ಮಂಡ್ಯ: ಜಿಲ್ಲೆಯಲ್ಲಿ ಪಟಾಕಿ ದುರಂತ ಸಂಭವಿಸಿದೆ. ಕಾಲಭೈರವೇಶ್ವರ ಹಬ್ಬಕ್ಕೆಂದು ಪಟಾಕಿ ಸಿಡಿಸಲು ಮದ್ದು ತುಂಬುವ ಕಾರ್ಯ ನಡೆಯುತ್ತಿತ್ತು. ಈ ವೇಳೆ ಸ್ಫೋಟ ಸಂಭವಿಸಿ ತಮಿಳುನಾಡು ಮೂಲದ ಕಾರ್ಮಿಕನೊಬ್ಬ ಸಾವಿಗೀಡಾಗಿ, ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ. ಈ ಘಟನೆ ತಾಲೂಕಿನ ಜಿ. ಕೆಬ್ಬಹಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ. ಮೃತರನ್ನು ತಮಿಳುನಾಡು ಮೂಲದ ರಮೇಶ್ (45) ಎಂದು ಗುರುತಿಸಲಾಗಿದೆ.
ಜಿ. ಕೆಬ್ಬಹಳ್ಳಿ ಗ್ರಾಮದಲ್ಲಿ ಹಬ್ಬ ಆಚರಣೆ ಸಂದರ್ಭದಲ್ಲಿ ಪಟಾಕಿ ಸಿಡಿಸುವ ಜವಾಬ್ದಾರಿಯನ್ನು ತಮಿಳುನಾಡು ಮೂಲದ ನಾಲ್ವರು ವ್ಯಕ್ತಿಗಳಿಗೆ ನೀಡಲಾಗಿತ್ತು. ಅದರಂತೆ ಈ ನಾಲ್ವರು ಗ್ರಾಮಕ್ಕೆ ಬಂದು ಆಲೆಮನೆಯೊಂದರಲ್ಲಿ ವಾಸ್ತವ್ಯ ಹೂಡಿದ್ದರು. ಇಂದು ಬೆಳಗ್ಗೆ ಪಟಾಕಿಗೆ ಮದ್ದು ತುಂಬುವ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
![TAMILNADU MAN DIES FIRECRACKERS POWDER EXPLOSION MANDYA](https://etvbharatimages.akamaized.net/etvbharat/prod-images/25-03-2024/21068950_sedfwefwefe.jpg)
ಗ್ರಾಮದಲ್ಲಿ ಅದ್ಧೂರಿಯಾಗಿ ನಡೆಯುವ ಕಾಲಭೈರವೇಶ್ವರ ಹಬ್ಬಕ್ಕೆಂದು ಪಟಾಕಿ ಸಿಡಿಸುವ ಜವಾಬ್ದಾರಿ ನೀಡಲಾಗಿತ್ತು.
ಭಾನುವಾರ ರಾತ್ರಿ ಹಬ್ಬ ಮುಗಿದಿದ್ದು, ಸೋಮವಾರ ಬೆಳಗ್ಗೆ ಆಲೆಮನೆಯಲ್ಲಿ ಮೂವರು ಕಾರ್ಮಿಕರು ನಿದ್ರೆ ಮಾಡುತ್ತಿದ್ದಾಗ ಮತ್ತೊಬ್ಬ ಕಾರ್ಮಿಕ ಉಳಿದ ಮದ್ದು ತುಂಬುವ ವೇಳೆ ಅವಘಡ ಸಂಭವಿಸಿದೆ.
ಸ್ಫೋಟದ ರಭಸಕ್ಕೆ ಆಲೆಮನೆ ಹೆಂಚುಗಳು ಹಾರಿ ಹೋಗಿ, ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ರಮೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಮಿಮ್ಸ್ ಅಸ್ಪತ್ರೆ(ಜಿಲ್ಲಾಸ್ಪತ್ರೆ) ಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಮಾಹಿತಿ ಮೇರೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ಭೇಟಿ ನೀಡಿ ಪರಿಶೀಲಿಸಿದರು. ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓದಿ: ಮೈಸೂರು: ಪತಿ ಅಗಲಿಕೆಯಿಂದ ಮನನೊಂದ ಪತ್ನಿ, ಮಗಳು ಆತ್ಮಹತ್ಯೆ - MOTHER AND DAUGHTER SUICIDE