ಕೊಪ್ಪಳ: ಲಕ್ಷಾಂತರ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಿತ್ತುಹೋಗಿರುವ ಹಿನ್ನೆಲೆಯಲ್ಲಿ ಹಲವು ತಜ್ಞರು ಸೇರಿಕೊಂಡು ತಾತ್ಕಾಲಿಕ ಗೇಟ್ ಅಳವಡಿಸುವ ಕಾರ್ಯದಲ್ಲಿ ನಿರತರಾಗಿದ್ದು, ಗೇಟ್ ಅಳವಡಿಕೆ ಯಶಸ್ವಿಯಾಗಲೆಂದು ರೈತರು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
ವಿಜಯನಗರದ ರಾಜ್ಯ ರೈತ ಸಂಘದ ಕಾರ್ಯಕರ್ತರು ಹೊಸಪೇಟೆಯ ಶ್ರೀ ವಿಜಯ ಮಹಾಗಣಪತಿ ದೇಗುಲದಲ್ಲಿ ಶುಕ್ರವಾರ ವಿಶೇಷ ಪೂಜೆ ಮಾಡಿದರು.
ಜಲಾಶಯದಲ್ಲಿ ದಿನದಿಂದ ದಿನಕ್ಕೆ ನೀರು ಕಡಿಮೆಯಾಗುತ್ತಿದೆ. ಇದರಿಂದ ರೈತರಿಗೆ ನೀರಿನ ಲಭ್ಯತೆ ಕಡಿಮೆಯಾಗುತ್ತದೆ. ನೀರು ಉಳಿಸುವ ನಿಟ್ಟಿನಲ್ಲಿ ನಿನ್ನೆಯಿಂದ ಗೇಟ್ ಅಳವಡಿಕೆ ಯತ್ನ ನಡೆದಿದೆ. ತಜ್ಞರ ಯತ್ನ ಸಫಲವಾಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.
ತುಂಗಭದ್ರಾ ಡ್ಯಾಂಗೆ ಬಾಗಿನ ಅರ್ಪಿಸಿಲ್ಲ: ತುಂಗಭದ್ರಾ ಜಲಾಶಯ ತುಂಬಿದ ತಕ್ಷಣ ಬಾಗಿನ ಅರ್ಪಿಸಬೇಕಾಗಿತ್ತು. ಗಂಗೆ ಶಾಂತವಾಗುತ್ತಿದ್ದಳು. ಟಿಬಿ ಬೋರ್ಡ್ನಲ್ಲಿ ಆಂಧ್ರ ಹಾಗೂ ತೆಲಂಗಾಣ ಅಧಿಕಾರಿಗಳೇ ತುಂಬಿಕೊಂಡಿದ್ದು, ಬಾಗಿನ ಅರ್ಪಿಸುವಲ್ಲಿ ವಿನಾಕಾರಣ ವಿಳಂಬ ಮಾಡಿದರು. ಅಲ್ಲದೇ ಡ್ಯಾಂನಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿಯೂ ಗೇಟ್ ಕಿತ್ತು ಹೋಗಿದೆ ಎಂದು ರೈತರು ದೂರಿದರು.
ಈ ಕುರಿತು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಮಾತನಾಡಿ, "ತುಂಗಭದ್ರಾ ಡ್ಯಾಂ ಕರ್ನಾಟಕ, ಆಂಧ್ರ, ತೆಲಂಗಾಣ ಹಾಗೂ ಪ್ರಮುಖವಾಗಿ ರಾಜ್ಯದಲ್ಲಿ ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರಿನ ಎಲ್ಲಾ ರೈತರ ಜೀವನಾಡಿಯಾಗಿದೆ. ಅಲ್ಲಿರುವ ಅಧಿಕಾರಿಗಳಿಂದ ಇವರಿಗೆಲ್ಲಾ ಅನ್ಯಾಯವಾಗಿದೆ. ನಾವು ಡ್ಯಾಂ ಒಳಗಡೆ ಹೋಗುವುದಕ್ಕೆ ಕೇಳುತ್ತಿದ್ದೇವೆ. ಆದರೆ ಅಲ್ಲೆಲ್ಲಾ ಗೇಟ್ ಹಾಕಿ, ಪೊಲೀಸರನ್ನು ನಿಲ್ಲಿಸಿದ್ದಾರೆ. ನಮ್ಮನ್ನು ಒಳಗೆ ಬಿಡುತ್ತಿಲ್ಲ, ಮಾಧ್ಯಮದವರನ್ನೂ ಬಿಡುತ್ತಿಲ್ಲ. ಆದರೆ ಏಕೆ ರಾಜಕೀಯ ವ್ಯಕ್ತಿಗಳನ್ನು ಬಿಡುತ್ತಿದ್ದಾರೆ" ಎಂದು ಪ್ರಶ್ನಿಸಿದರು.
