ಹಾವೇರಿ: ರಾಣೆಬೆನ್ನೂರು ತಾಲೂಕು ಇಟಗಿ ಗ್ರಾಮದ ಬಳಿ ಇರುವ ಕುಮದ್ವತಿ ನದಿಗೆ ಕಾರ್ಖಾನೆಯೊಂದು ಕಲುಷಿತ ನೀರು ಬಿಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಇಟಗಿ ಬಳಿ ಗೋಲ್ಡನ್ ಹ್ಯಾಚರೀಸ್, ಗ್ರೀನ್ ಎನರ್ಜಿ ಬಯೋ ರಿಫೈನರಿ ಲಿಮಿಟೆಡ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಕಾರ್ಖಾನೆಗಳು ಕಲುಷಿತ ನೀರನ್ನು ನದಿಗೆ ಬಿಟ್ಟಿವೆ ಎಂದು ನೈರ್ಮಲ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದೆ. ಆದರೆ, ನದಿಗೆ ಬಿಟ್ಟಿರುವ ನೀರು ಕಲುಷಿತ ಅಲ್ಲ ಎಂದು ಗ್ರೀನ್ ಎನರ್ಜಿ ಬಯೋ ರಿಫೈನರಿ ಲಿಮಿಟೆಡ್ ಕಂಪನಿಯ ಜನರಲ್ ಮ್ಯಾನೇಜರ್ ಲೋಕೇಶ್ ಸ್ಪಷ್ಟಪಡಿಸಿದ್ದಾರೆ.
"ಕಂಪನಿಯು ಅಕ್ಕಿನುಚ್ಚು ಮತ್ತು ಮೆಕ್ಕೆಜೋಳದಿಂದ ಎಥೆನಾಲ್ ಉತ್ಪಾದಿಸುವ ಕಾರ್ಖಾನೆಯನ್ನು ಸ್ಥಾಪಿಸಿದೆ. ಇದರ ಅಣಕು ಪ್ರಯೋಗ ನಡೆಯುತ್ತಿದೆ. ಪ್ರಯೋಗದ ವೇಳೆ ಅಕ್ಕಿನುಚ್ಚು ಓವರ್ ಫ್ಲೋ ಆಗಿ ನದಿಗೆ ಬಂದಿದೆ. ಅದು ಕಲುಷಿತವಾಗಿಲ್ಲ. ಈ ಕುರಿತಂತೆ ರೈತರಿಗೆ ಮನವರಿಕೆ ಮಾಡಲಾಗಿದ್ದು, ರೈತರು ಇದೀಗ ತಮ್ಮ ಜಮೀನುಗಳಿಗೆ ಆ ನೀರನ್ನು ಬಿಡಿಸಿಕೊಳ್ಳುತ್ತಿದ್ದಾರೆ. ನದಿಯಲ್ಲಿ ಸೇರಿರುವ ತ್ಯಾಜ್ಯದ ನೀರನ್ನು ಕಂಪನಿ ಹಗಲು ರಾತ್ರಿ ರೈತರ ಜಮೀನುಗಳಿಗೆ ಹರಿಸುತ್ತಿದೆ. ರೈತರು ಸಹ ಇದಕ್ಕೆ ಬೆಂಬಲ ನೀಡಿದ್ದಾರೆ" ಎಂದು ತಿಳಿಸಿದ್ದಾರೆ.
"ಗೋಲ್ಡನ್ ಹ್ಯಾಚರೀಸ್ ಮತ್ತು ಗ್ರೀನ್ ಎನರ್ಜಿ ಬಯೋ ರಿಫೈನರಿ ಲಿಮಿಟೆಡ್ ಕಂಪನಿ ಒಂದೇ ಜಾಗದಲ್ಲಿ ಅಕ್ಕಪಕ್ಕ ಕಾರ್ಯನಿರ್ವಹಿಸುತ್ತಿರುವ ಕಾರಣ, ಗೋಲ್ಡನ್ ಹ್ಯಾಚರೀಸ್ ನದಿಗೆ ಕಲುಷಿತ ನೀರನ್ನು ಬಿಡುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ಅದು ತಪ್ಪು, ನೀರು ಬಿಟ್ಟಿರುವುದು ಗ್ರೀನ್ ಎನರ್ಜಿ ಬಯೋ ರಿಫೈನರಿ ಲಿಮಿಟೆಡ್ ಕಂಪನಿ" ಎಂದು ಲೋಕೇಶ್ ಹೇಳಿದ್ದಾರೆ.
