ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ತೆರೆಮೆರೆಯಲ್ಲಿ ನಾನಾ ಕಸರತ್ತು ನಡೆಸುತ್ತಿವೆ. ಮತದಾರರಿಗೆ ಆಮಿಷವೊಡ್ಡಲು ದವಸ - ಧಾನ್ಯಗಳು ಹಂಚಿಕೆ ಹಾಗೂ ಸೂಕ್ತ ದಾಖಲೆ ಇಲ್ಲದ ಲಕ್ಷಾಂತರ ಮೌಲ್ಯದ ಹಣವನ್ನು ಚುನಾವಣಾ ಅಧಿಕಾರಿಗಳು ಸೀಜ್ ಮಾಡುತ್ತಿದ್ದಾರೆ.
![ಅಧಿಕಾರಿಗಳ ಪರಿಶೀಲನೆ](https://etvbharatimages.akamaized.net/etvbharat/prod-images/21-03-2024/kn-cnr-02-checkpost-bisilu-av-ka10038_21032024105125_2103f_1710998485_741.jpg)
ನಗರದ 104 ಕಡೆಗಳಲ್ಲಿ ನಾಕಾಬಂದಿ ಹಾಕಿದ ಚುನಾವಣಾ ಪ್ಲೇಯಿಂಗ್ ಸ್ವ್ಕಾಡ್ ತಂಡ, ಪೊಲೀಸರ ನೆರವಿನಿಂದ ಎಲ್ಲೆಡೆ ಹದ್ದಿನ ಕಣ್ಗಾವಲಿರಿಸಿದೆ. ಕಳೆದ ಎರಡು ದಿನಗಳ ಹಿಂದೆ 10 ಕೆ.ಜಿ. ಇರುವ 940 ಭಾರತ್ ಅಕ್ಕಿಯ ಚೀಲವನ್ನ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಇದೀಗ ಬಿಟಿಎಂ ವಿಧಾನಸಭಾ ಕ್ಷೇತ್ರದ ಗೋದಾಮುವೊಂದರಲ್ಲಿ ಸಂಗ್ರಹಿಸಲಾಗಿದ್ದ 1.84 ಕೋಟಿ ಮೌಲ್ಯದ 1681 ಎಲ್‌ಇಡಿ ಟಿವಿಗಳನ್ನು ಸೀಜ್ ಮಾಡಲಾಗಿದೆ. ಯಾವ ಉದ್ದೇಶಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಟಿವಿ ಸಂಗ್ರಹಿಸಲಾಗಿತ್ತು, ಯಾರು ಸಂಗ್ರಹಿಸಿರುವ ಬಗ್ಗೆ ಚುನಾವಣಾ ಅಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ತಿಳಿದುಬಂದಿದೆ.
![ಅಧಿಕಾರಿಗಳ ಪರಿಶೀಲನೆ](https://etvbharatimages.akamaized.net/etvbharat/prod-images/21-03-2024/kn-cnr-02-checkpost-bisilu-av-ka10038_21032024105125_2103f_1710998485_191.jpg)
ಗಡಿ ಚೆಕ್ ಪೋಸ್ಟ್ಗಳಲ್ಲಿ ಅಲರ್ಟ್: ಅಕ್ರಮ ನಡೆಯದಂತೆ ಚಾಮರಾಜನಗರದಲ್ಲಿಯೂ ಅಧಿಕಾರಿಗಳು ಅಲರ್ಟ್ ಆಗಿದ್ದು, ಗಡಿ ಚೆಕ್ ಪೋಸ್ಟ್ಗಳಲ್ಲಿ ಲಕ್ಷಾಂತರ ಹಣ ವಶಪಡಿಸಿಕೊಂಡಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಮದ್ದೂರು ಚೆಕ್ ಪೋಸ್ಟ್ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಸುಮಾರು 3 ಲಕ್ಷಕ್ಕೂ ಅಧಿಕ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
![ಅಧಿಕಾರಿಗಳ ಪರಿಶೀಲನೆ](https://etvbharatimages.akamaized.net/etvbharat/prod-images/21-03-2024/kn-bng-07-led-tv-size-7202806_21032024185142_2103f_1711027302_619.jpg)
ಲೋಕಸಭಾ ಚುನಾವಣೆಯಲ್ಲಿ ಹಿನ್ನೆಲೆ ತಾಲೂಕಿನ ಕೇರಳ ಹಾಗೂ ತಮಿಳುನಾಡು ಗಡಿ ಚೆಕ್ ಪೋಸ್ಟ್ಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದ್ದು, ಪ್ರತಿಯೊಂದು ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಈ ಮಧ್ಯೆ ಗುರುವಾರ ಖುದ್ದು ತಪಾಸಣೆಗೆ ಇಳಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್ ಮತ್ತು ತಂಡ, ಕೇರಳದಿಂದ ಗುಂಡ್ಲುಪೇಟೆ ಕಡೆಗೆ ಬರುತ್ತಿದ್ದ ಐಷರ್ ವಾಹನ ಚಾಲಕ ಹ್ಯಾರಿಸ್ನಿಂದ 97 ಸಾವಿರ ರೂ., ಪಿಕ್ ಅಪ್ ಚಾಲಕ ಜಂಶೀರ್ನಿಂದ 1,17 ಲಕ್ಷ ರೂ., ಹಾಗೂ ಕಾರು ಚಾಲಕ ಜೋಶ್ ಕೈನಾಂಡಿ ಅವರಿಂದ 1 ಲಕ್ಷ ರೂ. ಸೇರಿದಂತೆ ಒಟ್ಟು 3.14 ಲಕ್ಷ ರೂ. ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ. ತಮಿಳುನಾಡಿನ ಕೆಕ್ಕನಹಳ್ಳ ಚೆಕ್ ಪೋಸ್ಟ್ ಮಾರ್ಗವಾಗಿ ರಾಜ್ಯ ಪ್ರವೇಶಿಸುವ ಎಲ್ಲ ವಾಹನಗಳನ್ನು ಪೊಲೀಸರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ತಪಾಸಣೆ ನಡೆಸುತ್ತಿದ್ದು, ವಾಹನ ಹಾಗೂ ಮೊಬೈಲ್ ನಂಬರ್ ಪಡೆದುಕೊಳ್ಳಲಾಗುತ್ತಿದೆ.