ರೈತ ಸಣ್ಣಕ್ಕಿ ಬೈರಪ್ಪ ಮಾತನಾಡಿ, "ತುಂಗಭದ್ರಾ ಡ್ಯಾಂ 19ನೇ ಕ್ರಸ್ಟ್ ಗೇಟ್ ಕಾಮಗಾರಿ ಆದಷ್ಟು ಬೇಗ ಆಗಲಿ ಎಂದು ರೈತ ಸಂಘದ ವತಿಯಿಂದ ಪೂಜೆ ಮಾಡಿಸಿದ್ದೇವೆ. ನೀರು ಪೋಲಾಗುತ್ತಿರುವುದರಿಂದ ರೈತರಿಗೆ ಬಹಳ ದುಃಖವಾಗಿದೆ" ಎಂದರು.
ಗೇಟ್ ಅಳವಡಿಸುವ ಕಾರ್ಯ ವಿಳಂಬಕ್ಕೆ ಟಿಬಿ ಡ್ಯಾಂ ಬೋರ್ಡ್ ಕಾರಣ : ತುಂಗಭದ್ರಾ ಜಲಾಶಯದ ಗೇಟ್ ಡ್ಯಾಮೇಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಸ್ಟ್ ಗೇಟ್ ಅಳವಡಿಸುವ ಕಾರ್ಯ ವಿಳಂಬಕ್ಕೆ ಟಿಬಿ ಡ್ಯಾಂ ಬೋರ್ಡ್ ಕಾರಣ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದ್ದಾರೆ.
ತುಂಗಭದ್ರಾ ಜಲಾಶಯಕ್ಕೆ ಶುಕ್ರವಾರ ಭೇಟಿ ನೀಡಿದ ಬಳಿಕ ಗಾಲಿ ಜನಾರ್ದನರೆಡ್ಡಿ ವಿಡಿಯೋ ಹೇಳಿಕೆಯೊಂದನ್ನ ಹರಿಬಿಟ್ಟಿದ್ದಾರೆ. ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕಿತ್ತು ಹೋಗಿರುವುದರಿಂದ ಇದರ ಲಾಭವನ್ನ ಪಡೆಯುವ ಯೋಚನೆ ಕೆಲವರು ಮಾಡುತ್ತಿದ್ದಾರೆ. ಇದು ದುರ್ದೈವ. ಗೇಟ್ ಅಳವಡಿಸುವ ಕಾರ್ಯ ವಿಳಂಬವಾಗುತ್ತಿರೋದಕ್ಕೆ ಟಿಬಿ ಬೋರ್ಡ್ ಅಸಹಕಾರವೇ ಕಾರಣವಾಗಿದೆ ಎಂದರು.
ವೆಲ್ಡಿಂಗ್ ಮಾಡಲು ಪ್ಲ್ಯಾನ್ : ಶುಕ್ರವಾರ ಸಂಜೆ ಒಳಗಡೆ ತಾತ್ಕಾಲಿಕ ಗೇಟ್ ಅಳವಡಿಸುತ್ತೇವೆ ಎಂದು ತಜ್ಞರ ತಂಡ ಹೇಳಿತ್ತು. ಆದರೆ, ಶುಕ್ರವಾರ ಮದ್ಯಾಹ್ನದವರೆಗೂ ಯಾವುದೇ ಡೆವಲಪ್ಮೆಂಟ್ ಕಂಡುಬಂದಿಲ್ಲ. ಎರಡನೇ ದಿನದ ಕಾರ್ಯಾಚರಣೆ ಬೆಳಗ್ಗೆಯಿಂದ ಈವರೆಗೆ ಗೇಟ್ನ ಕೌಂಟರ್ ಬ್ಯಾಲೆನ್ಸ್ ಲಾಕ್ನ ತೆಗೆದಿದ್ದು ಬಿಟ್ಟರೆ ಈವರೆಗೆ ಬೇರೆ ಬೆಳವಣಿಗೆಯಾಗಿಲ್ಲ. ನಿನ್ನೆ ಇಡೀ ದಿನ ನಡೆದ ಪ್ರಯತ್ನದ ಬಳಿಕವೂ ಇಂದು ಕೂಡ ಕೆಲಸ ನಿಧಾನವಾಗಿದ್ದು, ಮೊದಲ ಎಲಿಮೆಂಟ್ನ್ನು ಎರಡು ತುಂಡುಗಳಾಗಿ ಜೋಡಿಸಿ ವೆಲ್ಡಿಂಗ್ ಮಾಡಲು ಪ್ಲ್ಯಾನ್ ಮಾಡಲಾಗಿದೆ ಎಂಬುದು ತಿಳಿದುಬಂದಿದೆ.