ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ''ರಾಜಕೀಯ ಎಂದರೆ ಅಸಮಾಧಾನಗಳು ಇರುತ್ತೆ. ಗೆಲ್ಲುವ ಸೀಟನ್ನು ಎಲ್ಲರೂ ಕೇಳುತ್ತಾರೆ. ಸೀಟು ಕೇಳುವಾಗ ಗೊಂದಲಗಳು ಹಾಗೇ ಆಗುತ್ತದೆ. ಇದಕ್ಕೂ ಚುನಾವಣೆಗೂ ಯಾವುದೇ ಸಂಬಂಧ ಇರುವುದಿಲ್ಲ. ನಾನು ಸ್ಪರ್ಧೆ ಮಾಡೇ ಮಾಡ್ತಿನಿ'' ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ನೆಟ್ಟಣ ಕಿದು ಸಿಪಿಸಿಆರ್‌ಐನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ''ನಮ್ಮ ಕೇಂದ್ರದ ಚುನಾವಣಾ ಮಂಡಳಿ ಯಾವ ನಿರ್ಧಾರ ಕೈಗೊಳ್ಳುತ್ತದೆ. ಅದಕ್ಕೆ ನಾವು ಬದ್ಧರಾಗಿದ್ದೇವೆ'' ಎಂದರು. ನೀವು ಸ್ಪರ್ಧೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ''ನಾನು ಸ್ಪರ್ಧೆ ಮಾಡಿಯೇ ಮಾಡುತ್ತೇನೆ'' ಎಂದು ತಿಳಿಸಿದರು.
ಮತ್ತೆ ಗೋ ಬ್ಯಾಕ್ ಶೋಭಾ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ 'ಗೋ ಬ್ಯಾಕ್ ಶೋಭಾ ಅಭಿಯಾನ' ಮುಂದುವರೆದಿದೆ. ಮೈಸೂರಿನಲ್ಲಿ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪುವ ವಿಚಾರವಾಗಿಯೂ ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪ ಮಾಡಲಾಗಿದೆ. ಶೋಭಾ ಕರಂದ್ಲಾಜೆಗೆ ಟಿಕೆಟ್ ಸಿಗುವುದಾದರೆ ಪ್ರತಾಪ್ ಸಿಂಹಗೆ ಯಾಕೆ ಇಲ್ಲ ಎಂಬ ಪೋಸ್ಟ್ಗಳು ವೈರಲ್ ಆಗುತ್ತಿವೆ.
ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಕ್ಷೇತ್ರ ಹಂಚಿಕೆ, ಅಭ್ಯರ್ಥಿಗಳ ಆಯ್ಕೆ : ಇಂದು ನವದೆಹಲಿಗೆ ಹೆಚ್ಡಿಕೆ?
ಇನ್ನು ಕೆಲದಿನಗಳಿಂದ ಶೋಭಾ ಕರಂದ್ಲಾಜೆ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಕೊಡಬಾರದು ಎಂದು ಇತ್ತೀಚೆಗೆ ಶಾಸಕ ಆರಗ ಜ್ಞಾನೇಂದ್ರ, ಮುಖಂಡ ಭಾನು ಪ್ರಕಾಶ್ ಸೇರಿ ಹಲವು ಮುಖಂಡರ ನೇತೃತ್ವದಲ್ಲಿ ನಡೆಯುತ್ತಿದ್ದ ಚುನಾವಣಾ ನಿರ್ವಹಣಾ ಸಮಿತಿ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ
ಈ ಬಾರಿ ಚಿಕ್ಕಮಗಳೂರು ಜಿಲ್ಲೆಯವರಿಗೇ ಟಿಕೆಟ್ ನೀಡಬೇಕು. ಸಂಸದೆ ಕಾರ್ಯಕರ್ತರ ಕೈಗೆ ಸಿಗುವುದಿಲ್ಲ, ಕಾರ್ಯಕರ್ತರ ಜೊತೆ ನಿಲ್ಲುವುದಿಲ್ಲ. ಚುನಾವಣೆಯ ಸಂದರ್ಭದಲ್ಲಿ ಮಾತ್ರ ಬರುತ್ತಾರೆ ಎಂದು ಆರೋಪಿಸಿದ್ದರು.