ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಿತ್ತು ಹೋದ ಹಿನ್ನೆಲೆ ತಾತ್ಕಾಲಿಕ ಕ್ರಸ್ಟ್ ಗೇಟ್ ಅಳವಡಿಕೆಗೆ ತಜ್ಞರು ಸಲಹೆ ನೀಡಿದ್ದರು. ಅದರಂತೆ ಬಳ್ಳಾರಿಯ ಜಿಂದಾಲ್ನಿಂದ ಇಂದು ಬೆಳಗ್ಗೆ ಕ್ರಸ್ಟ್ ಗೇಟ್ನ ಎಲಿಮೆಂಟ್ಸ್ಅನ್ನು ಜಲಾಶಯದ ಆವರಣಕ್ಕೆ ತರಲಾಗಿದೆ.
ಕೊಪ್ಪಳ ಜಿಲ್ಲೆ ಹೊಸಳ್ಳಿಯ ಹಿಂದೂಸ್ಥಾನ ಇಂಜನಿಯರಿಂಗ್ ಮತ್ತು ಹೊಸಪೇಟೆಯ ನಾರಾಯಣ ಇಂಜನಿಯರಿಂಗ್ ಮತ್ತು ಜಿಂದಾಲ್ ಕಡೆಯಿಂದ ತಾತ್ಕಾಲಿಕ ಕ್ರಸ್ಟ್ ಗೇಟ್ ತಯಾರಿಸಲು ಯೋಜನೆ ರೂಪಿಸಲಾಗಿತ್ತು. ಸದ್ಯ ಜಿಂದಾಲ್ನ ಒಂದು ಕಡೆಯಿಂದ ಪ್ಲೇಟ್ಗಳನ್ನು ಇಂದು ತರಲಾಗಿದೆ.
ಪೊಲೀಸ್ ಭದ್ರತೆಯಲ್ಲಿ ಆಗಮಿಸಿದ ಗೇಟ್ಗಳು: ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಪೋಲಾಗುವುದನ್ನು ತಡೆಯಲು ಅಹೋರಾತ್ರಿ ಗೇಟ್ ನಿರ್ಮಾಣ ಕಾರ್ಯ ನಡೆದಿದೆ. ಬುಧವಾರ ರಾತ್ರಿಯೇ ಗೇಟ್ಗಳ ಎಲಿಮೆಂಟ್ಸ್ ಬರಬೇಕಿತ್ತು. ಆದರೆ, ಮಳೆಯ ಕಾರಣದಿಂದ ತರಲಾಗಲಿಲ್ಲ. ಇಂದು ಬೆಳಗ್ಗೆ ಪೊಲೀಸ್ ಭದ್ರತೆಯಲ್ಲಿ ಜೀರೋ ಟ್ರಾಫಿಕ್ನಲ್ಲಿ ಗೇಟ್ಗಳ ಎಲಿಮೆಂಟ್ಸ್ಅನ್ನು ತರಲಾಗಿದೆ.
77 ಟಿಎಂಸಿಗೆ ಇಳಿದ ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹ: ತುಂಗಭದ್ರಾ ಜಲಾಶಯ ಒಟ್ಟು 105.788 ಟಿಸಿಎಂ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಕ್ರಸ್ಟ್ ಗೇಟ್ ಕಿತ್ತೋಗಿರುವ ಹಿನ್ನೆಲೆ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ. ಇಲ್ಲಿಯವರೆಗೂ ಜಲಾಶಯದಿಂದ ಸುಮಾರು 36 ಟಿಎಂಸಿ ನೀರು ಹೊರಬಿಡಲಾಗಿದೆ. ಜಲಾಶಯಕ್ಕೆ ಈಗ 36,143 ಕ್ಯೂಸೆಕ್ ನೀರು ಒಳಹರಿದು ಬರುತ್ತಿದೆ. ಜಲಾಶಯದಿಂದ ಈಗ ನದಿಗೆ 1,00,245 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.
ಇದನ್ನೂ ಓದಿ: ಟಿಬಿ ಡ್ಯಾಂಗೆ ಸ್ಟಾಪ್ ಲಾಗ್ ಗೇಟ್ ನಿರ್ಮಾಣ; ಗುರುವಾರ ನೀರಿಗಿಳಿಸುವ ಕಾರ್ಯ - TB Dam Crest Gate