ಶಿವಮೊಗ್ಗ: ವಿಜಯದಶಮಿಯ ನಂತರ ಬರುವ ಹುಣ್ಣಿಮೆಯನ್ನು ಮಲೆನಾಡಿನಲ್ಲಿ ಭೂಮಿ ಹುಣ್ಣಿಮೆ ಎಂತಲೂ, ಬಯಲು ಸೀಮೆಯಲ್ಲಿ ಸೀಗೆ ಹುಣ್ಣಿಮೆ ಎಂದೂ ಕರೆಯುದುಂಟು. ಇದು ರೈತರಿಗೆ ಮಹತ್ವದ ಹಬ್ಬ. ಹೊಲ ಉಳುಮೆ ಮಾಡಿ, ಬಿತ್ತಿ, ಬೆಳೆದು, ಕಟಾವು ಮಾಡಿ, ಭೂಮಿಯಿಂದಲೇ ಜೀವನ ನಡೆಸುವ ರೈತರು ವರ್ಷಕ್ಕೊಮ್ಮೆ ಭೂಮಿ ತಾಯಿಗೆ ಪೂಜೆ ಸಲ್ಲಿಸಿ, ತನ್ನನ್ನು ಹಾಗೂ ತನ್ನ ಕುಟುಂಬವನ್ನೂ ಸಲಹು ಎಂದು ಬೇಡಿಕೊಳ್ಳುತ್ತಾರೆ.
ಚರಗ ಚೆಲ್ಲುವುದು ಎಂದರೇನು?: ಮುಂಗಾರು ಮಳೆಯಲ್ಲಿ ನಾಟಿ ಮಾಡಿ, ಪೈರು ಈಗ ಕಾಳು ಕಟ್ಟುವ ಸಮಯ. ಗರ್ಭಿಣಿಯರಿಗೆ ಯಾವ ರೀತಿ ವಿವಿಧ ಭೋಜನಗಳನ್ನು ಮಾಡಿ ಉಣಬಡಿಸುತ್ತಾರೋ ಅದೇ ರೀತಿ ಭೂಮಿ ಹುಣ್ಣಿಮೆಗೂ ಹತ್ತಾರು ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಮಲೆನಾಡಿನಲ್ಲಿ ಇದಕ್ಕಾಗಿ ಊರ ಜಾತ್ರೆಯಂತೆಯೇ ಜನ ಸೇರುವುದು ವಿಶೇಷ. ರಾತ್ರಿಯೇ ಅಡುಗೆ ಮಾಡಿ, ಸೂರ್ಯ ಹುಟ್ಟುತ್ತಲೇ ಜಮೀನಿಗೆ ಹೋಗಿ ಪೂಜೆ ಸಲ್ಲಿಸುವುದು ಪದ್ಧತಿ. ಭೂಮಿ ತಾಯಿಗೆ ನೈವೇದ್ಯ ಮಾಡಿ, ಅಡುಗೆಯನ್ನು ಸೇರಿಸಿ, ಜಮೀನಿನ ಸುತ್ತಲೂ ಹರಡಲಾಗುತ್ತದೆ. ಇದನ್ನು 'ಚರಗ ಚೆಲ್ಲುವುದು' ಎಂದೂ ಕರೆಯುತ್ತಾರೆ. ಹೀಗೆ ಮಾಡಿದರೆ ಉತ್ತಮ ಫಸಲು ಬರುತ್ತದೆ ಎಂಬುದು ರೈತರ ನಂಬಿಕೆ.
ಒಟ್ಟಿಗೆ ಕುಳಿತು ಭೋಜನ: ಪೂಜೆ ಮುಗಿದ ನಂತರ ಕುಟುಂಬಸ್ಥರೆಲ್ಲರೂ ಒಟ್ಟಿಗೆ ಕಳಿತು ಊಟ ಮಾಡುತ್ತಾರೆ. ಈ ಮೂಲಕ ತಮ್ಮ ಬಾಂಧವ್ಯ ಹೆಚ್ಚಿಸಿಕೊಂಡು ತಮ್ಮಲ್ಲಿರುವ ಮನಸ್ತಾಪವನ್ನು ದೂರ ಮಾಡುತ್ತಾರೆ. ಶಿವಮೊಗ್ಗದ ಪುರದಾಳು ಗ್ರಾಮಸ್ಥರು ಭೂಮಿ ಹುಣ್ಣಿಮೆಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿರುತ್ತಾರೆ.
