ಬೆಂಗಳೂರು: ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಯಮಿತದಲ್ಲಿ (ಡಿಡಿಯುಟಿಟಿಎಲ್) ನಕಲಿ ದಾಖಲೆ ಸೃಷ್ಟಿಸಿ 47.10 ಕೋಟಿ ರೂ. ಹಗರಣ ನಡೆಸಿರುವ ಸಂಬಂಧ ದಾಖಲಾಗಿರುವ ದೂರು ರದ್ದು ಕೋರಿ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿಯ ವಿಧಾನಪರಿಷತ್ ಮಾಜಿ ಸದಸ್ಯ ಡಿ.ಎಸ್.ವೀರಯ್ಯ ಶನಿವಾರ ವಾಪಸ್ ಪಡೆದಿದ್ದಾರೆ.
ಡಿಡಿಯುಟಿಟಿಎಲ್‌ಯು ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್ ಅವರು ಬೆಂಗಳೂರಿನ ವಿಲ್ಸನ್ ಗಾರ್ಡನ್ ಠಾಣೆಗೆ ನೀಡಿರುವ ದೂರು ರದ್ದುಪಡಿಸುವಂತೆ ಕೋರಿ ವೀರಯ್ಯ ಸಲ್ಲಿಸಿದ್ದ ಅರ್ಜಿಯು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಪ್ರಕರಣ ಸಂಬಂಧ ಈಗಾಗಲೇ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ವಿಚಾರಣಾಧೀನ ನ್ಯಾಯಾಲಯವು ಆರೋಪಪಟ್ಟಿಯ ಸಂಜ್ಞೆವನ್ನು ಇನ್ನಷ್ಟೇ ಪರಿಗಣಿಸಬೇಕಾದ ಹಿನ್ನೆಲೆಯಲ್ಲಿ ಅರ್ಜಿಯನ್ನು ಹಿಂಪಡೆದಿದ್ದಾರೆ. ಜುಲೈ 12ರಂದು ವೀರಯ್ಯ ಅವರನ್ನು ಸಿಐಡಿ ಬಂಧಿಸಿತ್ತು. ಆನಂತರ ಅವರಿಗೆ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.
ಪ್ರಕರಣದ ಹಿನ್ನೆಲೆ: ಡಿ.ದೇವರಾಜ್ ಅರಸ್ ಟ್ರಕ್ ಟರ್ಮಿನಲ್ಸ್ ಲಿಮಿಟೆಡ್ ಕಂಪನಿ ವತಿಯಿಂದ ಡಿ.ಎಸ್.ವೀರಯ್ಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ತುಂಡು ಗುತ್ತಿಗೆ ಆಧಾರದ ಮೇಲೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಕಂಪನಿಯಿಂದ ಎಲ್ಲಾ ಟ್ರಕ್ ಟರ್ಮಿನಲ್‌ಗಳಲ್ಲಿ ಮತ್ತು ಟ್ರಕ್ ಟರ್ಮಿನಲ್‌ಗಳಿಗಾಗಿ ಪಡೆದಿರುವ ಜಮೀನಿನಲ್ಲಿ ಕೆಲವು ದುರಸ್ತಿ ಮತ್ತು ನಿರ್ವಹಣೆ ಕಾಮಗಾರಿ ಗುತ್ತಿಗೆಯು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯಿದೆಗೆ (ಕೆಪಿಟಿಟಿ) ವಿರುದ್ಧವಾಗಿದೆ ಎಂದು ಶಿವಪ್ರಕಾಶ್ ದೂರು ದಾಖಲಿಸಿದ್ದರು.
ಇದನ್ನೂ ಓದಿ: ಆರ್ಎಸ್ಎಸ್ ಮುಖಂಡನ ಹತ್ಯೆ ಕೇಸ್: 17 ಪಿಎಫ್ಐ ಆರೋಪಿಗಳಿಗೆ ಜಾಮೀನು, ಸುಪ್ರೀಂ ಮೆಟ್ಟಿಲೇರಿದ ಎನ್ಐಎ
ತಾನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜವಾಬ್ದಾರಿಯನ್ನು 2022ರ ನವೆಂಬರ್ 11ರಂದು ವಹಿಸಿಕೊಂಡಿದ್ದೇನೆ. ಕಂಪನಿಯ ಆಡಳಿತದಲ್ಲಿ ಕಂಡುಬಂದಿದ್ದ ನ್ಯೂನತೆ ಹಾಗೂ ಅಭಿವೃದ್ಧಿ ಕಾರ್ಯದ ವೆಚ್ಚದ ವಿವರ ಪರಿಶೀಲಿಸಲಾಗಿ, 47.10 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕೆಲಸಗಳು ಅನುಮಾನಾಸ್ಪದವಾಗಿದ್ದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ ಕಾರ್ಯದರ್ಶಿಗೆ 2022 ಮತ್ತು 2023ರಲ್ಲಿ ಮೂರು ಬಾರಿ ಸವಿವರ ವರದಿ ಸಲ್ಲಿಸಲಾಗಿತ್ತು. ಜೊತೆಗೆ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿದ್ದೇನೆ ಎಂದು ಶಿವಪ್ರಕಾಶ್ ದೂರಿನಲ್ಲಿ ತಿಳಿಸಿದ್ದರು. ಇದನ್ನು ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ವೀರಯ್ಯ, ಇದೀಗ ಅರ್ಜಿ ಹಿಂಪಡೆದಿದ್ದಾರೆ.
ಇದನ್ನೂ ಓದಿ: ಹರಾಜಿನಲ್ಲಿ ಖರೀದಿಸಿದ ಆಸ್ತಿಗೆ ಬಾಕಿ ಮೊತ್ತ ಪಾವತಿಸದಿದ್ದಲ್ಲಿ ಠೇವಣಿ ಮುಟ್ಟುಗೋಲು ಹಾಕಿಕೊಳ್ಳಬಹುದು; ಹೈಕೋರ್ಟ್