ಬೆಂಗಳೂರು: ಮೀನುಗಾರಿಕೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ದೃಷ್ಟಿಯಿಂದ ಮುಂದಿನ ವರ್ಷಗಳಲ್ಲಿ 3,000 ಕೋಟಿ ರೂ.ಗಳಷ್ಟು ಬೃಹತ್ ಗಾತ್ರದ ವಿವಿಧ ಯೋಜನೆಗಳ ಗುರಿ ಹಾಕಿಕೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
15ನೇ 2024-25ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ ಅವರು, ಹೊನ್ನಾವರ ತಾಲೂಕಿನ ಮಂಕಿ, ಕಾಸರಕೋಡದಲ್ಲಿ ಮೀನುಗಾರಿಕೆ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಲಾಗುವುದು. ಭದ್ರಾವತಿಯಲ್ಲಿ ಅತ್ಯಾಧುನಿಕ ಮೀನು ಮಾರುಕಟ್ಟೆ ಸ್ಥಾಪನೆ, ಅಕ್ವಾ ಪಾರ್ಕ್‌ಗಳ ಸ್ಥಾಪನೆ, ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಸುಸಜ್ಜಿತ ಮೀನುಗಾರಿಕೆ ಹೊರ ಬಂದರು ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ವಿಜಯಪುರದ ಆಲಮಟ್ಟಿಯಲ್ಲಿ ಒಳನಾಡು ಮೀನುಗಾರಿಕೆ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಸಿಎಂ ಘೋಷಣೆ ಮಾಡಿದರು.
7 ಕೋಟಿ ರೂ. ವೆಚ್ಚದಲ್ಲಿ ಸಮುದ್ರ ಆಂಬ್ಯುಲೆನ್ಸ್: ಮತ್ಸ್ಯ ಆಶಾಕಿರಣ ಯೋಜನೆಯಡಿ ಮೀನುಗಾರಿಕೆ ನಿಷೇಧಾವಧಿಯಲ್ಲಿ ಕರಾವಳಿಯ ಮೀನುಗಾರರಿಗೆ ನೀಡುತ್ತಿರುವ ಪರಿಹಾರ ಮೊತ್ತದ ರಾಜ್ಯದ ಪಾಲನ್ನು 1,500 ರೂ.ಗಳಿಂದ 3,000 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಸಮುದ್ರ ಮೀನುಗಾರಿಕೆಗೆ ತೆರಳಿದವರು ಅಪಘಾತ / ಅನಾರೋಗ್ಯಕ್ಕೆ ಒಳಗಾದರೆ, ತ್ವರಿತವಾಗಿ ದಡಕ್ಕೆ ತರಲು 7 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದಲ್ಲೇ ಪ್ರಥಮ ಸಮುದ್ರ ಆಂಬ್ಯುಲೆನ್ಸ್ ಖರೀದಿ ಮಾಡಲಾಗುವುದು.
ಜೊತೆಗೆ 2024-25ನೇ ಸಾಲಿನಲ್ಲಿ 10,000 ವಸತಿರಹಿತ ಮೀನುಗಾರರಿಗೆ ರಾಜ್ಯ ಸರ್ಕಾರದ ವಿವಿಧ ವಸತಿ ಯೋಜನೆಗಳಡಿಯಲ್ಲಿ ಮನೆಗಳನ್ನು ನಿರ್ಮಿಸಲು ಸಹಾಯಧನ ಒದಗಿಸಲಾಗುವುದು. ನಬಾರ್ಡ್ ಸಹಯೋಗದಲ್ಲಿ 20 ಕೋಟಿ ರೂ ವೆಚ್ಚದಲ್ಲಿ ರಾಜ್ಯದಲ್ಲಿನ 16 ಮೀನು ಮರಿ ಉತ್ಪಾದನಾ ಕೇಂದ್ರಗಳ ಉನ್ನತೀಕರಣಕ್ಕೆ ಆದ್ಯತೆ ನೀಡಲಾಗಿದೆ. ಚಿತ್ರದುರ್ಗ, ಹೊಳಲ್ಕೆರೆ ಮತ್ತು ಹೊಸದುರ್ಗ ತಾಲೂಕುಗಳ ಗಣಿಬಾಧಿತ ಪ್ರದೇಶದಲ್ಲಿ ಮೀನುಗಾರಿಕೆ ಕೈಗೊಳ್ಳಲು 6 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಇದನ್ನೂ ಓದಿ: ಮದ್ಯಪ್ರಿಯರಿಗೆ ಬಿಗ್ ಶಾಕ್ ನೀಡಿದ ರಾಜ್ಯ ಸರ್ಕಾರ