ಬೆಂಗಳೂರು: ರಾಜ್ಯಾದ್ಯಂತ 2500 ಎಲೆಕ್ಟ್ರಾನಿಕ್ ವೆಹಿಕಲ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ಬಜೆಟ್ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಡೀಸೆಲ್ ಚಾಲಿತ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ಎಲೆಕ್ಟ್ರಾನಿಕ್ ವೆಹಿಕಲ್ಗಳ ಉತ್ತೇಜನಕ್ಕೆ ಅಗತ್ಯವಾಗಿರುವ ಚಾರ್ಜಿಂಗ್ ಕೇಂದ್ರಗಳನ್ನು ರಾಜ್ಯದ ವಿವಿಧೆಡೆ ಆರಂಭಿಸಲು ಸರ್ಕಾರ ಯೋಜನೆ ರೂಪಿಸಿದೆ. ಅದರಂತೆ ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ 2500 ಇವಿ ಚಾರ್ಜಿಂಗ್ ಸೆಂಟರ್ಗಳನ್ನು ತೆರೆಯಲು ಬಜೆಟ್ನಲ್ಲಿ ಘೋಷಿಸಲಾಗಿದೆ. ಇದಲ್ಲದೇ, ವಿದ್ಯುತ್ ಸರಬರಾಜು ಕಂಪನಿಗಳ ಮೂಲಕ 35 ಕೋಟಿ ರೂಪಾಯಿ ವೆಚ್ಚದಲ್ಲಿ 100 ಚಾರ್ಜಿಂಗ್ ಕೇಂದ್ರಗಳನ್ನು ಪ್ರತ್ಯೇಕವಾಗಿ ಆರಂಭಿಸಲು ಸರ್ಕಾರ ಚಿಂತಿಸಿದೆ.
ಕೃಷಿ ಪಂಪ್ಸೆಟ್ಗಳಿಗೆ ಸರಬರಾಜು ಮಾಡುವ ವಿದ್ಯುತ್ ಪ್ರಮಾಣ ಹೆಚ್ಚಳವಾಗಿರುವ ಕಾರಣ, ಕೃಷಿ ಪಂಪ್ಸೆಟ್ ಫೀಡರ್ ಸೌರೀಕರಣ ಯೋಜನೆ ಹಂತ-2 ಅನ್ನು ವಿಸ್ತರಿಸಲಾಗಿದೆ. ಅದರಂತೆ 1192 ಮೆಗಾ ವ್ಯಾಟ್ ವಿದ್ಯುತ್ ಅನ್ನು ಸೌರ ಯೋಜನೆಯ ಮೂಲಕ ಉತ್ಪಾದನೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ 4.30 ಲಕ್ಷ ಐಪಿ ಸೆಟ್ಗಳನ್ನು ಸೌರೀಕರಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
10 ಯೂನಿಟ್ ಹೆಚ್ಚುವರಿ ವಿದ್ಯುತ್: ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಕುಟೀರ ಜ್ಯೋತಿ, ಅಮೃತ ಜ್ಯೋತಿ ಹಾಗೂ ಭಾಗ್ಯ ಜ್ಯೋತಿ ಸೇರ್ಪಡೆಗೊಳಿಸಲಾಗಿದ್ದು, 48 ಯೂನಿಟ್ ಒಳಗಿನ ಸರಾಸರಿ ಬಳಕೆಗೆ ಶೇ.10 ರಷ್ಟು ಹೆಚ್ಚುವರಿ ವಿದ್ಯುತ್ ಬದಲಿಗೆ 10 ಯೂನಿಟ್ಗಳಷ್ಟು ಹೆಚ್ಚುವರಿ ವಿದ್ಯುತ್ ಒದಗಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಗೃಹ ವಿದ್ಯುತ್ ಬಳಕೆದಾರರಿಗೆ 200 ಯೂನಿಟ್ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಗ್ಯಾರಂಟಿ ಯೋಜನೆಯನ್ನ ಜುಲೈ 1ರಿಂದ ಅನ್ವಯವಾಗುವಂತೆ 1.65 ಕೋಟಿ ಗ್ರಾಹಕರು ನೋಂದಾಯಿಸಿದ್ದು ಅಂದಾಜು 5 ಕೋಟಿಯಷ್ಟು ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ.
ಮುಂದಿನ ಏಳು ವರ್ಷಗಳಲ್ಲಿ ಇಂಧನ ವಲಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವ ಮೂಲಕ ವಿದ್ಯುತ್ ಉತ್ಪಾದನೆಯ ಸ್ಥಾಪಿತ ಸಾಮರ್ಥ್ಯವನ್ನ 32,000 ಮೆಗಾವ್ಯಾಟ್ನಿಂದ 60,000 ಮೆಗಾವ್ಯಾಟ್ಗಳಿಗೆ ಹೆಚ್ಚಿಸಲಾಗುವುದು.
ಸೋಲಾರ್ ಪಂಪ್ಗಳ ಸ್ಥಾಪನೆ: ರೈತರನ್ನ ಸ್ವಾವಲಂಗಳನ್ನಾಗಿ PM-KUSUM Component -B ಯೋಜನೆಯಡಿ 1,174 ಕೋಟಿ ರೂ.ಅಂದಾಜು ವೆಚ್ಚದಲ್ಲಿ 40,000 ಜಾಲಮುಕ್ತ (ಆಫ್ ಗ್ರೀಡ್) ಸೋಲಾರ್ ಪಂಪ್ಸೆಟ್ಗಳನ್ನು ಸ್ಥಾಪಿಸಲಾಗುತ್ತಿದೆ. ಇದಕ್ಕೆ ಕೇಂದ್ರದ ಪಾಲು ಶೇ.30ರಷ್ಟಿದ್ದು ರಾಜ್ಯ ಸರ್ಕಾರದಿಂದ ನೀಡುವ ಸಹಾಯಧನವನ್ನ ಶೇ.30ರಿಂದ ಶೇ.50ಕ್ಕೆ ಹೆಚ್ಚಿಸಲಾಗಿದೆ. ಸೋಲಾರ್ ಪಂಪ್ಗಳ ಸ್ಥಾಪನೆಗೆ ನೀಡಲಾಗುತ್ತಿರುವ ಸಹಾಯಧನ 30 ರಿಂದ 50ಕ್ಕೆ ಹೆಚ್ಚಿಸಲಾಗಿದೆ.
ಕೃಷಿ ಪಂಪ್ ಸೆಟ್ ಫೀಡರ್ ಸೌರಿಕರಣ ಯೋಜನೆಯ ಎರಡನೇ ಹಂತದಲ್ಲಿ 1192 ಮೆಗಾವ್ಯಾಟ್ ಸೌರ ಯೋಜನೆ ಅನುಷ್ಠಾನಕ್ಕಾಗಿ 4.3 ಲಕ್ಷ ಐಪಿ ಸೆಟ್ ಸೌರೀಕರಣಕ್ಕೆ ಒತ್ತು ನೀಡಲು ಮುಂದಾಗಿದೆ. ಎಸ್ಕಾಂ ವ್ಯಾಪ್ತಿಯ ಆಯ್ದ ಹಿಂದುಳಿದ ಗ್ರಾಮದಲ್ಲಿ ಪ್ರಾಯೋಗಿಕವಾಗಿ ಮೈಕ್ರೋಗ್ರೀಡ್ ವ್ಯವಸ್ಥೆ ಮೂಲಕ ಶೇಖರಣೆ ಹೊಂದಿದ 500 ಕಿ.ವ್ಯಾ ಸಾಮರ್ಥ್ಯದ ಸೌರ ಘಟಕ ಸ್ಥಾಪನೆ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು ನಗರ ಸುತ್ತಮುತ್ತಲಿನ ವಿದ್ಯುತ್ ಬೇಡಿಕೆ ನೀಗಿಸಲು ಸಾರ್ವಜನಿಕ- ಖಾಸಗಿ ಸಹಭಾಗಿತ್ವದಡಿ (ಪಿಪಿಪಿ) ಸಬ್ ಸ್ಟೇಷನ್ಗಳ ಉನ್ನತೀಕರಣ, ಪಿಪಿಪಿ ಸಹಭಾಗಿತ್ವದಲ್ಲಿ 2500 ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆ, ವಿದ್ಯುತ್ ಸರಬರಾಜು ಕಂಪನಿಗಳ ಮೂಲಕ 35 ಕೋಟಿ ವೆಚ್ಚದಲ್ಲಿ 100 ಚಾರ್ಜಿಂಗ್ ಕೇಂದ್ರ ಸ್ಥಾಪಿಸುವುದಾಗಿ ಆಯವ್ಯಯದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿದೆ ಬೇಡಿಕೆ.. ಆದರೆ ಇನ್ನೂ ಸಿದ್ಧವಾಗಿಲ್ಲ ಮಾರ್ಗಸೂಚಿ!