ಗಮನ ಸೆಳೆಯುವ ಅಲಂಕೃತ ಬುಟ್ಟಿ: ಈ ಆಚರಣೆಯ ಕುರಿತು ರೈತ ಮಹಿಳೆ ತ್ರಿವೇಣಿ ಮಾತನಾಡಿ, ''ಈ ಹಬ್ಬವನ್ನು ಸೀಗೆಹುಣ್ಣಿಮೆ, ಭೂಮಿ ಹುಣ್ಣಿಮೆ ಎಂದೂ ಕರೆಯುತ್ತಾರೆ. ಅಲಂಕೃತ ಬುಟ್ಟಿಯೂ ಸಹ ಹಬ್ಬದಲ್ಲಿ ವಿಶೇಷತೆ ಪಡೆದುಕೊಂಡಿದೆ. ವಿಜಯದಶಮಿಯಂದು ಬುಟ್ಟಿಗೆ ಪೂಜೆ ಸಲ್ಲಿಸಿ, ಅಲ್ಲಿಂದ ತಯಾರು ಮಾಡಲಾಗುತ್ತದೆ. ನಂತರ ಇದಕ್ಕೆ ಕೆಮ್ಮಣ್ಣು ಹಚ್ಚಲಾಗುತ್ತದೆ. ಹೆಸರು ಕೂಡ ಬರೆಯುದುಂಟು. ಇದೇ ಬುಟ್ಟಿಯಲ್ಲಿ ಭೂಮಿ ಹುಣ್ಣಿಮೆಗೆಂದು ತಯಾರು ಮಾಡುವ ಅಡುಗೆಗಳನ್ನು ತುಂಬಿಕೊಂಡು ಜಮೀನಿಗೆ ಹೋಗುತ್ತೇವೆ. ಎಲ್ಲ ಅಡುಗೆ ರಾತ್ರಿಯೇ ತಯಾರು ಆಗಿರುತ್ತದೆ. ಸೀಮಂತ ಕಾರ್ಯವನ್ನು ಯಾವ ರೀತಿ ಮಾಡಲಾಗುತ್ತದೆಯೋ ಅದೇ ರೀತಿ ಭೂಮಿ ತಾಯಿಗೆ ಸಿಂಗಾರ ಮಾಡಿ, ಪೂಜೆ ಸಲ್ಲಿಸುತ್ತೇವೆ. ಈಗ ಬೆಳೆಗಳು ಕಾಳು ಕಟ್ಟುವ(ತೆನೆ) ಕಾಲ. ಇದು ರೈತರಿಗೆ ಹಬ್ಬವಿದ್ದಂತೆ. ಏಳು ರೀತಿಯ ಪಲ್ಯವನ್ನು ತಯಾರು ಮಾಡಿಕೊಂಡು, 101 ಕಾಡು ಸೂಪ್ಪು ತಂದು ಅದನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ವಿಶೇಷವಾಗಿ ಸೌತೆಕಾಯಿ ಕಡುಬನ್ನೇ ಮಾಡಬೇಕಾಗುತ್ತದೆ. ಪೂಜೆಯ ನಂತರ ಎಲ್ಲರೂ ಸೇರಿ ಊಟ ಮಾಡುತ್ತೇವೆ'' ಎಂದು ಅವರು ಹಬ್ಬದ ವಿಶೇಷತೆಯನ್ನು ಹಂಚಿಕೊಂಡರು.
ಗ್ರಾಮದ ನಿವಾಸಿ ರೋಹಿತ್ ಮಾತನಾಡಿ, "ಮಲೆನಾಡಿನಲ್ಲಿ ಈ ಹಬ್ಬಕ್ಕೆ ಸಾಕಷ್ಟು ವಿಶೇಷತೆಯಿದೆ. ನಮ್ಮ ಹಿರಿಯರು ಯಾವ ರೀತಿ ಆಚರಿಸಿಕೊಂಡು ಬಂದಿದ್ದರೋ ಹಾಗೆಯೇ ನಾವೂ ಆಚರಿಸುತ್ತಿದ್ದೇವೆ. ಲಿಂಗನಮಕ್ಕಿ ಡ್ಯಾಂನಿಂದ ಮುಳುಗಡೆಯಾಗಿದ್ದರಿಂದ ನಾವು ಸಾಗರ ತಾಲೂಕಿನಿಂದ ಪುರದಾಳು ಗ್ರಾಮಕ್ಕೆ ಬಂದಿದ್ದೇವೆ" ಎಂದು ಹೇಳಿದರು.
ಇದನ್ನೂ ಓದಿ: ಉಡುಪಿ ಶ್ರೀಕೃಷ್ಣಮಠದಲ್ಲಿ ಕದಿರು ಕಟ್ಟುವ ಹಬ್ಬ: ವಿಶೇಷ ಪೂಜೆ, ಭಕ್ತರಿಗೆ ಕದಿರು ವಿತರಣೆ