ಮೈಸೂರು: "ದೆಹಲಿಗೆ ಪ್ರತಿಭಟನೆ ನಡೆಸಲು ತೆರಳುತ್ತಿದ್ದ ರೈತರ ಬಂಧನ ಹಾಗೂ ಅವರ ಮೇಲೆ ಪೊಲೀಸರ ದೌರ್ಜನ್ಯ ಖಂಡಿಸಿ ಫೆಬ್ರವರಿ 16 ರಂದು ರೈತ ಸಂಘ ಸಂಯುಕ್ತ ಕರ್ನಾಟಕ ಸಮಿತಿಯಿಂದ ದೇಶಾದ್ಯಂತ ಹೋರಾಟಕ್ಕೆ ಕರೆ ನೀಡಿದೆ. ಇನ್ನು ಕರ್ನಾಟಕ ರೈತ ಸಂಘ ಗ್ರಾಮೀಣ ಭಾಗದಲ್ಲಿ ಬಂದ್ ಮಾಡುವ ಬಗ್ಗೆ ಚಿಂತನೆ ನಡೆಸಿದೆ" ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಇಂದು ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆ ಕುರಿತು ಈಟಿವಿ ಭಾರತ್ ಜೊತೆ ಮಾತನಾಡಿ, "ನರೇಂದ್ರ ಮೋದಿ ಅವರು ರೈತ ವಿರೋಧಿ ಎಂಬುದನ್ನು ಮತ್ತೆ ಸಾಬೀತು ಮಾಡಿದ್ದಾರೆ. 2020 ರಲ್ಲಿ ಶುರುವಾದಂತಹ ಹೋರಾಟ 383 ದಿನಗಳ ಕಾಲ ಸತತವಾಗಿ ನಡೆದಿತ್ತು. ಆ ಹೋರಾಟವನ್ನು ಹತ್ತಿಕ್ಕಲು ಮಾಡಬಾರದ ಕೆಲಸಗಳನ್ನು ಮಾಡಿದರು. ಬೇರೆ ದೇಶಗಳು ಛೀಮಾರಿ ಹಾಕಿದರು ಕೂಡ ಅದಕ್ಕೆ ಕೇರ್ ಮಾಡಲಿಲ್ಲ. ರೈತ ಹೋರಾಟಗಾರರ ಮೇಲೆ ಆರೋಪ ಮಾಡಿ ಅವರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದರು. ಕೊನೆಗೆ ರೈತ ಪರ ಹಲವು ಯೋಜನೆಗಳನ್ನು ರೂಪಿಸುತ್ತೇವೆ ಈ ಚಳವಳಿಯನ್ನು ವಾಪಸ್ ತೆಗೆದುಕೊಳ್ಳಿ ಎಂದರು. ಚಳುವಳಿಯನ್ನು ವಾಪಸ್ ತೆಗೆದುಕೊಂಡರೂ ಆ ಚಳವಳಿ ವಾಪಸ್ ಪಡೆಯುವ ಸಂದರ್ಭದಲ್ಲಿ ಅವರೇನು ವಾಗ್ದಾನ ಮಾಡಿದ್ದರೋ ಅದನ್ನು ಇದುವರೆಗೂ ಈಡೇರಿಸಲಿಲ್ಲ" ಎಂದು ಆರೋಪಿಸಿದರು.
