ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ ಹೆಸರುಕಾಳು ಇಳುವರಿ ಹೆಚ್ಚಾಗಿದೆ. ರೈತರು ಬೆಳೆ ಕಟಾವಿಗೆ ಮುಂದಾಗಿದ್ದಾರೆ. ಇನ್ನು ಕೆಲವೆಡೆ ಹೆಸರು ರಾಶಿ ಮಾಡಿ, ಕಾಳು ಒಣಗಿಸಲಾಗುತ್ತಿದೆ. ಮತ್ತೊಂದೆಡೆ, ಹೆಸರುಕಾಳು ಖರೀದಿ ಕೇಂದ್ರಗಳು ಆರಂಭವಾಗದ ಹಿನ್ನೆಲೆಯಲ್ಲಿ ರೈತರು ಆತಂಕಕ್ಕೊಳಗಾಗಿದ್ದಾರೆ.
ಕಳೆದ ವರ್ಷ ಬರದಿಂದ ತತ್ತರಿಸಿ ಹೋಗಿದ್ದ ರೈತರು, ಈ ಬಾರಿ ವರುಣನ ಕೃಪೆಯಿಂದ ಹೆಸರು ಬೆಳೆ ರೈತರ ಕೈಹಿಡಿದಿದೆ. ಆದರೆ, ಉತ್ತಮ ಬೆಲೆ ನಿರೀಕ್ಷೆಯಲ್ಲಿರುವ ರೈತರಿಗೆ ಸರ್ಕಾರ ಇದುವರೆಗೂ ಖರೀದಿ ಕೇಂದ್ರ ತೆರೆದಿಲ್ಲ. ಸರ್ಕಾರ ಖರೀದಿ ಕೇಂದ್ರ ತೆರೆಯದೇ ವಿಳಂಬ ಧೋರಣೆ ಮುಂದುವರಿಸಿದರೆ, ರೈತರ ಪರಿಶ್ರಮ ದಲ್ಲಾಳಿಗಳ ಪಾಲಾಗುವ ಸಾಧ್ಯತೆಯಿದೆ. ಜಿಲ್ಲೆಯಲ್ಲಿ ಒಟ್ಟು 39 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರುಕಾಳು ಬೆಳೆಯಲಾಗಿದೆ.
ಸವದತ್ತಿ ತಾಲೂಕಿನ ಕರಿಕಟ್ಟಿ ಗ್ರಾಮದ ರೈತ ದಾದಾಸಾಬ ಭಾವಾಖಾನ್ 'ಈಟಿವಿ ಭಾರತ್' ಜೊತೆಗೆ ಮಾತನಾಡಿ, 1 ಎಕರೆ ಹೆಸರು ಭಿತ್ತಿ, ರಾಶಿ ಮಾಡಲು ಕನಿಷ್ಠ 15 ರಿಂದ 20 ಸಾವಿರ ರೂ. ಖರ್ಚಾಗುತ್ತದೆ. ಈಗ ನೋಡಿದರೆ ಸೂಕ್ತ ಬೆಲೆ ಸಿಗುತ್ತಿಲ್ಲ. ವ್ಯಾಪಾರಿಗಳು ಹೇಳಿದ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಎದುರಾಗಿದೆ. ಹೀಗಾದರೆ ರೈತರು ಬದುಕೋದು ಹೇಗೆ?. ದೇಶದ ಬೆನ್ನೆಲುಬು ಎನ್ನುವ ರೈತನ ಬೆನ್ನು ಮುರಿಯುವ ಕೆಲಸವನ್ನು ಆಳುವವರು ಮಾಡುತ್ತಿದ್ದಾರೆ. ಕೂಡಲೇ ಖರೀದಿ ಕೇಂದ್ರ ತೆರೆದು ರೈತರಿಗೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿದರು.
ರೈತ ಮಂಜುನಾಥ್ ರೇವಣ್ಣವರ ಮಾತನಾಡಿ, 4 ಎಕರೆಯಲ್ಲಿ ಬೆಳೆದಿದ್ದ ಹೆಸರುಕಾಳು ರಾಶಿ ಮಾಡಿದ್ದೇನೆ. ಅತೀಯಾದ ಮಳೆಯಿಂದ ಅರ್ಧ ಹೆಸರು ಬೆಳೆ ಹಾನಿಯಾಗಿದ್ದು, ಈಗ ಅಂದಾಜು 15 ಕ್ವಿಂಟಾಲ್ ಅಷ್ಟೇ ಕೈಗೆ ಬಂದಿದೆ. ಇನ್ನೇನು ಮಾರಾಟ ಮಾಡಬೇಕು ಆದರೆ, ದರ ನೋಡಿದರೆ 6 ಸಾವಿರ ರೂ. ಇದೆ. ಈ ಮೊದಲು 14 ಸಾವಿರ ರೂ. ದರವಿತ್ತು. ಕೂಡಲೇ ಖರೀದಿ ಕೇಂದ್ರ ತೆರೆದು, 1 ಕ್ವಿಂಟಾಲ್ಗೆ 10 ರಿಂದ 15 ಸಾವಿರ ರೂ. ದರ ನೀಡಿದರೆ ರೈತರು ಉಳಿಯುತ್ತಾರೆ. ಇಲ್ಲದಿದ್ದರೆ ಬದುಕೋದು ತುಂಬಾ ಕಷ್ಟವಾಗುತ್ತದೆ ಎಂದು ಅಳಲು ತೋಡಿಕೊಂಡರು.
ಕೃಷಿ ಮಾರುಕಟ್ಟೆ ಉಪನಿರ್ದೇಶಕ ಎಂ.ಡಿ.ಚಬನೂರ ಮಾತನಾಡಿ, ಜಿಲ್ಲೆಯಲ್ಲಿ ಹೆಸರು ಅಧಿಕವಾಗಿ ಬೆಳೆದಿರುವ ಸವದತ್ತಿ, ರಾಮದುರ್ಗ, ಬೈಲಹೊಂಗಲ ತಾಲೂಕುಗಳಲ್ಲಿ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಹೆಸರು ಮಾರಾಟ ಆಗುತ್ತಿರುವ ಹಿನ್ನೆಲೆಯಲ್ಲಿ ಖರೀದಿ ಕೇಂದ್ರ ತೆರೆಯುವ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಸರ್ಕಾರ ಅನುಮತಿ ಕೊಟ್ಟ ತಕ್ಷಣ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಮಾಡಿ ಖರೀದಿ ಕೇಂದ್ರಗಳನ್ನು ತೆರೆದು, ರೈತರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ನಡೆದುಕೊಂಡೇ ತೆರಳುವ ಜನರ ಸಂಕಷ್ಟ ಕೇಳೋರಿಲ್ಲವೇ? - Suvarna Soudha Belagavi