ಬೆಂಗಳೂರು : ರಾಯಚೂರು ನಗರದಲ್ಲಿ ಏಮ್ಸ್ ಸಂಸ್ಥೆ ಸ್ಥಾಪನೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಬೋಸರಾಜು ಅವರು ಕಲ್ಯಾಣ ಕರ್ನಾಟಕ ಭಾಗದ ಸಂಸದರು, ರಾಜ್ಯಸಭಾ ಸದಸ್ಯರು ಹಾಗೂ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ.
ಕೇಂದ್ರ ಸರ್ಕಾರದಿಂದ ಮಹತ್ವಾಕಾಂಕ್ಷೆ ಜಿಲ್ಲೆಯ (Aspiration District) ಹಾಗೂ 371(ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿದೆ. ನಂಜುಂಡಪ್ಪ ವರದಿಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಐಐಟಿ (IIT) ಯಂತಹ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವಂತೆ ಸಲಹೆ ನೀಡಲಾಗಿತ್ತು. ಆದರೆ, ಕಾರಣಾಂತರಗಳಿಂದ ಐಐಟಿ ಯನ್ನು ಧಾರವಾಡ ಜಿಲ್ಲೆಗೆ ಮಂಜೂರು ಮಾಡಲಾಯಿತು. ಆ ನಂತರದ ದಿನಗಳಲ್ಲಿ ಕರ್ನಾಟಕ ರಾಜ್ಯಕ್ಕೆ ಏಮ್ಸ್ ಮಂಜೂರು ಮಾಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತು ಎಂದು ಸಚಿವ ಬೋಸರಾಜು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಐಐಟಿ ಸ್ಥಾಪನೆ ಆದ ನಂತರ ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಂಸ್ಥೆಯಾಗಿರುವ ಏಮ್ಸ್ (AIIMS) ಅನ್ನು ರಾಯಚೂರು ಜಿಲ್ಲೆಗೆ ಮಂಜೂರು ಮಾಡಬೇಕು ಎನ್ನುವ ಬೇಡಿಕೆ ಹೆಚ್ಚಾಗಿದೆ. ಪಕ್ಷಾತೀತವಾಗಿ ರಾಯಚೂರು ನಗರದಲ್ಲಿ ಏಮ್ಸ್ ಅನ್ನ ಸ್ಥಾಪಿಸಬೇಕು ಎನ್ನುವ ಕೂಗಿನ ನಡುವೆ 629 ದಿನಗಳಿಂದ ಸಾರ್ವಜನಿಕರು ನಿರಂತರ ಹೋರಾಟ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಿರಂತರವಾಗಿ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ. 2023, ಜೂನ್ 17 ರಂದು ಮುಖ್ಯಮಂತ್ರಿಗಳು ಕೇಂದ್ರ ಆರೋಗ್ಯ ಮಂತ್ರಿಗಳಿಗೆ ಪತ್ರವನ್ನು ಬರೆದು ರಾಯಚೂರಿನಲ್ಲಿ ಏಮ್ಸ್ ಮಂಜೂರು ಮಾಡುವಂತೆ ಮನವಿ ಮಾಡಿದ್ದರು. ಅಲ್ಲದೇ, ರಾಜ್ಯ ಸರ್ಕಾರದಿಂದ ಅಗತ್ಯ ಸಹಕಾರ ನೀಡುವುದಾಗಿಯೂ ತಮ್ಮ ಪತ್ರದಲ್ಲಿ ತಿಳಿಸಿದ್ದರು.
ಇದಕ್ಕೆ ಉತ್ತರ ದೊರಕದ ಹಿನ್ನೆಲೆಯಲ್ಲಿ 07-09-2023 ರಂದು ಮತ್ತೊಂದು ಪತ್ರವನ್ನು ಬರೆದು ಮನವಿಯನ್ನು ಮಾಡಿದ್ದರು. 22-08-2023 ರಂದು ರಾಯಚೂರು ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು, ಹೋರಾಟ ಸಮಿತಿಯ ಸದಸ್ಯರನ್ನು ಒಳಗೊಂಡ ತಂಡ ದೆಹಲಿಗೆ ಭೇಟಿ ನೀಡಿ ಆರೋಗ್ಯ ಸಚಿವರನ್ನು ಭೇಟಿ ಮಾಡಿ, ರಾಜ್ಯ ಸರ್ಕಾರದ ಅಧಿಕೃತ ಒಪ್ಪಿಗೆಯನ್ನು ಸಲ್ಲಿಸಿತು.
ನಿರ್ಮಲಾ ಸೀತಾರಾಮನ್ಗೆ ಸಿಎಂ ಪತ್ರ : ಈ ತಂಡಕ್ಕೆ ಆರೋಗ್ಯ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ, ರಾಜ್ಯ ಸರ್ಕಾರದ ಆಶಯದಂತೆಯೇ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಕೇಂದ್ರ ಸರ್ಕಾರದಿಂದ ಯಾವುದೇ ರೀತಿಯ ಅಧಿಕೃತ ಸಂವಹನ ಸ್ವೀಕಾರವಾಗಿಲ್ಲ. ಈ ಹಿನ್ನೆಲೆಯಲ್ಲಿ 29-01-2024 ರಂದು ಮತ್ತೊಮ್ಮೆ ಮುಖ್ಯಮಂತ್ರಿಗಳು ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು 2024-25 ರ ಕೇಂದ್ರ ಬಜೆಟ್ನಲ್ಲಿ ಘೋಷಣೆ ಮಾಡುವಂತೆ ಕೋರಿದ್ದರು.
ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕದ ಸಂಸದರು ಕೇಂದ್ರ ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ಹೇರುವ ಅವಶ್ಯಕತೆಯಿದೆ. ಕೇಂದ್ರ ಸರ್ಕಾರದ ವಿತ್ತ ಸಚಿವರು ಹಾಗೂ ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಿಕೊಳ್ಳುವ ಮೂಲಕ ರಾಯಚೂರು ನಗರಕ್ಕೆ ಏಮ್ಸ್ ಮಂಜೂರು ಆಗುವಂತೆ ಮಾಡುವ ನಿಟ್ಟಿನಲ್ಲಿ ಸಹಕರಿಸಿ ಎಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ : ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ನಿರ್ಮಲಾ ಸೀತಾರಾಮನ್ಗೆ ಸಿಎಂ ಪತ್ರ