ಬೆಂಗಳೂರು: ಇಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಚಿವಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗಾಗಿ ಬೆಸ್ಕಾಂ ಹಾಗೂ ಸಚಿವಾಲಯ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ಜನವರಿ 17 ಹಾಗೂ 18 ರಂದು ವಿಧಾನಸೌಧದ ಆವರಣದಲ್ಲಿ ವಿಶೇಷ ಇವಿ ಮೇಳ ಆಯೋಜಿಸಲಾಗಿದೆ.
ಸಚಿವಾಲಯದ ನೌಕರರಿಗಾಗಿಯೇ ವಿಶೇಷ ಇವಿ ಮೇಳವನ್ನು ಇಂಧನ ಸಚಿವ ಕೆ.ಜೆ.ಜಾರ್ಜ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹಾಗೂ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗುತ್ತಿದೆ. ವಿಧಾನಸೌಧದ ಮೆಟ್ಟಿಲುಗಳ ಮುಂಭಾಗದಲ್ಲಿ "ಇವಿ ಮೇಳ - 2025"ಕ್ಕೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಶುಕ್ರವಾರ ಚಾಲನೆ ನೀಡಲಿದ್ದಾರೆ.
'ಪ್ರತಿಷ್ಠಿತ ಇವಿ ವಾಹನ ತಯಾರಕರು ಇವಿ ಮೇಳದಲ್ಲಿ ಭಾಗವಹಿಸುತ್ತಿದ್ದು, ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಿಶೇಷ ರಿಯಾಯಿತಿ ದರದಲ್ಲಿ ವಾಹನ ಮಾರಾಟ ಮಾಡಲಿದ್ದಾರೆ. ಸಚಿವಾಲಯದ ಸಿಬ್ಬಂದಿ ಹಾಗೂ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದ ವಾಯು ಮಾಲಿನ್ಯ ಹಾಗೂ ಏರುತ್ತಿರುವ ವಾಹನಗಳ ಇಂಧನ ದರ ಹೊರೆ ತಗ್ಗಿಸಲು ಇವಿ ವಾಹನಗಳ ಬಳಕೆಯೇ ಪರಿಹಾರ. ಇಲೆಕ್ಟ್ರಿಕ್ ವಾಹನಗಳಿಗೆ ರಸ್ತೆ ತೆರಿಗೆ ಸಹ ಇರುವುದಿಲ್ಲ. ಸಚಿವಾಲಯ ನೌಕರರಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವೂ ದೊರೆಯಲಿದೆ. ಈ ಮಾರಾಟ ಕೇವಲ ಮೇಳಕ್ಕೆ ಸೀಮಿತವಾಗಿರದೇ ಮುಂದಿನ ದಿನಗಳಲ್ಲೂ ವಿಶೇಷ ಮಾರಾಟ ಮುಂದುವರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಓದಿ: ಆಂಪಿಯರ್ ಮ್ಯಾಗ್ನಸ್ ನಿಯೋ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್, ರೇಟ್ ಕಡಿಮೆ, ರೇಂಜ್ ಜಾಸ್ತಿ