ಬೆಂಗಳೂರು: ಸಾಧನೆಗೆ ಮಿತಿ ಎಂಬುದು ಇಲ್ಲ. ಪ್ರತಿನಿತ್ಯ ಹೊಸ ಕಲಿಕೆ ಸಾಧನೆಯಿಂದ ನಮ್ಮ ದೇಶವನ್ನು ಮುನ್ನಡೆಸಬೇಕೆಂದು ಯು.ಆರ್. ರಾವ್ ಉಪಗ್ರಹ ಕೇಂದ್ರದ ನಿರ್ದೇಶಕ, ಚಂದ್ರಯಾನ-3ರಲ್ಲಿ ಭಾಗಿಯಾಗಿರುವ ಇಸ್ರೋ ಹಿರಿಯ ವಿಜ್ಞಾನಿ ಎಂ. ಸಂಕರನ್ ತಿಳಿಸಿದರು.
ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ರಾಜ್ಯ ಜಲ ಸಂಪನ್ಮೂಲ ಇಲಾಖೆ, ರಾಷ್ಟ್ರೀಯ ಜಲ ವಿಜ್ಞಾನ ಯೋಜನೆ, ಭಾರತೀಯ ಜಲಸಂಪನ್ಮೂಲ ಪರಿಷತ್, ಭಾರತೀಯ ವಿಜ್ಞಾನ ಸಂಸ್ಥೆ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ 'ರಾಷ್ಟ್ರೀಯ ಬಾಹ್ಯಾಕಾಶ ದಿನ'ದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಚಂದ್ರಯಾನ-3 ಯಶಸ್ವಿ ಉಡಾವಣೆಯು ಇಡೀ ದೇಶವೇ ಹೆಮ್ಮೆಪಡುವ ವಿಷಯ. ಅಷ್ಟಕ್ಕೇ ನಾವು ಸುಮ್ಮನಿರಬಾರದು. ಪ್ರತಿ ವರ್ಷವೂ ನಾವು ಏನಾದರೂ ಸಾಧನೆ ಮಾಡಬೇಕು. ಅದರಲ್ಲೂ ಯುವ ಜನರು ತಮ್ಮ ಗುರಿಯನ್ನು ಸಾಕಾರ ಮಾಡುವಲ್ಲಿ ಶ್ರಮಿಸಬೇಕು ಎಂದರು.
ಇಸ್ರೋ ಬಹಳಷ್ಟು ಸಾಧನೆ ಮಾಡಿದೆ. ಅದು ಏನು ಮಾಡಿದರೂ ಇಡೀ ಜಗತ್ತೇ ಗುರುತಿಸುತ್ತದೆ. ಭಾರತೀಯ ಬಾಹ್ಯಾಕಾಶದ ಪಿತಾಮಹ ಎಂದೇ ಹೆಸರಾಗಿರುವ ಡಾ. ವಿಕ್ರಮ ಸಾರಾಬಾಯಿ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಸ್ಥಾಪಕರು. ಮುಂದಿನ ವರ್ಷದ ವೇಳೆಗೆ ಅತ್ಯಂತ ದುಬಾರಿ ಉಪಗ್ರಹ ಎಂದೇ ಹೆಸರಾಗಿರುವ ನಿಸಾರ್ ಅನ್ನು ಇಸ್ರೋ - ನಾಸಾ ಜಂಟಿಯಾಗಿ ಅಭಿವೃದ್ಧಿಪಡಿಸಲಿದೆ. ಇದಕ್ಕೆ ಎರಡು ಬಿಲಿಯನ್ ಡಾಲರ್ ವೆಚ್ಚವಾಗಲಿದೆ. 2046ರ ವೇಳೆಗೆ ಚಂದ್ರಗ್ರಹದಲ್ಲಿ ಮಾನವ ಪ್ರವೇಶ ಮಾಡಿ ಮತ್ತು ಹೊರಬರಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಮುಂದಿನ ಗುರಿಗಳಲ್ಲಿ ಒಂದಾಗಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ಗೆ ವಿಟಿಯು ಗೌರವ ಡಾಕ್ಟರೇಟ್ ಪ್ರದಾನ - Somanath Gets Honorary Doctorate
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಡಬ್ಲ್ಯೂಸಿ ಮುಖ್ಯ ಇಂಜಿನಿಯರ್ ವೀರೇಂದ್ರ ಶರ್ಮಾ, ಕಳೆದ ವರ್ಷ ಆಗಸ್ಟ್ 23ರಂದು ಚಂದ್ರಯಾನ-3ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದೆವು. ಪ್ರತಿ ವರ್ಷ ಇದೇ ದಿನದಂದು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಆಚರಿಸಲು ನಿರ್ಧರಿಸಿದ್ದೇವೆ. ಇಂದಿನ ದಿನಗಳಲ್ಲಿ ನಾವು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಪ್ರಕೃತಿ ವಿಕೋಪ, ಹವಮಾನ ವೈಪರೀತ್ಯ, ಬರ ಹೀಗೆ ಅನೇಕ ಸಮಸ್ಯೆಗಳಿವೆ. ನಾವು ಜಲ ಮೂಲಗಳನ್ನು ಸರಿಯಾಗಿ ಬಳಕೆ ಮಾಡಿದರೆ ನೀರಿನ ಸಮಸ್ಯೆ ಪರಿಹಾರಗೊಳ್ಳುತ್ತದೆ. ಉಪಗ್ರಹಗಳಿಂದಲೂ ಬೆಳೆ ತೇವಾಂಶ, ಹವಾಮಾನ ವೈಪರೀತ್ಯ ಮುಂತಾದ ಅಂಶಗಳನ್ನು ಕಂಡುಹಿಡಿಯಬಹುದು ಎಂದರು.
ಕಾರ್ಯಕ್ರಮದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಡೀನ್ ಪಿ.ಎಸ್. ಅನಿಲ್ ಕುಮಾರ್, ಎಸ್.ಓ.ಎಲ್. ನಿರ್ದೇಶಕ ವೆಂಕಟೇಶ್ವರರಾವ್, ವಿಜ್ಞಾನಿಗಳಾದ ಶಕ್ತಿವೇಲ್, ಡಾ. ಚಂದ್ರಶೇಖರ್ ಕೆ., ಡಾ. ಬಿ. ವೆಂಕಟೇಶ್, ಜಲಸಂಪನ್ಮೂಲ ಇಲಾಖೆ ಮುಖ್ಯ ಇಂಜಿನಿಯರ್ ಸತೀಶ್ ಎಂ. ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.