ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೂಚನೆಯಂತೆ ನಾನು ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡುವ ನಿರ್ಧಾರಕ್ಕೆ ಬಂದಿದ್ದೇನೆ. ಸಮೀಕ್ಷೆಗಳ ವರದಿಯ ಆಧಾರದಲ್ಲಿಯೇ ನನಗೆ ಟಿಕೆಟ್ ಸಿಕ್ಕಿದೆ ಎಂದು ಹಾವೇರಿ ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಗುರುವಾರ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.
ಪಕ್ಷದ ವರಿಷ್ಠರು ನಿರ್ಣಯ ಮಾಡಿ ನಿನ್ನೆ ಪ್ರಕಟಣೆ ಮಾಡಿದ್ದಾರೆ. ಸದಾಕಾಲ ರಾಜಕೀಯವಾಗಿ ಆಶೀರ್ವಾದ ಮಾಡಿ ಯಡಿಯೂರಪ್ಪ ಅವರು ಹರಸಿದ್ದಾರೆ. ಅವರ ಆಶೀರ್ವಾದ ಪಡೆದಿದ್ದೇನೆ. ಪ್ರಚಾರಕ್ಕೂ ಕೂಡ ಬರುತ್ತೇನೆ ಅಂತ ಹೇಳಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.
ಈಶ್ವರಪ್ಪ ಆರೋಪಕ್ಕೆ ಬೊಮ್ಮಾಯಿ ಸ್ಪಷ್ಟನೆ; ಹಾವೇರಿಯಿಂದ ಸ್ಪರ್ಧೆಗೆ ಬೊಮ್ಮಾಯಿಯವರನ್ನು ಬಲವಂತವಾಗಿ ಯಡಿಯೂರಪ್ಪ ಒಪ್ಪಿಸಿದ್ದಾರೆಂದು ಈಶ್ವರಪ್ಪ ನೀಡಿರುವ ಹೇಳಿಕೆ ಗಮನಿಸಿದ್ದೇನೆ. ಯಡಿಯೂರಪ್ಪ ಒಬ್ಬರನ್ನೇ ಬ್ಲೇಮ್ ಮಾಡುವ ಪ್ರಶ್ನೆ ಅಲ್ಲ. ಸಮಗ್ರವಾಗಿ ಕೇಂದ್ರದ ವರಿಷ್ಠರು ಎಲ್ಲಾ ಸರ್ವೆ ವರದಿಗಳನ್ನು ತೆಗೆದುಕೊಂಡು ನೀನು ನಿಲ್ಲಲೇಬೇಕು ಎಂದು ಸೂಚನೆ ಕೊಟ್ಟರು. ಪಾರ್ಲಿಮೆಂಟರಿ ಬೋರ್ಡ್ನಲ್ಲೂ ನನ್ನ ಹೆಸರು ಕ್ಲಿಯರ್ ಆಗಿರಲಿಲ್ಲ. ಆದರೆ, ಅಮಿತ್ ಶಾ ಮತ್ತು ಜೆಪಿ ನಡ್ಡಾ ಸಭೆಯಲ್ಲಿ ತೀರ್ಮಾನ ಆಗಿತ್ತು. ಪ್ರಧಾನಮಂತ್ರಿ ಏನು ತೀರ್ಮಾನ ಮಾಡ್ತಾರೋ ಅದರಂತೆ ನೀನು ಒಪ್ಕೊಬೇಕು ಎಂದು ಹೇಳಿದ್ದರು. ಅದರಂತೆ ನಾನು ಈಗ ಚುನಾವಣೆ ಸ್ಪರ್ಧೆಗೆ ನಿರ್ಧಾರ ಮಾಡಿದ್ದೇನೆ. ನನ್ನ ಆರೋಗ್ಯ ಖಂಡಿತವಾಗಿಯೂ ಮೊದಲಿನ ತರ ಇಲ್ಲ. ಆದರೆ, ಜವಾಬ್ದಾರಿ ಬಂದಾಗ ಅದನ್ನು ನಿಭಾಯಿಸುವ ಶಕ್ತಿ ನನಗಿದೆ ಎಂದರು.
ಈ ಬಾರಿ ಅಭ್ಯರ್ಥಿಗಳ ಆಯ್ಕೆ ವಿನೂತನ ರೀತಿಯಾಗಿದೆ. ಡಾ. ಮಂಜುನಾಥ್ ಅವರು ಲಕ್ಷಾಂತರ ಜನರಿಗೆ ಆರೋಗ್ಯ ಕಾಪಾಡಿದ್ದಾರೆ. ಒಳ್ಳೆಯ ಕೆಲಸ ಮಾಡಿದವರಿಗೆ ಪಕ್ಷ ಪುರಸ್ಕಾರ ನೀಡುತ್ತದೆ ಅನ್ನುವ ಸಂದೇಶ ನೀಡಿದೆ. ಮತ್ತೆ ಮಹಾರಾಜ ಯದುವೀರ ಒಡೆಯರ್ ಅವರಿಗೆ ಟಿಕೆಟ್ ನೀಡಿರುವುದು ದಕ್ಷಿಣ ಕರ್ನಾಟಕದಲ್ಲಿ ಒಳ್ಳೆಯ ಸಂದೇಶ ನೀಡಿದಂತಾಗಿದೆ. ದಕ್ಷಿಣ ಭಾರತದಲ್ಲಿ ಅಭಿವೃದ್ಧಿ ಆಗಿದ್ದರೆ ಅದಕ್ಕೆ ಒಡೆಯರ್ ಅವರು ಕಾರಣ. ಅವರು ಹಿಂದುಳಿದ ವರ್ಗದವರ ಅಭಿವೃದ್ಧಿ ಮಾಡಿದ್ದಾರೆ. ಆ ಮನೆತನಕ್ಕೆ ಟಿಕೆಟ್ ನೀಡಿರುವುದು ದಕ್ಷಿಣ ಕರ್ನಾಟಕಕ್ಕೆ ಸಂತಸ ತಂದಿದೆ. ಹಳೆ ಬೇರು, ಹೊಸ ಚಿಗುರಿಗೂ ಅವಕಾಶ ನೀಡಿದೆ. ಈ ರೀತಿ ನಿರ್ಣಯ ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದರು.
ಕಾಂಗ್ರೆಸ್ನಲ್ಲಿ ಆ ಪರಿಸ್ಥಿತಿ ಇಲ್ಲ. ಸಚಿವರೂ ಸೋಲುವ ಭಯದಲ್ಲಿ ಇದ್ದಾರೆ. ಟಿಕೆಟ್ ಸಿಗದ ಸಂಸದರು ನಮ್ಮ ಸಂಪರ್ಕದಲ್ಲಿದ್ದಾರೆ ಅನ್ನುವುದು ಡಿಸಿಎಂ ಡಿ ಕೆ ಶಿವಕುಮಾರ್ ಅವರ ಚಾಳಿಯಾಗಿದೆ. ಅವರ ಪಕ್ಷದಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳು ಸಿಗುತ್ತಿಲ್ಲ ಎಂದು ಟಾಂಗ್ ಕೊಟ್ಟರು.
ಇದನ್ನೂ ಓದಿ: ಪಕ್ಷ ಸೇರ್ಪಡೆಗೂ ಮುನ್ನವೇ ಬಿಜೆಪಿ ಟಿಕೆಟ್ ಪಡೆದ ಡಾ. ಸಿ ಎನ್ ಮಂಜುನಾಥ್