ಬೆಂಗಳೂರು : ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಬಂಧನ ರಾಜಕೀಯ ಪ್ರೇರಿತ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಜೆಪಿ ನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇವೇಗೌಡರ ಕುಟುಂಬಕ್ಕೆ ಕಳಂಕ ತರಲು ಈ ರೀತಿ ಮಾಡಿದ್ದಾರೆ. ದೇವರಾಜೇಗೌಡರನ್ನು ಈಗ ಕೇಸ್ ಹಾಕಿ ಅರೆಸ್ಟ್ ಮಾಡಿದ್ದು ಯಾಕೆ?. ಒಂದು ತಿಂಗಳಿನಿಂದ ಏನೇನೆಲ್ಲಾ ಬೆಳವಣಿಗೆ ಆಯಿತು. ದೊಡ್ಡ ತಿಮಿಂಗಲದ ಆಡಿಯೋ ಬಿಟ್ಟರೆಂದು ದೇವರಾಜೇಗೌಡರ ಬಂಧನ ಮಾಡಿದ್ದಾರಾ? ಎಂದು ಎಸ್ಐಟಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಂತ್ರಸ್ತೆಯರಿಗೆ ನ್ಯಾಯ ಸಿಗುವಂತೆ ಆಗಬೇಕು. ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಒಬ್ಬ ಮಹಿಳೆ ದೂರು ಕೊಟ್ಟಿದ್ದಾರಲ್ಲ, ಆ ಹೆಣ್ಣುಮಕ್ಕಳಿಗೆ ಹೆದರಿಸಿ ದೂರು ಪಡೆಯಲು ಪ್ರಯತ್ನ ಮಾಡ್ತಾ ಇದ್ದಾರೆ. ಅದೆಲ್ಲಾ ಕೆಲವೇ ದಿನಗಳಲ್ಲಿ ಹೊರಗೆ ಬರಲಿದೆ. ಅದರ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದಿರಿ ಗೃಹ ಸಚಿವರೇ? ಎಂದು ಹೆಚ್ಡಿಕೆ ಪ್ರಶ್ನಿಸಿದರು. ವಿದೇಶಕ್ಕೆ ಹೋಗಿರುವ ಪ್ರಜ್ವಲ್ರನ್ನು ಏಕೆ ಕರೆಸಿಲ್ಲ. ನನಗೆ ಅಣ್ಣನ ಮಗನೇ ಇರಬಹುದು. ನನ್ನ ಕೇಳಿ ಹೋಗಿದ್ದಾನಾ?. ಬೆಳೆದ ಮಕ್ಕಳು ನಮ್ಮನ್ನು ಕೇಳಿ ಹೋಗ್ತಾರಾ? ಎಂದರು.
ಇದು ಸಂತಸ ಪಡುವ ಸಮಯವಲ್ಲ : ಮಾಜಿ ಸಚಿವ ಹೆಚ್. ಡಿ. ರೇವಣ್ಣ ಜೈಲಿನಿಂದ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು, ಇದು ಸಂತಸ ಪಡುವ ಸಮಯವಲ್ಲ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಬೇಕು. ಸತ್ಯಾಸತ್ಯತೆ ಹೊರಬಂದ ನಂತರವಷ್ಟೇ ಸಂಭ್ರಮಿಸಿ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ ಅತ್ಯಂತ ಹೀನಾಯ ಘಟನೆ ನಡೆದಿದೆ. ಹೆಚ್.ಡಿ ರೇವಣ್ಣ ಕೂಡ ಎಸ್ಐಟಿಯಿಂದ ಆರೋಪ ಎದುರಿಸಬೇಕಾಯಿತು. ನಿನ್ನೆ ನಿರೀಕ್ಷಣಾ ಜಾಮೀನು ಸಿಕ್ಕಿದೆ. ಅದಕ್ಕೆ ನಾನು ಸಂತೋಷ ಪಡುವುದಿಲ್ಲ. ಕಾರ್ಯಕರ್ತರಿಗೂ ಹೇಳ್ತೇನೆ. ಇದು ಪಟಾಕಿ ಸಿಡಿಸಿ ಸಂಭ್ರಮಿಸುವ ಸಮಯ ಅಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆದಾಗ ಸಂಭ್ರಮ ಪಡಿ. ರಾಜ್ಯವೇ ತಲೆತಗ್ಗಿಸುವ ಘಟನೆ ಎಂದು ಹೇಳಿದರು.
