ಬೆಂಗಳೂರು : ನಗರದ ಕುಮಾರ ಕೃಪಾ ರಸ್ತೆಯ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ರಷ್ಯಾದ ಪ್ರಸಿದ್ಧ ಕಲಾವಿದ ಮತ್ತು ತತ್ವಜ್ಞಾನಿ ನಿಕೋಲಸ್ ರೋರಿಚ್ ಅವರ 150 ನೇ ಜನ್ಮದಿನದ ಅಂಗವಾಗಿ 'ವಿಸ್ಪೋಮಿನಾಯ ರೋರಿಚ್' ಎಂಬ ವಿಶೇಷ ಚಿತ್ರಗಳ ಪ್ರದರ್ಶನ ನಡೆಯುತ್ತಿದೆ. ಇಲ್ಲಿ ಕಲೆ ಮತ್ತು ಸಾಂಸ್ಕೃತಿಕ ಪರಂಪರೆಗೆ ರೋರಿಚ್ ಅವರ ಅಸಾಧಾರಣ ಕೊಡುಗೆಗಳನ್ನು ಸ್ಮರಿಸಲಾಗುತ್ತಿದ್ದು, ಅವರ 36 ಸಾಂಪ್ರದಾಯಿಕ ಕೃತಿಗಳನ್ನು ಪ್ರದರ್ಶಿಸಲಾಗುತ್ತಿದೆ.
ಶುಕ್ರವಾರ ಪ್ರದರ್ಶನವನ್ನು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಿದ್ದರು. ರಷ್ಯಾದ ಕಾನ್ಸುಲ್ ಜನರಲ್ ವಲೇರಿ ಖೋಡ್ಜೆವ್ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ. ಎಲ್ ಶಂಕರ್ ಉಪಸ್ಥಿತರಿದ್ದರು. ಈ ಪ್ರದರ್ಶನ ನವೆಂಬರ್ 18ರ ವರೆಗೆ ಸಾರ್ವಜನಿಕರಿಗೆ ತೆರೆದಿರಲಿದೆ.
ನಿಕೋಲಸ್ ರೋರಿಚ್ 1874ರ ಅಕ್ಟೋಬರ್ 9 ರಂದು ಜನಿಸಿದ್ದರು. ರೋರಿಚ್ ರಷ್ಯಾದ ಮತ್ತು ಭಾರತೀಯ ಸಂಸ್ಕೃತಿಗಳನ್ನು ಅನನ್ಯವಾಗಿ ಮೇಳೈಸಿದರು. ಪಾಶ್ಚಾತ್ಯ ಕಲಾ ಪ್ರಕಾರಗಳನ್ನು, ಪೂರ್ವದ ಆಧ್ಯಾತ್ಮಿಕತೆಯನ್ನು ಸಂಯೋಜಿಸಿ ಚಿತ್ರಗಳನ್ನು ರಚಿಸಿದರು. ಅವರ ದೃಷ್ಟಿ ಕಲೆಯ ಆಚೆಗೂ ವಿಸ್ತರಿಸಿ ಯುದ್ಧದ ಸಮಯದಲ್ಲಿ ಸಾಂಸ್ಕೃತಿಕ ತಾಣಗಳ ರಕ್ಷಣೆಗಾಗಿ ಹೋರಾಡಿದರು. 1931ರ ರೋರಿಚ್ ಒಪ್ಪಂದವನ್ನೇ ಜಾರಿಗೆ ತರಲಾಯಿತು. ಸಂಘರ್ಷಗಳ ಸಮಯದಲ್ಲಿ ಸಾಂಸ್ಕೃತಿಕ ಸಂಪತ್ತನ್ನು ರಕ್ಷಿಸಲು ಈ ಒಪ್ಪಂದ ಮುನ್ನುಡಿ ಬರೆಯಿತು.