"ನೈರ್ಮಲ್ಯ ನಿಯಂತ್ರಣ ಮಂಡಳಿಗೆ ಯಾವುದೇ ಸೂಚನೆ ನೀಡದೆ ಕಾರ್ಖಾನೆಯವರು ಟ್ರಯಲ್ ರನ್ ಮಾಡಿದ್ದಾರೆ. ಅನುಮತಿ ಪಡೆಯದೆ ತ್ಯಾಜ್ಯವನ್ನು ನದಿಗೆ ಬಿಟ್ಟಿದ್ದಕ್ಕೆ ನೈರ್ಮಲ್ಯ ನಿಯಂತ್ರಣ ಮಂಡಳಿ ಕಂಪನಿಗೆ ನೋಟಿಸ್ ನೀಡಿದೆ. ಕಂಪನಿ ಅದಕ್ಕೆ ಸಮಜಾಯಿಷಿ ನೀಡುವವರೆಗೆ ಕಾರ್ಖಾನೆ ಆರಂಭಿಸುವಂತಿಲ್ಲ. ಕಾರ್ಖಾನೆ ಸ್ಥಳೀಯ 500 ಜನರಿಗೆ ಉದ್ಯೋಗ ನೀಡಿದ್ದು, ಈ ಎಲ್ಲಾ ತಪ್ಪುಗಳನ್ನು ತಿದ್ದಿಕೊಂಡ ನಂತರ ಕಾರ್ಖಾನೆ ಆರಂಭಿಸುವುದಾಗಿ ಕಂಪನಿ ತಿಳಿಸಿದೆ" ಎಂದು ಹಾವೇರಿ ಜಿಲ್ಲಾಧಿಕಾರಿ ರಘುನಂದನಮೂರ್ತಿ ಮಾಹಿತಿ ನೀಡಿದ್ದಾರೆ.
"ನದಿಯಲ್ಲಿನ ತ್ಯಾಜ್ಯ ನೀರನ್ನು ಗ್ರೀನ್ ಬಯೋ ರಿಫೈನರಿ ಬೇರೆ ಕಡೆ ಸ್ಥಳಾಂತರಿಸಿದೆ. ಈ ನೀರಿನಲ್ಲಿ ಗೊಬ್ಬರದ ಅಂಶ ಇರುವ ಕಾರಣ ರೈತರೇ ತಮ್ಮ ಜಮೀನುಗಳಿಗೆ ಈ ನೀರು ಬಿಟ್ಟುಕೊಳ್ಳುತ್ತಿದ್ದಾರೆ. ನೈರ್ಮಲ್ಯ ನಿಯಂತ್ರಣ ಮಂಡಳಿಯಿಂದ ಸ್ಪಷ್ಟ ನಿರ್ದೇಶನ ಬಂದ ನಂತರವಷ್ಟೇ ಕಾರ್ಖಾನೆ ಕೆಲಸ ಆರಂಭಿಸಲು ಅನುಮತಿ ನೀಡಲಾಗುವುದು" ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ರೀತಿ ನದಿಗೆ ತ್ಯಾಜ್ಯ ನೀರು ಬಿಟ್ಟಿರುವ ಬಗ್ಗೆ ರೈತರು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಎಥೆನಾಲ್ ಉತ್ಪಾದನೆಯಲ್ಲಿ ಈ ರೀತಿ ತ್ಯಾಜ್ಯದ ನೀರು ಬರುತ್ತದೆಯಾ? ಎಥೆನಾಲ್ ಉತ್ಪಾದನೆಯ ಟ್ರೈಯಲ್ ರನ್‌ನಲ್ಲಿ ಈ ರೀತಿ ಯಾಕೆ ಓವರ್ ಫ್ಲೋ ಆಯಿತು? ಓವರಫ್ಲೋ ಆಗಿರುವ ತ್ಯಾಜ್ಯ ನೀರು ಕುಮದ್ವತಿ ನದಿಗೆ ಹೇಗೆ ಸೇರಿತು? ಎಂದೆಲ್ಲಾ ರೈತರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವಿಶ್ವ ಪರಿಸರ ದಿನ: ಕೆರೆ ಪರಿಸರ ಹಾಳು ಖಂಡಿಸಿ ಗ್ರಾಮಸ್ಥರ ಪ್ರತಿಭಟನೆ - WORLD ENVIRONMENT DAY