ಹಾವೇರಿ : ಜಿಲ್ಲೆಯ ಹಾನಗಲ್ ತಾಲೂಕಿನ ನರೇಗಲ್ ಕೆರೆ ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಒಂದು. ಸುಮಾರು 370 ಎಕರೆ ವಿಸ್ತೀರ್ಣ ಹೊಂದಿರುವ ಕೆರೆ ಅವಲಂಬಿಸಿ, ನಾಲ್ಕು ನೂರು ಎಕರೆಯಲ್ಲಿ ಅಡಕೆ, ವಿಳ್ಯದೆಲೆ, ಭತ್ತ ಬೆಳೆಯಲಾಗುತ್ತದೆ. ಆದರೆ, ಪ್ರಸ್ತುತ ವರ್ಷ ಬರಗಾಲದ ಹಿನ್ನೆಲೆಯಲ್ಲಿ ಕೆರೆ ಖಾಲಿ ಖಾಲಿಯಾಗಿದೆ.
ಕೆರೆಯ ದಂಡೆಯ ಕೆಳಗಿರುವ ಅಡಕೆ, ವಿಳ್ಯದೆಲೆ ತೋಟಗಳು ಒಣಗಲಾರಂಭಿಸಿವೆ. ಕೊಳವೆಬಾವಿಗಳನ್ನು ಆಶ್ರಯಿಸಿ ಬೆಳೆದಿರುವ ರೈತರು, ಕೊಳವೆ ಬಾವಿ ಯಾವಾಗ ಬಂದಾಗುತ್ತವೆ ಎಂದು ಆತಂಕದಲ್ಲಿದ್ದಾರೆ. ಈ ಮಧ್ಯೆ ನರೇಗಲ್ ಕೆರೆಯನ್ನು ಸಂಪೂರ್ಣವಾಗಿ ಹೂಳು ತೆಗೆದು ನೀರು ತುಂಬಿಸಿದರೆ ಎಂತಹ ಬರಗಾಲ ಸಹ ಎದುರಿಸಬಹುದು ಎನ್ನುತ್ತಾರೆ ನರೇಗಲ್ ಗ್ರಾಮದ ರೈತರು.
ಕೆರೆ ಸ್ವಚ್ಛಗೊಳಿಸಿ ಹೂಳು ತೆಗೆದು ತುಂಬಿಸಿದರೆ, ಎರಡು ವರ್ಷಗಳ ಕಾಲ ನಮಗೆ ನೀರಿನ ಕೊರತೆಯಾಗುವುದಿಲ್ಲ. ಆದರೆ
ಕಳೆದ ಮೂರು ವರ್ಷಗಳಿಂದ ಈ ಕುರಿತಂತೆ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಇಲ್ಲಿಯ ರೈತರು. ಇದರಿಂದ ತೀವ್ರ ಹತಾಶರಾಗಿರುವ ನರೇಗಲ್ ಗ್ರಾಮದ ರೈತರು, ಇದೀಗ ತಾವೇ ಹಣ ಕೂಡಿಸಿ ಕೆರೆಯ ಹೂಳು ಎತ್ತುತ್ತಿದ್ದಾರೆ. ಹತ್ತಾರು ಟ್ರ್ಯಾಕ್ಟರ್‌ಗಳು ಮತ್ತು ಒಂದು ಜೆಸಿಬಿಯಿಂದ ಕೆರೆ ಶುಚಿಗೊಳಿಸಿ, ಅದರಿಂದ ಕೆರೆ ಹೂಳನ್ನು ಜಮೀನುಗಳಿಗೆ, ತಗ್ಗುಗುಂಡಿಗಳಿಗೆ ಮುಚ್ಚುತ್ತಿದ್ದಾರೆ.