ಎಸ್ಐಟಿ ಅಧಿಕಾರಿಗಳಿಗೆ ಹೇಳುತ್ತಿದ್ದೇನೆ.. ನಿಮಗೂ ಅಕ್ಕತಂಗಿ, ತಂದೆ, ತಾಯಿಗಳು ಇರ್ತಾರೆ. ಘಟನೆಗೆ ಕಾರಣವಾದ ಯಾವ ವ್ಯಕ್ತಿಯನ್ನೂ ಹಿಡಿಯಲಿಲ್ಲ. ಸರ್ಕಾರದ ಜವಾಬ್ದಾರಿ ಅದು. ಬಿಜೆಪಿಯ ಮಾಜಿ ಶಾಸಕರೊಬ್ಬರ ಎಡಬಲ ಇದ್ದವರನ್ನು ಹಿಡಿಯಲಾಗಿದೆ. ಇನ್ನೊಂದು ವಾರದಲ್ಲಿ ಮುಖ್ಯವಾದವರನ್ನು ಹಿಡಿಯಲಾಗುತ್ತದೆ ಅಂದಿದ್ದಾರೆ. ಹಾಗಾದರೆ ಎಸ್ಐಟಿ ತನಿಖೆ ಹೇಗೆ ಸೋರಿಕೆ ಆಗುತ್ತಿದೆ. ಎಫ್ಐಆರ್ ಆಗಿರುವ ಒಬ್ಬ ವ್ಯಕ್ತಿಯನ್ನೂ ಹಿಡಿಯಲಿಲ್ಲ. ಖಾಸಗಿ ಚಾನಲ್ನಲ್ಲಿ ಒಂದೂವರೆ ಗಂಟೆ ಕಾಲ ಸಂದರ್ಶನ ಮಾಡ್ತಾರೆ. ನವೀನ್ ಗೌಡ ನಮ್ಮ ಪಕ್ಷದ ಶಾಸಕರಿಗೆ ಪೆನ್ ಡ್ರೈವ್ ಕೊಟ್ಟಿದ್ದೀನಿ ಅಂತಾನೆ. ಕೆಲವೇ ಕ್ಷಣಗಳಲ್ಲಿ ಪೆನ್ಡ್ರೈವ್ ಬರುತ್ತದೆ ಅಂತಾ ಪೋಸ್ಟ್ ಮಾಡ್ತಾನೆ. ಅವನನ್ನು ಬಂಧನ ಮಾಡಿದಿರಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಪೆನ್ ಡ್ರೈವ್ ಪ್ರಕರಣದ ಬಗ್ಗೆ ನಾನು ಸಮಾಧಾನವಾಗಿ ಹೋರಾಟ ಮಾಡುತ್ತೇನೆ. ಏನು ಬದಲಾವಣೆ ತರುವುದಕ್ಕೆ ಆಗುತ್ತೋ ಅದು ಮಾಡ್ತೀನಿ. ನಾನು ನ್ಯಾಯಯುತ ಹೋರಾಟ ಮಾಡುತ್ತೇನೆ. ಪೆನ್ ಡ್ರೈವ್ ಪಕಣದಲ್ಲಿ ದೊಡ್ಡ ತಿಮಿಂಗಲ ಹಿಡಿಬೇಕು. ವಿಡಿಯೋದಲ್ಲಿ ಬಂದಂತಹ ಮಹಿಳೆಯರ ಕುಟುಂಬಗಳ ಬಗ್ಗೆ ಸರ್ಕಾರಕ್ಕೆ ಅನುಕಂಪ ಇದೆಯಾ?. ಇದರಲ್ಲಿ ಯಾವುದನ್ನೂ ವಹಿಸಿಕೊಳ್ಳುವ ಪ್ರಶ್ನೆ ಇಲ್ಲ. ಈಗಿನ ಮಾಹಿತಿ ತಂತ್ರಜ್ಞಾನದಲ್ಲಿ ಅಪರಾಧಿ, ನಿರಪರಾಧಿ ಆಗ್ತಾನೆ. ಸರ್ಕಾರಕ್ಕೆ ಬದ್ಧತೆ ಇದ್ದರೆ ತನಿಖೆಯನ್ನು ಸೂಕ್ತ ರೀತಿಯಲ್ಲಿ ನಡೆಸಲಿ ಎಂದು ಹೇಳಿದರು. ಕುಮಾರಸ್ವಾಮಿ ಅವರಿಗೆ ರೇವಣ್ಣ ಕುಟುಂಬ ಮುಗಿಸಲು ನೋಡ್ತಿದ್ದಾರೆ ಅಂತಾ ಅಪಪ್ರಚಾರ ಮಾಡ್ತಿದ್ದಾರೆ. ನಾನು ನ್ಯಾಯದ ಪರ, ಮಹಿಳೆಯರ ಪರ ಇದ್ದೇನೆ ಎಂದರು.
ಓದಿ: ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಆಸ್ತಿ ಮೌಲ್ಯ '0': ಆದರೆ, ಪತ್ನಿಯ ಹೆಸರಲ್ಲಿ! - D T Srinivas Asset