ಬೆಂಗಳೂರು: ಅಮಿತ್ ಶಾರನ್ನು ಭೇಟಿಯಾಗಲು ದೆಹಲಿಗೆ ತೆರಳಿದ್ದ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪಗೆ ನಿರಾಸೆಯಾಗಿದೆ. ಕೇಂದ್ರ ಗೃಹ ಸಚಿವರ ಭೇಟಿಗೆ ಅವಕಾಶ ಸಿಗದೇ ರಾಜ್ಯಕ್ಕೆ ಹಿಂತಿರುಗಿದ್ದಾರೆ.
ಪಕ್ಷದಿಂದ ಟಿಕೆಟ್ ಸಿಗದ ಕಾರಣ ಅಸಮಾಧಾನಗೊಂಡು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಶಿವಮೊಗ್ಗದಿಂದ ಸ್ಪರ್ಧಿಸುತ್ತಿರುವ ಈಶ್ವರಪ್ಪ ಅವರನ್ನು ಸಮಾಧಾನ ಪಡಿಸಲು ಅಮಿತ್ ಶಾ ದೆಹಲಿಗೆ ಬರುವಂತೆ ಕರೆ ನೀಡಿದ್ದರು. ಈ ಆದೇಶದ ಮೇರೆಗೆ ದೆಹಲಿಗೆ ತೆರಳಿದ್ದ ಅವರಿಗೆ ಶಾ ಅವರ ಭೇಟಿಗೆ ಅವಕಾಶ ಸಿಗದ ಕಾರಣ, ದೆಹಲಿಯಿಂದ ವಾಪಸ್ ಆಗಿದ್ದಾರೆ.
ಈ ಬಗ್ಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿರುವ ಈಶ್ವರಪ್ಪ, ಅಮಿತ್ ಶಾ ದೆಹಲಿಯಲ್ಲಿ ಬಂದು ಭೇಟಿಯಾಗಿ ಎಂದು ಕರೆದಿದ್ದರು. ಆದರೆ ಭೇಟಿಯಾಗಿಲ್ಲ. ಕರೆದು ಈ ರೀತಿ ಅವಮಾನ ಮಾಡಿದ್ದಾರೆ ಎಂದು ನಾನು ಭಾವಿಸಲ್ಲ. ಭೇಟಿಗೆ ಅವರು ಸಿಗದೇ ಇದ್ದದ್ದು ನನಗೆ ವರವಾಗಿದೆ. ಭೇಟಿಯಾಗಿ ಸ್ಪರ್ದೆ ವಾಪಸ್ ಪಡೆಯಿರಿ ಎಂದಿದ್ದರೆ ನನಗೆ ಹಿನ್ನಡೆ ಆಗ್ತಿತ್ತು. ಈಗ ಪರೋಕ್ಷವಾಗಿ ನೀವು ಸ್ಪರ್ಧೆ ಮಾಡಿ ಎಂಬ ಸಂದೇಶ ಕೊಟ್ಟಂಗಿದೆ. ಚುನಾವಣೆಯಲ್ಲಿ ಗೆದ್ದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ಸೂಚಿಸುತ್ತೇನೆ. ರಾಜ್ಯದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಲಿ, ನಾನು ಶಿವಮೊಗ್ಗದಲ್ಲಿ ಗೆದ್ದು ಹಿಂದುತ್ವದ ರಕ್ಷಣೆಗಾಗಿ ಮೋದಿ ಕೈ ಬಲಪಡಿಸುತ್ತೇನೆ. ರಾಜ್ಯದಲ್ಲಿ ಯಡಿಯೂರಪ್ಪ ಕುಟುಂಬ ರಾಜಕಾರಣ ಕೊನೆಯಾಗಬೇಕು.
ರಾಜ್ಯ ಬಿಜೆಪಿಯ ಕುಟುಂಬ ರಾಜಕಾರಣವನ್ನು ಪ್ರಶ್ನೆ ಮಾಡಿದ್ದೆ. ಹಾಗಾಗಿ ನಮಗೆ ಲೋಕಸಭೆ ಟಿಕೆಟ್ ಸಿಕ್ಕಿಲ್ಲ. ಪಕ್ಷೇತರವಾಗಿ ನಿಲ್ಲುವ ತಮ್ಮ ತೀರ್ಮಾನಕ್ಕೆ ಶಿವಮೊಗ್ಗದಲ್ಲಿ ಭಾರಿ ಬೆಂಬಲ ವ್ಯಕ್ತವಾಗ್ತಿದೆ. ರಾಯಣ್ಣ ಬ್ರಿಗೇಡ್ ಇದ್ದಿದ್ದರೆ ಇವತ್ತಿನ ದಿನ ದೊಡ್ಡಮಟ್ಟದ ಶಕ್ತಿ ಇರ್ತಿತ್ತು ಎಂದು ಹೇಳಿದರು.
ಇದನ್ನೂ ಓದಿ: ಮಂಡ್ಯದಲ್ಲಿ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ: ಯಡಿಯೂರಪ್ಪ, ಯದುವೀರ್ ಒಡೆಯರ್ ಸಾಥ್ - HD Kumaraswamy