ಈ ಕೆರೆ ಭರಪೂರ ತುಂಬಿದರೆ ನರೇಗಲ್, ಕೂಡಲ, ವರದಿ, ಸಂಗೂರು, ಕುಳೇನೂರು ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಕೊಳವೆ ಬಾವಿಗಳು ತುಂಬುತ್ತವೆ. ಆದರೆ, ಕೆರೆ ತುಂಬಲು ಯಾವುದೇ ಯೋಜನೆಗಳನ್ನು ರೂಪಿಸಿಲ್ಲ. ಕೆರೆಯಿಂದ ಎರಡು ಕಿ. ಮೀ ದೂರದಲ್ಲಿ ವರದಾ ನದಿ ಹರಿಯುತ್ತದೆ. ಮಳೆಗಾಲದಲ್ಲಿ ಅಲ್ಲಿಂದ ನೀರು ಪಂಪ್ ಮಾಡಿ ಕೆರೆ ತುಂಬಿಸಬಹುದು. ಆದರೆ ಈ ಕಡೆ ಯಾರೂ ಗಮನ ನೀಡುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಇದರಿಂದಾಗಿ ದಿನದಿಂದ ದಿನಕ್ಕೆ ಕೆರೆ ಒತ್ತುವರಿಯಾಗುತ್ತಿದೆ. ಕೆರೆಯ ಆವರಣದಲ್ಲಿ ಎಲ್ಲೆಂದರಲ್ಲಿ ಜಾಲಿಗಿಡಗಳು ಸೇರಿದಂತೆ ಮುಳ್ಳು ಪೂದೆಗಳು ಬೆಳೆದು ನಿಂತಿವೆ. ಗ್ರಾಮದ ರೈತರೇ ಜೆಸಿಬಿ ಸಹಾಯದಿಂದ ಮುಳ್ಳಿನ ಪೂದೆ, ಜಾಲಿಗಿಡಗಳನ್ನು ತೆರವುಗೊಳಿಸಿ ಕೆರೆ ಹೂಳೆತ್ತುತ್ತಿದ್ದಾರೆ. ಈ ಮಧ್ಯೆ ಹೂಳೆತ್ತುವ ರೈತರ ಸಂಖ್ಯೆ ಸಹ ಅಧಿಕವಾಗಿದ್ದು, ಟ್ರ್ಯಾಕ್ಟರ್‌ಗಳ ಸಹಾಯದಿಂದ ಜಮೀನಿಗೆ ಕೆರೆಯ ಹೂಳು ಸಾಗಿಸುತ್ತಿದ್ದಾರೆ.
ಮುಂಜಾನೆ 9 ಗಂಟೆಯಿಂದ ಆರಂಭವಾಗುವ ಹೂಳೆತ್ತುವ ಕಾರ್ಯ ಸಂಜೆ ಆರು ಗಂಟೆಯವರೆಗೆ ಸಾಗುತ್ತದೆ. ಮಳೆ ಬರುವವರೆಗೆ ಕೆರೆಯ ಹೂಳು ತೆಗೆಯುವ ಇಂಗಿತವನ್ನ ಗ್ರಾಮಸ್ಥರು ವ್ಯಕ್ತಪಡಿಸುತ್ತಾರೆ. ಕೆರೆಯ ಹೂಳು ಸಾಕಷ್ಟು ಫಲವತ್ತಾಗಿದ್ದು, ಈ ಮಣ್ಣು ಜಮೀನುಗಳಿಗೆ ಹಾಕಿದರೆ ಅಧಿಕ ಇಳುವರಿ ಬರುತ್ತದೆ ಎನ್ನುತ್ತಾರೆ ರೈತರು.
ಈ ವರ್ಷ ಅತ್ಯಧಿಕ ಬರಗಾಲದ ವಾತಾವರಣವಿದ್ದು, ಸಾಕಷ್ಟು ನೊಂದಿದ್ದೇವೆ. ಎರಡು ಮೂರು ಬಾರಿ ಬಿತ್ತನೆ ಮಾಡಿ ಹಣ ಕಳೆದುಕೊಂಡಿದ್ದೇವೆ. ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇವೆ. ಆದರೂ ಸಹ ಸಾಲಸೋಲ ಮಾಡಿ ಕೆರೆಯ ಹೂಳು ಎತ್ತುತ್ತಿದ್ದೇವೆ. ಈ ವರ್ಷವಾದರೂ ಮುಂಗಾರು ಉತ್ತಮವಾಗಿ ಸುರಿದು, ರಾಜ್ಯವನ್ನ ಸಮೃದ್ದಿಗೊಳಿಸಬೇಕು ಎನ್ನುವ ಆಸೆಯನ್ನ ರೈತರು ವ್ಯಕ್ತಪಡಿಸುತ್ತಿದ್ದಾರೆ.
ನರೇಗಲ್ ಗ್ರಾಮದ ರೈತರ ಈ ಕಾರ್ಯ ಸುತ್ತಮುತ್ತಲಿನ ಗ್ರಾಮಗಳ ರೈತರ ಮೆಚ್ಚುಗೆಗೆ ಪಾತ್ರವಾಗಿದೆ. ಅಕ್ಕಪಕ್ಕದ ಗ್ರಾಮಗಳ ರೈತರು ತಮ್ಮ ತಮ್ಮ ಗ್ರಾಮಗಳಲ್ಲಿರುವ ಕೆರೆಗಳ ಹೂಳೆತ್ತುವ ಚಿಂತನೆಯನ್ನ ಈ ರೈತರಲ್ಲಿ ಹುಟ್ಟುಹಾಕಿದೆ.
ಇದನ್ನೂ ಓದಿ : ಭೀಕರ ಬರ; 125ಕ್ಕೂ ಗ್ರಾಮಗಳಿಗೆ ಕುಡಿಯಲು ನೀರೊದಗಿಸುವ ಸೂಳೆಕೆರೆ ಒಡಲು ಖಾಲಿ ಖಾಲಿ!