ಬೆಂಗಳೂರು: ತಡವಾಗಿಯಾದರೂ ಮಾಲ್ಡೀವ್ಸ್‌ಗೆ ಭಾರತವೇ ನೆರೆಯ ರಾಷ್ಟ್ರ ಎಂದು ಮನವರಿಕೆಯಾಗಲಿದೆ. ಅದೇ ರೀತಿ ಶ್ರೀಲಂಕಾಕ್ಕೂ ಭಾರತವೇ ನೆಚ್ಚಿನ ಮಿತ್ರ ರಾಷ್ಟ್ರ ಎನ್ನುವುದು ಭವಿಷ್ಯದಲ್ಲಿ ತಿಳಿಯಲಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ವಿಶ್ಲೇಷಿಸಿದರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಗಣ್ಯರ ಜೊತೆ ವಿದೇಶಾಂಗ ಸಚಿವ ಜೈಶಂಕರ್ ಸಂವಾದ ನಡೆಸಿದರು. ನಗರದ ಖಾಸಗಿ ಹೋಟೆಲ್ನಲ್ಲಿ ವಿಜ್ಞಾನಿಗಳು, ವೈದ್ಯರು, ನಿವೃತ್ತ ಐಎಎಸ್/ಐಪಿಎಸ್ ಅಧಿಕಾರಿಗಳು, ಚಾರ್ಟೆಡ್ ಅಕೌಂಟೆಂಟ್‌ಗಳು ಸೇರಿದಂತೆ ವಿವಿಧ ವಲಯಗಳ ಗಣ್ಯರು ಸಂವಾದದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಜೈಶಂಕರ್, ಎಲ್ಲ ರಾಷ್ಟ್ರಗಳು ಕೂಡ ತಮ್ಮದೇ ಆದ ನೀತಿ - ನಿಲುವು ಹೊಂದಿದ್ದು ಅವು ಸ್ವಹಿತ ರಕ್ಷಣೆಯದ್ದಾಗಿರುತ್ತದೆ. ಹಾಗಾಗಿ ಭಾರತ ವಿದೇಶಗಳ ಜೊತೆಗಿನ ನೀತಿ, ನಿಲುವುಗಳಲ್ಲಿ ಉದಾರತೆ ತೋರುವಂತಹ ಅಗತ್ಯವೇನಿಲ್ಲ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಡಿಜಿಟಿಲೀಕರಣ, ಉದಯೋನ್ಮುಖ ತಂತ್ರಜ್ಞಾನ, ಹಸಿರು ಇಂಧನ ಇತ್ಯಾದಿ 36 ಉಪಕ್ರಮಗಳಲ್ಲಿ ಭಾರತ ಅತ್ಯಂತ ವಿಶ್ವಾಸಾರ್ಹ ಮತ್ತು ನಂಬಿಗಸ್ಥ ಸ್ನೇಹಿತ ಮತ್ತು ವ್ಯಾಪಾರ - ವಹಿವಾಟು ಅಭಿವೃದ್ಧಿಯಲ್ಲಿ ಭಾಗಿದಾರನಾಗಿ ವಿಶ್ವದಲ್ಲಿ ಗುರುತಿಸಿಕೊಂಡಿದೆ ಎಂದರು.
ನೆರೆಯ ದ್ವೀಪ ರಾಷ್ಟ್ರ ಮಾಲ್ಡೀವ್ಸ್ ಜೊತೆಗೆ ರಾಜತಾಂತ್ರಿಕ ಸಂಬಂಧದಲ್ಲಿ ಬಿರುಕು ಸೇರಿದಂತೆ ಇತ್ತೀಚಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಪ್ರಸ್ತಾಪಿಸಿದ ಜೈಶಂಕರ್, ಭಾರತೀಯ ಪ್ರವಾಸಿಗರ ನಿರೀಕ್ಷೆಯಲ್ಲಿ ದ್ವೀಪ ರಾಷ್ಟ್ರ ಇದೆ. ಮಾಲ್ಡೀವ್ಸ್ ಪ್ರವಾಸೋದ್ಯಮ ಅಭಿವೃದ್ಧಿಗೆ ಭಾರತದಲ್ಲಿ ರೋಡ್ ಶೋ ನಡೆಸುವ ಆ ರಾಷ್ಟ್ರದಿಂದ ಪ್ರಸ್ತಾವನೆ ಬಂದಿದೆ. ಏನೆಲ್ಲ ಘಟನೆಗಳು ನಡೆದರೂ ಕೂಡ ಭಾರತವೇ ನೆರೆಯ ರಾಷ್ಟ್ರವೆಂದು ಮಾಲ್ಡೀವ್ಸ್‌ಗೆ ನಿಧಾನವಾಗಿಯಾದರೂ ಮನವರಿಕೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಶ್ರೀಲಂಕಾ, ಭೂತಾನ್, ನೇಪಾಳ ವಿಚಾರದಲ್ಲಿ ಏನಾಯಿತು, ಈಗ ಏನೆಲ್ಲ ಬದಲಾವಣೆ, ಪರಿವರ್ತನೆಗಳಾಗಿವೆ ಎನ್ನುವುದೂ ನಮ್ಮ ಕಣ್ಮುಂದಿದೆ. ಶ್ರೀಲಂಕಾಕ್ಕೆ ಭಾರತವೇ ನೆಚ್ಚಿನ ಮಿತ್ರ ರಾಷ್ಟ್ರ ಮತ್ತು ಅಭಿವೃದ್ಧಿಗೆ ಆಧಾರಸ್ತಂಭ ಎನ್ನುವುದು ನೇಪಾಳಕ್ಕೂ ಅರ್ಥವಾಗಿ, ಇಂಧನ ಪೂರೈಕೆ ಕಾರ್ಯಜಾಲ ಸೃಷ್ಟಿಗೆ ಒಪ್ಪಿಕೊಂಡಿದೆ. ಕಳೆದ ಒಂದು ದಶಕದಲ್ಲಿ ರಾಜತಾಂತ್ರಿಕ ಸಂಬಂಧಗಳಿಗೆ ಹೊಸ ಭಾಷ್ಯ ಬರೆಯಲಾಗಿದೆ. ಮೋದಿ ಭಾರತದ ರಾಜನೀತಿಯಲ್ಲಿ ದಿಟ್ಟತನವಿದೆ. ದೇಶದ ನಾಗರಿಕರ ಹಿತ, ಸಮಗ್ರತೆ ರಕ್ಷಣೆ ಜೊತೆಗೆ ಬೇರೆ ದೇಶಗಳನ್ನು ಅಷ್ಟೇ ಗೌರವದಿಂದ ನೋಡುವಂತಹ ಛಾತಿಯಿದೆ. ಹಾಗೆಯೇ ವಿದೇಶಾಂಗ ನೀತಿಗೆ ಹೃದಯವಿದೆ ಎಂದು ತಿಳಿಸಿದರು.
ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ. ನಾವು ಈ ಪ್ರಯತ್ನಗಳನ್ನು ವಿಫಲಗೊಳಿಸಿ, ಪ್ರಜಾಪ್ರಭುತ್ವದ ವರ್ಚಸ್ಸು ಹೆಚ್ಚಿಸಬೇಕಿದೆ. ಶೇ 70ರಷ್ಟು ಮತದಾರರು ನಮ್ಮ ದೇಶದಲ್ಲಿ ತಮ್ಮ ಸ್ವಂತ ನಿರ್ಧಾರದ ಮೇಲೆ ಹಕ್ಕು ಚಲಾಯಿಸ್ತಾರೆ, ಜನ ಪ್ರಜ್ಞಾವಂತರಾಗ್ತಿದ್ದಾರೆ, ಯಾವ ಸರ್ಕಾರದಲ್ಲಿ ಏನಾಯಿತು ಅಂತ ಹೋಲಿಕೆ ಮಾಡುತ್ತಿದ್ದಾರೆ, ಯುಪಿಎ ಅವಧಿಯಲ್ಲಿ ಪಾಸ್‌ಪೋರ್ಟ್ ಪಡೆಯುವುದು ಎಷ್ಟು ಕಷ್ಟ ಆಗಿತ್ತು? ಈಗ ಎಷ್ಟು ಸುಲಭ? ಆಗಿನ ಸರ್ಕಾರದ ಯೋಜನೆಗಳು, ಈಗಿನ ಸರ್ಕಾರದ ಯೋಜನೆಗಳ ಬಗ್ಗೆ ಜನರ ನಡುವೆ ಚರ್ಚೆ ನಡೆಯುತ್ತಿದೆ, ಮೇಕ್ ಇನ್ ಇಂಡಿಯಾಕ್ಕೆ ಜನರ ಮೆಚ್ಚುಗೆ ಇದೆ, ಮೇಕ್ ಇನ್ ಇಂಡಿಯಾ ಮೂಲಕ ವರ್ಕ್ ಇನ್ ಇಂಡಿಯಾ, ವರ್ಕ್ ಫಾರ್ ಇಂಡಿಯಾ ಮನಸ್ಥಿತಿ ಬಂದಿದೆ ಎಂದರು.
ಇದನ್ನೂ ಓದಿ: ಇರಾನ್ ಜೊತೆ ಮಾತುಕತೆ ನಡೆಸಲಾಗಿದೆ, ಆದಷ್ಟು ಬೇಗ ಭಾರತೀಯರ ಬಿಡುಗಡೆಯಾಗಲಿದೆ: ಜೈಶಂಕರ್ - Iran israel row