"ಕೇಂದ್ರ ಸರ್ಕಾರ ರೈತರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸದ ಕಾರಣದಿಂದ ಮತ್ತೆ ರೈತರು ದೆಹಲಿಗೆ ಲಗ್ಗೆ ಇಡಲು ಹೊರಟರು. ಆಗಲಾದರೂ ರೈತರ ಕಷ್ಟ ಸುಖಗಳನ್ನು ಕೇಳಬಹುದಿತ್ತು. ಆದರೆ ಅದನ್ನು ಬಿಟ್ಟು ರೈತರ ಮೇಲೆ ಹಳೆ ಮಾರ್ಗವನ್ನೆ ಅನುಸರಿಸಿ, ರೈತರನ್ನು ತಡೆಯುವುದು, ಲಾಠಿ ಚಾರ್ಜ್ ಮಾಡಿಸುವುದು ತಪ್ಪು. ಇದನ್ನು ಯಾವ ಧರ್ಮವೂ ಒಪ್ಪಲ್ಲ, ರಾಜನೀತಿಯೂ ಒಪ್ಪಲ್ಲ. ಈ ರೀತಿ ಮಾಡುವುದು ಸಂವಿಧಾನಕ್ಕೆ ವಿರುದ್ಧವಾದದ್ದು, ಇದನ್ನು ತೀವ್ರವಾಗಿ ರೈತ ಸಂಘ ಖಂಡಿಸುತ್ತದೆ. ಸಂಯುಕ್ತ ಕರ್ನಾಟಕ ಹೋರಾಟದ ವತಿಯಿಂದ ಇಡೀ ದೇಶಾದ್ಯಂತ ಸರ್ಕಾರ ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿ ಗ್ರಾಮೀಣ ಬಂದ್ಗೆ ಕರೆ ನೀಡಿದೆ. ಇಂದು ಸಂಜೆ ಸಭೆ ಸೇರಿ ಕರ್ನಾಟಕದಲ್ಲಿ ಏನು ಮಾಡಬೇಕು ಎಂಬುದನ್ನು ತೀರ್ಮಾನ ಮಾಡಲಾಗುತ್ತದೆ" ಎಂದು ತಿಳಿಸಿದರು.
ರೈತರಿಗೆ ಪೂರಕವಾಗಿರುವ ಬಜೆಟ್ ಮಂಡನೆಯಾಗುವ ವಿಶ್ವಾಸ ಇದೆ: "ರಾಜ್ಯ ಸರ್ಕಾರದ ಬಜೆಟ್ ಕುರಿತಂತೆ ನಾವು ಬಹಳ ಅರ್ಥಪೂರ್ಣವಾದಂತಹ ಹಕ್ಕೊತ್ತಾಯವನ್ನು ತಜ್ಞರ, ಸಿಎಂ ಬಳಿ ಮಂಡಿಸಿದ್ದೇವೆ. ಈ ಬಾರಿಯ ಬಜೆಟ್ ರೈತರ ಪರವಾಗಿ ಇರಬೇಕು ಎಂದು ಕೇಳಿದ್ದೇವೆ. ತಾತ್ಕಾಲಿಕ ಸಮಸ್ಯೆಗಳನ್ನು, ಅಲ್ಪಕಾಲಿಕ ಸಮಸ್ಯೆಗಳು, ದೂರಗಾಮಿ ಸಮಸ್ಯೆಗಳನ್ನು ಹೋಗಲಾಡಿಸಬೇಕೆಂದು ಕೇಳಿದ್ದೇವೆ. ಈ ಮೂರು ಅಂಶಗಳ ಮೇಲೆ ನಾವು ಒತ್ತಡ ಹೇರಿದ್ದೇವೆ. ಮುಖ್ಯಮಂತ್ರಿಗಳು ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನು ನಮ್ಮ ಮುಂದೆ ಇಟ್ಟಿದ್ದರು, ಕೇಂದ್ರ ಸರ್ಕಾರದಿಂದ ಬರಬೇಕಾದಂತಹ ಪಾಲು ನಮಗೆ ಬರುತ್ತಿಲ್ಲ. ಈ ಆರ್ಥಿಕ ಮಿತಿಯಲ್ಲಿ ನಾನು ಕೃಷಿಕರಿಗೆ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ನಮ್ಮ ಆಸೆ ಬೆಟ್ಟದಷ್ಟು ಇದ್ದಾವೆ, ಅದರ ಮಿತಿಯೊಳಗೆ ರೈತರಿಗೆ ಪೂರಕವಾಗಿ ಬಜೆಟ್ ಮಂಡನೆಯಾಗುವ ವಿಶ್ವಾಸ ಇದೆ" ಎಂದರು.
ಇದನ್ನೂ ಓದಿ: ಸ್ವಾಮಿನಾಥನ್ ಆಯೋಗದ ಪ್ರಮುಖ 10 ಶಿಫಾರಸುಗಳು ಹೀಗಿವೆ