್ದ ಕಾರಣ ಮೆದುಳು ನಿಷ್ಕ್ರಿಯವಾಗಿತ್ತು. ಪರಿಣಾಮ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು.
ಹುಬ್ಬಳ್ಳಿಯಿಂದ ವಾಪಸ್ ಗಂಗಾವತಿಗೆ ಪಾರ್ಥಿವ ಶರೀರ ತರುವ ವೇಳೆ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಮೃತ ಯುವಕನ ತಂದೆ ಪರಂಜ್ಯೋತಿ ಅವರನ್ನು ಸಂಪರ್ಕಿಸಿ ಮಾತನಾಡಿದ್ದಾರೆ. ಆಗ ತನ್ನ ಪುತ್ರನ ಕಣ್ಣುಗಳನ್ನು ದಾನ ಮಾಡಿ ಮತ್ತೊಬ್ಬರ ಬದುಕಿಗೆ ಬೆಳಕಾಗಲು ಅವರು ಮುಂದಾಗಿದ್ದಾರೆ. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ನಿತ್ಯಜ್ಯೋತಿ ಕಣ್ಣಿನ ವಿಭಾಗದ ಸಿಬ್ಬಂದಿಯನ್ನು ಕರೆಯಿಸಿ ಗಂಗಾವತಿ ಉಪವಿಭಾಗ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ನೇತ್ರದಾನ ಪಡೆಯಲಾಗಿದೆ.
ಈ ಬಗ್ಗೆ ಮಾತನಾಡಿದ ನೇತ್ರ ತಜ್ಞ ಹನುಮಂತಪ್ಪ, "ವ್ಯಕ್ತಿ ನಿಧನವಾಗಿ ಆರು ಗಂಟೆಯೊಳಗೆ ಆತನ ಕಣ್ಣುಗಳನ್ನು ತೆಗೆದು ಸಂರಕ್ಷಣೆ ಮಾಡಿಟ್ಟರೆ, ಮತ್ತೊಬ್ಬರಿಗೆ ಅಳವಡಿಸಬಹುದು. ಈ ಯುವಕ ಮೃತಪಟ್ಟು ಕೇವಲ ಮೂರು ಗಂಟೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಕಣ್ಣುಗಳನ್ನು ತೆಗೆಯಲಾಗಿದೆ" ಎಂದರು.
ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಡಾ.ಹನುಮಂತಪ್ಪ, ಉಪ ವಿಭಾಗ ಆಸ್ಪತ್ರೆಯ ವೈದ್ಯಾಧಿಕಾರಿ ಈಶ್ವರ ಸವಡಿ, ವೈದ್ಯ ಮಾಧವಶೆಟ್ಟಿ, ವೈದ್ಯ ವೆಂಕಟೇಶ ಭಾಗಿಯಾಗಿದ್ದರು. ಲಯನ್ಸ್ ಅಧ್ಯಕ್ಷ ಕೆ. ಸುಬ್ರಹ್ಮಣ್ಯೇಶ್ವರ ರಾವ್, ಕಾರ್ಯದರ್ಶಿ ರಾಘವೇಂದ್ರ ಸಿರಿಗೇರಿ, ಪ್ರಭುರೆಡ್ಡಿ, ಡಾ.ಶಿವಕುಮಾರ್ ಮಾಲಿ ಪಾಟೀಲ್ ಇದ್ದರು.
ಇದನ್ನೂ ಓದಿ: ಫ್ಲೈಓವರ್ ಕಾಮಗಾರಿಯ ರಾಡ್ ಬಿದ್ದು ಗಾಯಗೊಂಡಿದ್ದ ASI ಸಾವು: ನೇತ್ರದಾನ, ಸಾವಿನಲ್ಲೂ ಸಾರ್ಥಕತೆ - ASI died