ಭಾರತದಲ್ಲಿ ರೋರಿಚ್ ಅವರ ಪರಂಪರೆಯನ್ನು ಅವರ ಮಗ ಸ್ವೆಟೊಸ್ಲಾವ್ ರೋರಿಚ್ ಮತ್ತು ಸೊಸೆ ಭಾರತೀಯ ನಟಿ ದೇವಿಕಾ ರಾಣಿ ಮುಂದುವರೆಸಿದರು. ಬೆಂಗಳೂರನ್ನು ತಮ್ಮ ಮನೆಯನ್ನಾಗಿ ಮಾಡಿಕೊಂಡರು. ಇವರಿಬ್ಬರು 1960 ರಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತನ್ನು ಸ್ಥಾಪಿಸಲು ಸಾಕಷ್ಟು ಸಹಾಯ ಸಹಕಾರವನ್ನು ನೀಡಿದರು.
ಈ ಕಾರ್ಯಕ್ಕೆ ಭಾರತ ಸರ್ಕಾರ ಕೂಡ ಪ್ರಶಸ್ತಿಯನ್ನು ಘೋಷಿಸಿತು. ರೋರಿಚ್ ಅವರು 1932ರಲ್ಲಿ ರಚಿಸಿದ ಚಿತ್ರಕಲೆ ಮಡೋನಾ ಒರಿಫ್ಲಮ್ಮ ಸಾಂಸ್ಕೃತಿಕ ಸ್ವತ್ತುಗಳ ರಕ್ಷಣೆಗಾಗಿ ಜಾಗತಿಕ ಚಳವಳಿಯನ್ನು ಪ್ರತಿನಿಧಿಸುತ್ತದೆ. ಒಟ್ಟಿನಲ್ಲಿ ಸಂಘರ್ಷದ ವೇಳೆ ಕಲೆ ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಅವರು ಜೀವನವನ್ನೇ ಮುಡಿಪಾಗಿಟ್ಟರು.
ಈಗ ಚಿತ್ರಕಲಾ ಪರಿಷತ್ನಲ್ಲಿ ನಡೆಯುತ್ತಿರುವ ಪ್ರದರ್ಶನ 36 ಕಲಾಕೃತಿಗಳನ್ನು ಒಳಗೊಂಡಿದೆ. ಪ್ರಮುಖವಾಗಿ ರೋರಿಚ್ ಅವರ ಸಹಿ ಇರುವ ಕೋಬಾಲ್ಟ್ ನೀಲಿ ಬಣ್ಣದಿಂದ ತುಂಬಿದ ಪರ್ವತ ಶ್ರೇಣಿಗಳ ಅದ್ಭುತ ಚಿತ್ರಣಗಳನ್ನು ತೆರೆದಿಟ್ಟಿದೆ.
ಇಯರ್ ಆಫ್ ರೋರಿಚ್- 2025 : ಕರ್ನಾಟಕ ಚಿತ್ರಕಲಾ ಪರಿಷತ್ತು 2025 ಅನ್ನು "ರೋರಿಚ್ ವರ್ಷ" ಎಂದು ಘೋಷಿಸಿದೆ. ಕಲೆ ಮತ್ತು ಸಾಂಸ್ಕೃತಿಕ ಸಂರಕ್ಷಣೆ ಎರಡರಲ್ಲೂ ಅವರ ಜೀವನ ಮತ್ತು ಪರಂಪರೆಯನ್ನು ಆಚರಿಸಲು ಒಂದು ವರ್ಷದ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಇದನ್ನೂ ಓದಿ : Art gallery: ಬೆಣ್ಣೆ ನಗರಿಯಲ್ಲಿ ವಿದ್ಯಾರ್ಥಿಗಳಿಂದ ಅರಳಿತು ಕಲಾಲೋಕ.. ಕಣ್ಮನ ಸೆಳೆಯುವ ಚಿತ್ರಕಲಾ ಪ್ರದರ್ಶನ