![ಅಧಿಕಾರಿಗಳ ಪರಿಶೀಲನೆ](https://etvbharatimages.akamaized.net/etvbharat/prod-images/21-03-2024/kn-cnr-03-election-operation-av-ka10038_21032024182619_2103f_1711025779_1101.jpg)
ಪಾಲಾರ್ನಲ್ಲಿ 1.28 ಲಕ್ಷ ಹಣ ವಶ: ಕರ್ನಾಟಕ ಹಾಗೂ ತಮಿಳುನಾಡು ಚೆಕ್ ಪೋಸ್ಟ್ ಆದ ಹನೂರು ತಾಲೂಕಿನ ಪಾಲರ್ ಚೆಕ್ ಪೋಸ್ಟ್ನಲ್ಲಿ ಪಿಕಪ್ ವಾಹನವೊಂದರಲ್ಲಿ ದಾಖಲೆ ಇಲ್ಲದೇ 1,28,400 ರೂ. ನಗದನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಕೂಡ ಗುರುವಾರದಂದು ಜರುಗಿದೆ. ತಮಿಳುನಾಡು ಗಡಿಯಂಚಿನಲ್ಲಿ ತೆರೆಯಲಾಗಿರುವ ಅಂತರ ರಾಜ್ಯ ಚೆಕ್ ಪೋಸ್ಟ್ನಲ್ಲಿ ಚುನಾವಣೆ ಅಧಿಕಾರಿಗಳು ವಾಹನಗಳನ್ನು ತಪಾಸಣೆ ಮಾಡುವ ಸಂದರ್ಭದಲ್ಲಿ ಮೆಟ್ಟೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಪೀಕಪ್ ವಾಹನವನ್ನು ತಪಾಸಣೆಗೆ ಒಳಪಡಿಸಿದಾಗ ನಗದು ಇರುವುದು ಕಂಡು ಬಂದಿರುತ್ತದೆ. ಹಣದ ಬಗ್ಗೆ ವಿಚಾರಿಸಿದಾಗ ಸ್ಪಷ್ಟ ಮತ್ತು ಸಮಂಜಸ ಉತ್ತರವನ್ನು ನೀಡದೇ ಇರುವಾಗ ಪೊಲೀಸ್ ಸಿಬ್ಬಂದಿ ಹಾಗೂ ಚುನಾವಣೆ ಅಧಿಕಾರಿಗಳ ತಂಡ ಹಣವನ್ನು ಅಮಾನತುಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
![ಅಧಿಕಾರಿಗಳ ಪರಿಶೀಲನೆ](https://etvbharatimages.akamaized.net/etvbharat/prod-images/21-03-2024/kn-cnr-03-election-operation-av-ka10038_21032024182619_2103f_1711025779_214.jpg)
ಅಬಕಾರಿ ಅಧಿಕಾರಿಗಳ ವಿಶೇಷ ಕಾರ್ಯಾಚರಣೆ: ಚುನಾವಣೆ ಹಿನ್ನೆಲೆ ಅಕ್ರಮ ಮದ್ಯ ಮಾರಾಟ ತಡೆಯಲು ಅಬಕಾರಿ ಪೊಲೀಸರು ನಗರದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡರು. ವಲಯ ಹಾಗೂ ಜಿಲ್ಲಾ ಅಬಕಾರಿ ಸಿಬ್ಬಂದಿ ಜಂಟಿಯಾಗಿ ನಗರದ ವಿವಿಧ ಮನೆಗಳಲ್ಲಿ ಅಕ್ರಮ ಮದ್ಯ ಸಂಗ್ರಹ ಕುರಿತು ದೂರು ಬಂದ ಹಿನ್ನೆಲೆ ಕಾರ್ಯಾಚರಣೆ ಕೈಗೊಂಡು ಹನುಮಂತ, ಲಕ್ಷ್ಮಿ, ಕಮಲಿ, ರಂಗಸ್ವಾಮಿ, ನಂಜಪ್ಪ ಎಂಬವರ ಮನೆ, ಪೆಟ್ಟಿಗೆ ಅಂಗಡಿಯ ಮೇಲೆ ದಾಳಿ ನಡೆಸಿದರು. ಮನೆ ಹಾಗೂ ಅಂಗಡಿ ಮುಂಭಾಗ ಗ್ರಾಹಕರಿಗೆ ಮದ್ಯಪಾನ ಮಾಡಲು ಅವಕಾಶ ನೀಡಿರುವುದು ಕಂಡು ಬಂದಿದ್ದರಿಂದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈರ್ವ ಮಹಿಳೆಯನ್ನು ಬಂಧಿಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದಾರೆ.
![ಅಧಿಕಾರಿಗಳ ಪರಿಶೀಲನೆ](https://etvbharatimages.akamaized.net/etvbharat/prod-images/21-03-2024/kn-cnr-03-election-operation-av-ka10038_21032024182619_2103f_1711025779_598.jpg)
ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಕುರುಡು ಕಾಂಚಾಣ: 24 ಗಂಟೆಯಲ್ಲಿ ₹15 ಕೋಟಿ ಮೌಲ್ಯದ ಮದ್ಯ, ನಗದು ಜಪ್ತಿ